ಕೊಪ್ಪ: ೧೦೮ ಆಂಬ್ಯುಲೆನ್ಸ್‌ ಸೇವೆಗೆ ನೂರೆಂಟು ವಿಘ್ನ

| Published : May 26 2024, 01:31 AM IST

ಸಾರಾಂಶ

ಕೊಪ್ಪ, ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಚಿತ ಸೇವೆ ಒದಗಿಸುವ ೧೦೮ ಅಂಬ್ಯುಲೆನ್ಸ್ ಜೀವ ರಕ್ಷಕ ವಾಹನಕ್ಕೆ ದಿನನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ತುರ್ತು ಸಂದರ್ಭದಲ್ಲಿ ರೋಗಿಗಳ ಉಪಯೋಗಕ್ಕೆ ಸಿಗಬೇಕಾದ ಆರೋಗ್ಯ ಕವಚ ವಾಹನ ಕೊಪ್ಪದಲ್ಲಿ ರೋಗಿಗಳ ಪಾಲಿಗೆ ಮರೀಚಿಕೆಯಂತಾಗಿದೆ.

ಕಂಪನಿ- ವಾಹನ ಚಾಲಕರ ನಡುವೆ ವೇತನದ ವಿಚಾರ ಹೊಂದಾಣಿಕೆ ಕೊರತೆ

ಹಮೀದ್ ಕೊಪ್ಪ

ಕನ್ನಡಪ್ರಭ ವಾರ್ತೆ, ಕೊಪ್ಪ

ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಚಿತ ಸೇವೆ ಒದಗಿಸುವ ೧೦೮ ಅಂಬ್ಯುಲೆನ್ಸ್ ಜೀವ ರಕ್ಷಕ ವಾಹನಕ್ಕೆ ದಿನನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ತುರ್ತು ಸಂದರ್ಭದಲ್ಲಿ ರೋಗಿಗಳ ಉಪಯೋಗಕ್ಕೆ ಸಿಗಬೇಕಾದ ಆರೋಗ್ಯ ಕವಚ ವಾಹನ ಕೊಪ್ಪದಲ್ಲಿ ರೋಗಿಗಳ ಪಾಲಿಗೆ ಮರೀಚಿಕೆಯಂತಾಗಿದೆ. ವಾಹನದ ಟೈರ್ ಪಂಚರ್ ಆದರೆ ೧೫ ರಿಂದ ೨೦ ದಿನಗಳ ಕಾಲ ರಿಪೇರಿಯಾಗದೆ ನಿಲ್ಲುವ ವಾಹನ ಅನೇಕ ಬಾರಿ ದುರಸ್ತಿ ಯಾಗದೆ ಆರೋಗ್ಯ ಸೇವೆಗೆ ಸಿಗುತ್ತಿಲ್ಲ. ಕರ್ನಾಟಕ ಸರ್ಕಾರ ಆಂಬ್ಯುಲೆನ್ಸ್ ಸೇವೆಯನ್ನು ಜಿ.ವಿ.ಕೆ. ಕಂಪನಿಯವರಿಗೆ ವಹಿಸಿದ್ದು ಕಂಪನಿಯವರು ಮತ್ತು ವಾಹನ ಚಾಲಕರ ನಡುವೆ ವೇತನದ ವಿಚಾರವಾಗಿ ಹೊಂದಾಣಿಕೆ ಇಲ್ಲದೆ ಆಗಾಗ್ಗ ಸಮಸ್ಯೆಗಳು ಉಂಟಾಗುತ್ತಿವೆ. ತಾಲೂಕಿನ ಮುಖ್ಯಕೇಂದ್ರವಾದ ಕೊಪ್ಪ ಸಾರ್ವಜನಿಕ ಆಸ್ಪತ್ರೆ ೧೦೮ ಆಂಬ್ಯುಲೆನ್ಸ್ ವಾಹನ ಓಡಿಸಲಾಗದ ಸ್ಥಿತಿಯಲ್ಲಿದ್ದು ಸಾರ್ವಜನಿಕರ ಹೋರಾಟ ಹಾಗೂ ಅನೇಕರ ಮನವಿ ಮೇರೆಗೆ ಸ್ಕ್ರಾಪ್ ಆಗಿದ್ದ ವಾಹನದ ಬದಲಿಗೆ ಕಳೆದ ೩ ತಿಂಗಳ ಹಿಂದೆ ಹೊಸ ಆಂಬ್ಯುಲೆನ್ಸ್ ನೀಡಲಾಗಿದೆ. ಹೊಸ ಆಂಬ್ಯುಲೆನ್ಸ್ ಶಿವಮೊಗ್ಗ ಆಸ್ಪತ್ರೆಗೆ ಹೋಗಿಬರುವ ಸಮಯದಲ್ಲಿ ಅಪಘಾತಕ್ಕೆ ಒಳಗಾಗಿ ತಿಂಗಳು ಕಳೆದರೂ ದುರಸ್ತಿಯಾಗದೆ ಬಾಳಗಡಿ ಮುಖ್ಯರಸ್ತೆಯ ಬದಿಯಲ್ಲಿ ನಿಂತಿದೆ. ಮೇ.೩ರಂದು ಕುದುರೆಗುಂಡಿಯಲ್ಲಿ ಕಾರು ಬೈಕ್‌ಗಳ ನಡುವೆ ಅಪಘಾತವುಂಟಾಗಿ ಬೈಕ್ ಸವಾರರಿಬ್ಬರು ಗಂಭೀರ ಸ್ಥಿತಿಯಲ್ಲಿ ಗಾಯ ಗೊಂಡು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದಾಗ ಸಾರ್ವಜನಿಕರು ೧೦೮ ಆಂಬ್ಯುಲೆನ್ಸ್‌ ಗೆ ಕರೆ ಮಾಡಿದರೂ ಆಂಬ್ಯುಲೆನ್ಸ್ ಲಭ್ಯವಿಲ್ಲ. ತರೀಕೆರೆಯಿಂದ ತರಿಸಬೇಕು ಎನ್ನುವ ಉಡಾಫೆ ಉತ್ತರವನ್ನು ಸಿಬ್ಬಂದಿ ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಲು ಬೇರೆ ಯಾವುದೇ ವಾಹನ ಸೌಕರ್ಯವಿಲ್ಲದೆ ಸ್ಥಳೀಯ ಶಾಮಿಯಾನ ಅಂಗಡಿಯ ಗೂಡ್ಸ್ ವಾಹನದಲ್ಲಿ ಕೊಪ್ಪ ಆಸ್ಪತ್ರೆಗೆ ಕರೆತರಲಾಗಿತ್ತು. ಸತೀಶ್ ಎಂಬುವವರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಕೆರೆಸ್ವಾಮಿ ಎನ್ನುವ ೫೭ ವರ್ಷದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕಳುಹಿಸುವ ಸಿದ್ಧತೆಯಲ್ಲಿದ್ದಾಗ ಅಪಘಾತ ಸ್ಥಳದಲ್ಲಿ ಅತಿಯಾದ ರಕ್ತಸ್ರಾವ ಉಂಟಾದ ಕಾರಣ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಸಕಾಲಕ್ಕೆ ಆಂಬ್ಯುಲೆನ್ಸ್ ದೊರಕಿದ್ದಲ್ಲಿ ಅವರ ಪ್ರಾಣ ಉಳಿಸಬಹುದಿತ್ತು ಎನ್ನುವುದು ಕುದುರೆಗುಂಡಿ ಗ್ರಾಮಸ್ಥರ ಅಭಿಪ್ರಾಯ. ಒಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಆಂಬ್ಯುಲೆನ್ಸ್ ಉಸ್ತುವಾರಿ ವಹಿಸಿಕೊಂಡ ಜಿವಿಕೆ ಕಂಪನಿಯವರ ನಿರ್ಲಕ್ಷ್ಯವೋ, ಇಚ್ಛಾಶಕ್ತಿಯ ಕೊರತೆಯೋ ತುರ್ತು ಸಂದರ್ಭದಲ್ಲಿ ಯಾವುದೇ ಆಂಬ್ಯುಲೆನ್ಸ್ ಸಿಗದೆ ರೋಗಿಗಳು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಕೊಪ್ಪದಲ್ಲಿ ಉಂಟಾಗುತ್ತಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ನ.ರಾ.ಪುರ, ಕೊಪ್ಪ, ಶೃಂಗೇರಿ, ಮತ್ತು ಬಾಳೆಹೊನ್ನೂರು ಆಸ್ಪತ್ರೆಗಳಲ್ಲಿ ತಲಾ ಒಂದರಂತೆ ೧೦೮ ಆಂಬ್ಯುಲೆನ್ಸ್ ಗಳು ಕಾರ್ಯಾಚರಿಸುತ್ತಿವೆ. ಅಪಘಾತಕ್ಕೀಡಾದ ಕೊಪ್ಪದ ಆಂಬ್ಯುಲೆನ್ಸ್ ಅನ್ನು ಸಂಬಂಧಪಟ್ಟವರು ಕೂಡಲೇ ದುರಸ್ತಿಗೊಳಿಸಿ ಸೇವೆಗೆ ಅನುಕೂಲ ಮಾಡಿಕೊಡಬೇಕು. ಕ್ಷೇತ್ರದ ಶಾಸಕರು ಆಸ್ಪತ್ರೆ ಮತ್ತು ಜಿವಿಕೆ ಕಂಪನಿಯವರಿಗೆ ಶೀಘ್ರದಲ್ಲಿ ವಾಹನ ದುರಸ್ತಿಗೆ ಸೂಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.