ಕೊಪ್ಪ : ೨೨ ಜನರಿಗೆ ಉಚಿತ ಮೆಮೊಗ್ರಫಿ ತಪಾಸಣೆ

| Published : May 22 2024, 12:51 AM IST

ಸಾರಾಂಶ

ಕೊಪ್ಪ, ಮನುಷ್ಯ ಎಷ್ಟೇ ಸಂಪತ್ತನ್ನು ಹೊಂದಿದ್ದರೂ ನೆಮ್ಮದಿ ಜೀವನ ಸಾಗಿಸಲು ಆರೋಗ್ಯವೆಂಬ ಸಂಪತ್ತು ಮುಖ್ಯವಾಗಿದೆ ಎಂದು ಕೊಪ್ಪ ಆದರ್ಶ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಟರಾಜ್ ರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕೊಪ್ಪ

ಮನುಷ್ಯ ಎಷ್ಟೇ ಸಂಪತ್ತನ್ನು ಹೊಂದಿದ್ದರೂ ನೆಮ್ಮದಿ ಜೀವನ ಸಾಗಿಸಲು ಆರೋಗ್ಯವೆಂಬ ಸಂಪತ್ತು ಮುಖ್ಯವಾಗಿದೆ ಎಂದು ಕೊಪ್ಪ ಆದರ್ಶ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಟರಾಜ್ ರಾವ್ ತಿಳಿಸಿದರು.

ಪಟ್ಟಣದ ಶಾಲಿನಿ ಡಯೋಗ್ನೋಸಿಸ್ ಕೇಂದ್ರದಲ್ಲಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ, ಕೊಪ್ಪ ಶಾಖೆ ಮತ್ತು ಆದರ್ಶ ಆಸ್ಪತ್ರೆ, ಸಹಯೋಗದೊಂದಿಗೆ ಮಂಗಳವಾರ ಆಯೋಜನೆಗೊಂಡ ಉಚಿತ ಮ್ಯಾಮೋಗ್ರಫಿ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯ ದೇಹದಲ್ಲಿ ಮೇಲ್ನೋಟಕ್ಕೆ ಗೋಚರವಾಗದ ಎಷ್ಟೋ ರೋಗ ಲಕ್ಷಣಗಳು ತಪಾಸಣೆಗೊಳಪಟ್ಟಾಗ ಗೋಚರವಾಗುತ್ತದೆ. ಆದ್ದರಿಂದ ಆಗ್ಗಾಗ್ಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಪ್ರತೀವರ್ಷ ಭಾರತ ದೇಶದಲ್ಲಿ ೩೦ ಪ್ರತಿಶತ ಹೊಸ ಸ್ತನ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಆರಂಭಿಕ ಹಂತ ದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದರಿಂದ ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಹೊಂದಬಹುದು. ೪೦ ವಯಸ್ಸಿನ ನಂತರ ಸ್ತನ ಕ್ಯಾನ್ಸರ್‌ನ ಮೊದಲ ಹಂತದ ಸಂಬಂಧವನ್ನು ಹೊಂದಿದ್ದರೆ ಮುಜುಗರ ಬಿಟ್ಟು ತಪಾಸಣೆ ಮಾಡಿಸಿ ಕೊಳ್ಳಿ. ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆದರ್ಶ ಆಸ್ಪತ್ರೆ ಆರೋಗ್ಯ ಸಂಬಂಧಿತ ಹಲವಾರು ಉಚಿತ ಶಿಬಿರಗಳನ್ನು ನಡೆಸುತ್ತಿದ್ದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮೆಮೋಗ್ರಫಿ ತಪಾಸಣೆ ವಾಹನ ಆಗಮಿಸಿದ್ದು ೨೨ ಜನ ಉಚಿತ ಮೆಮೋಗ್ರಫಿ ತಪಾಸಣೆ ಮಾಡಿಸಿಕೊಂಡರು. ಆದರ್ಶ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಸಹ್ಯಾದ್ರಿ ಆಸ್ಪತ್ರೆ ಸಿಬ್ಬಂದಿ, ವೈದ್ಯಕೀಯ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.