ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟಾ ಸೇರಿದಂತೆ ಪರಿಸರಕ್ಕೆ ಮಾರಕವಾದ ಕಾರ್ಖಾನೆಯನ್ನು ಸ್ಥಾಪಿಸಬಾರದೆಂದು ಆಗ್ರಹಿಸಿ ನಡೆಯುತ್ತಿದ್ದ ಹೋರಾಟ ಹಾಗೂ ಕೊಪ್ಪಳ ಬಂದ್‌ಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಕೊಪ್ಪಳ ಹಾಗೂ ಭಾಗ್ಯನಗರ ಪಟ್ಟಣಗಳಲ್ಲಿ ನಡೆದ ಬಂದ್ ಹಾಗೂ ಹೋರಾಟಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿತು. ಸಮಾಜದ ಎಲ್ಲ ಸ್ತರದ ಜನರು ಹೋರಾಟ, ಬಂದ್ ಬೆಂಬಲಿಸಿ ಪಾಲ್ಗೊಂಡಿದ್ದರು.
ಬಂದ್ ಉದ್ದಕ್ಕೂ ಕಾರ್ಖಾನೆ ತೊಲಗಿಸಿ, ಕೊಪ್ಪಳ ಉಳಿಸಿ ಎಂಬ ಕೂಗು ಪ್ರತಿಧ್ವನಿಸಿತು. ಬಲ್ಡೋಟಾ ಸೇರಿದಂತೆ ವಿವಿಧ ಕಾರ್ಖಾನೆಗಳ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಕೊಪ್ಪಳದಲ್ಲಿ ಎರಡನೇ ಬಾರಿಗೂ ಸಂಪೂರ್ಣ ಬಂದ್ ಗೆ ಬೆಂಬಲ ವ್ಯಕ್ತವಾಯಿತು. ಪ್ರತಿಭಟನೆ ಮೆರವಣಿಗೆಯಲ್ಲಿ ನೂರಾರು ಸಂಘಟನೆಗಳ ಮುಖಂಡರು, ಪಕ್ಷಾತೀತ ನಾಯಕರು ಭಾಗಿಯಾಗಿದ್ದರು.ಗವಿಮಠದಿಂದ ಆರಂಭ: ನಗರದ ಗವಿಮಠದ ಮೈದಾನದಿಂದ ಬಂದ್ ನ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಗಡಿಯಾರ ಕಂಬದ ಮೂಲಕ ಜವಾಹರ್ ರಸ್ತೆಯ ಮಾರ್ಗವಾಗಿ ಅಶೋಕ ವೃತ್ತ ತಲುಪಿತು. ಸರ್ಕಾರದ ವಿರುದ್ಧ ಪ್ರತಿಭಟನೆಯೂದ್ದಕ್ಕೂ ಜನರು ಘೋಷಣೆ ಕೂಗಿದರು. ಕೊಪ್ಪಳ ಬಂದ್ ಗೆ ಜೇವರಗಿ ಮಠದ ಸಿದ್ಧಬಸವ ಕಬೀರ ಮಹಾಸ್ವಾಮೀಜಿ ಚಾಲನೆ ನೀಡಿದರು.ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ ಭಾಗಿಯಾಗಿದ್ದರು.
ಎರಡನೇ ಬಂದ್: 2025ರ ಫೆ.24ರಂದು ಶ್ರೀಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಇದೇ ವಿಚಾರವಾಗಿ ಕೊಪ್ಪಳ ಬಂದ್ ನಡೆಸಲಾಗಿತ್ತು. ಕೊಪ್ಪಳ ಸುತ್ತಮುತ್ತ ಸ್ಥಾಪಿತವಾಗಿರುವ ಹಲವು ಕಾರ್ಖಾನೆ ಪರಿಸರಕ್ಕೆ ಹಾನಿಯಾಗಿದ್ದು ಇಲ್ಲಿಯ ವಾತಾವರಣಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಇಂತಹ ಮಾಲಿನ್ಯಕಾರಿ ಕೈಗಾರಿಕೆಗಳು ಜಿಲ್ಲೆಗೆ ಬೇಡವೆಂದು ಆಗಲೇ ಒತ್ತಾಯಿಸಿದ್ದರು.ಹುಸಿಯಾಗಿದ್ದ ಭರವಸೆ: ಕೊಪ್ಪಳ ಸಮೀಪ ಸ್ಥಾಪಿಸಲು ಉದ್ದೇಶಿಸಿರುವ ಬಲ್ಡೋಟಾ ಕಾರ್ಖಾನೆಯ ವಿಸ್ತರಣಾ ಘಟಕ ತಕ್ಷಣವೇ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ,ಕಾರ್ಖಾನೆ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಭರವಸೆ ಪಡೆದಿದ್ದರು. ಆದರೆ ಶಾಶ್ವತ ರದ್ಧತಿ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ, ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಗಳು 116 ದಿನಗಳ ನಿರಂತರ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದವು.
ಇಂದಿಗೆ (2026ರ ಫೆಬ್ರವರಿ 24) ಕೊಪ್ಪಳ ಬಂದ್‌ಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಮತ್ತೆ ಎರಡನೇ ಬಾರಿ ದೊಡ್ಡ ಮಟ್ಟದ ಹೋರಾಟಕ್ಕೆ ಕರೆ ನೀಡಿ ಮತ್ತೆ ಕೊಪ್ಪಳ ಬಂದ್ ಮಾಡಲಾಯಿತು.
ಬಂದ್‌ಗೆ ವ್ಯಾಪಕ ಬೆಂಬಲ: ಬಂದ್‌ಗೆ ಬೆಂಬಲ ಸೂಚಿಸಿ ಹೋಟೆಲ್, ಅಂಗಡಿ-ಮುಂಗಟ್ಟು, ಖಾಸಗಿ ಶಾಲೆ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನೇಕಾರರು ಸೇರಿದಂತೆ ಸಾವಿರಾರು ಜನರು ಸ್ವಯಂ ಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಒಂದು ದಿನ ಸ್ಥಗಿತಗೊಳಿಸಿದರು. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಪಕ್ಷಾತೀತ ನಾಯಕರ ಭಾಗಿ: ಪ್ರತಿಭಟನೆಯಲ್ಲಿ ಶ್ರೀಶೈಲ ಮಠದ ನಾಗಭೂಷಣ ಮಹಾಸ್ವಾಮೀಜಿ, ಸಾಣೆಹಳ್ಳಿ ಮಠದ ಶಿವಾಚಾರ್ಯ ಸ್ವಾಮೀಜಿ, ಗದಗದ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಎಂಎಲ್ಸಿ ಹೇಮಲತಾ ನಾಯಕ್, ಜೆಡಿಎಸ್ ನಾಯಕ ಸಿ.ವಿ.ಚಂದ್ರಶೇಖರ್, ಅಲ್ಲಮಪ್ರಭು ಬೆಟ್ಟದೂರು, ಡಿ.ಎಂ. ಬಡಿಗೇರ್, ಮಲ್ಲಪೂಜಾರ, ಜುನಗೋನಾಳ, ಡಿ.ಎಚ್.ಪೂಜಾರ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.ಪರೀಕ್ಷೆ ಮುಂದೂಡಿಕೆ: ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಗರದಲ್ಲಿ ಪೊಲೀಸ್ ಇಲಾಖೆ ಕೈಗೊಂಡಿತ್ತು. ಖಾಸಗಿ ಶಾಲೆಗಳಿಗೂ ಸಹ ರಜೆ ಘೋಷಿಸಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಮೊದಲನೇ ಸೆಮಿಸ್ಟರ್ ಪರೀಕ್ಷೆ ಕೊಪ್ಪಳ ವಿಶ್ವವಿದ್ಯಾಲಯ ಮುಂದೂಡಿದೆ.
ಬಂದ್ ಹಿನ್ನೆಲೆ ಬೀಗಿ ಪೊಲೀಸ್ ಭದ್ರತೆಕೊಪ್ಪಳ: ಬಲ್ಡೋಟಾ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆದ ಬಂದ್ ಹಿನ್ನೆಲೆ ಬೀಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.
ಪ್ರತಿಭಟನಾ ಮೆರವಣಿಗೆ ಉದ್ದಕ್ಕೂ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಫಿಲ್ಡ್ ಗೆ ಇಳಿದು ಭದ್ರತೆ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡರು. ನಗರದಲ್ಲಿ ರೌಂಡ್ಸ್ ಕೈಗೊಂಡು ಭದ್ರತೆ ಕುರಿತು ಪರಿಶೀಲನೆ ನಡೆಸಿದರು. ಬಂದ್ ಹಿನ್ನೆಲೆಯಲ್ಲಿ ಭದ್ರತೆಗಾಗಿ 3 ಡಿವೈಎಸ್ಪಿ, 9ಇನ್ಸಪೆಕ್ಟರ್, 15 ಪಿಎಸ್ ಐ, 40 ಎಎಸ್ ಐ, 150 ಪೊಲೀಸ್ ಪೇದೆ, 150 ಹೋಂ ಗಾರ್ಡ್, 4 ಡಿಎಆರ್, 2 ಐಆರ್ ಬಿ ತುಕಡಿ ನಿಯೋಜನೆ ಮಾಡಲಾಗಿತ್ತು. ಕ್ಯಾಮರಾ, ಡ್ರೋಣ್ ಸಹ ಬಳಕೆ ಮಾಡಲಾಯಿತು.ಸ್ವಯಂ ಪ್ರೇರಿತ ಬಂದ್ ಮಾಡಿದರೆ ಏನೂ ತೊಂದರೆ ಇಲ್ಲ. ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದರೆ ಕ್ರಮಕೈಗೊಳ್ಳುತ್ತೇವೆ ಎಂದು ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ಸೂಚಿಸಿದರು.
ಭಾಗಿಯಾಗದ ಗವಿಶ್ರೀ: ಕಳೆದ ವರ್ಷದ ಹೋರಾಟದಲ್ಲಿ ಗವಿಮಠದ ಶ್ರೀಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭಾಗಿಯಾಗಿದ್ದರು. ಆದರೆ ಈ ವರ್ಷದ ಬಂದ್ ನಲ್ಲಿ ಗವಿಶ್ರೀಗಳು ಭಾಗಿಯಾಗಿರಲಿಲ್ಲ. ಕಳೆದ ವರ್ಷದ ಹೋರಾಟದಲ್ಲಿ ಭಾಗಿಯಾಗಿ ಕಾರ್ಖಾನೆಗಳು ತೊಲಗದಿದ್ದರೆ ತೊಟ್ಟಿಲು ತೂಗುವುದೇ ನಿಲ್ಲುತ್ತದೆ. ಎಲ್ಲರೂ ಸ್ಮಶಾನಕ್ಕೆ ತೆರಳಬೇಕಾಗುತ್ತದೆ ಎಂದು ಗವಿಶ್ರೀಗಳು ಕಾರ್ಖಾನೆಗಳಿಂದಾಗುವ ದುಷ್ಪರಿಣಾಮ ಬಗ್ಗೆ ನುಡಿದಿದ್ದರು. ಈ ಸಲದ ಹೋರಾಟಕ್ಕೆ ಸಮಿತಿಯವರು ಹೋಗಿ ಕರೆದಾಗ ಸದಾ ನಾನು ನಿಮ್ಮ ಜತೆ ಇರುತ್ತೇನೆ. ಗವಿಸಿದ್ದಪ್ಪಜ್ಜ ಅಪ್ಪಣೆ ನೀಡಿದಾಗ ಬರುತ್ತೇನೆ. ಗವಿಮಠದ ಸದಾ ನಿಮ್ಮೊಂದಿಗೆ ಇರುತ್ತದೆ ಎಂದಿದ್ದರು.