ಕೊಪ್ಪಳ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆಗೆ ಬ್ರೇಕ್

| Published : Mar 07 2025, 12:48 AM IST

ಕೊಪ್ಪಳ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆಗೆ ಬ್ರೇಕ್
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಸ್‌ಪಿಎಲ್ ಕಾರ್ಖಾನೆ ಆರಂಭದ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರೂ ಪಾಲಿಸಿರಲಿಲ್ಲ. ಈ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಬುಧವಾರ ಪ್ರತಿಕ್ರಿಯೆ ನೀಡಲೂ ನಿರಾಕರಿಸಿದ್ದ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಅವರೇ ಅಪರ ಜಿಲ್ಲಾಧಿಕಾರಿಗಳಿಂದ ಕಾರ್ಖಾನೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ಬಿಡುಗಡೆ ಮಾಡಿಸಿದ್ದಾರೆ.

ಕೊಪ್ಪಳ:

ಬಿಎಸ್‌ಪಿಎಲ್ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಜಿಲ್ಲಾಡಳಿತದಿಂದ ಸ್ಥಗಿತಗೊಳಿಸಲಾಗಿದೆ. ಪ್ರಸಕ್ತ ಯಾವುದೇ ಕಾಮಗಾರಿ ನಡೆಯುತ್ತಿಲ್ಲ.

ಇದು, ಅಪರ ಜಿಲ್ಲಾಧಿಕಾರಿ ರುಜು ಇರುವ ಆದೇಶ ಪ್ರತಿಯಲ್ಲಿರುವ ಒಕ್ಕಣಿಕೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಸ್‌ಪಿಎಲ್ ಕಾರ್ಖಾನೆ ಆರಂಭದ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರೂ ಪಾಲಿಸಿರಲಿಲ್ಲ. ಈ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಬುಧವಾರ ಪ್ರತಿಕ್ರಿಯೆ ನೀಡಲೂ ನಿರಾಕರಿಸಿದ್ದ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಅವರೇ ಅಪರ ಜಿಲ್ಲಾಧಿಕಾರಿಗಳಿಂದ ಕಾರ್ಖಾನೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ಬಿಡುಗಡೆ ಮಾಡಿಸಿದ್ದಾರೆ.

ಇದರಿಂದ ಕೊಪ್ಪಳ ಬಳಿ ತಲೆ ಎತ್ತಲು ಮುಂದಾಗಿದ್ದ ಬಿಎಸ್‌ಪಿಎಲ್ ಕಾರ್ಖಾನೆಗೆ ಬ್ರೇಕ್‌ ಬಿದ್ದಿದೆ. ಜಿಲ್ಲಾಡಳಿತದ ಪ್ರಕಟಣೆ ಬಿಡುಗಡೆಯಾಗುತ್ತಿದ್ದಂತೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಾಮಗಾರಿ ನಿಲ್ಲಿಸಲಾಗಿತ್ತು. ಬುಧವಾರ ಕಾರ್ಖಾನೆ ಗೇಟ್‌ ಒಳಗೆ ಬಿಡಲು ನಿರಾಕರಿಸಿದ್ದ ಭದ್ರತಾ ಸಿಬ್ಬಂದಿಯೂ ಗುರುವಾರ ಯಾರಿಗೂ ಅಡೆತಡೆ ಮಾಡಲಿಲ್ಲ. ಕೇವಲ ಭೂಮಿಯ ಸಮತಟ್ಟು ಕಾರ್ಯದ ಹೊರತಾಗಿ ಯಾವುದೇ ಯಂತ್ರ ಬಂದಿಲ್ಲ ಎಂಬುದು ಕಂಡು ಬಂದಿತು. ಆದರೆ, ಈಗಾಗಲೇ ಇರುವ ಎಂಎಸ್‌ಪಿಎಲ್ ಕಾರ್ಖಾನೆ ಎಂದಿನಂತೆ ಕಾರ್ಯ ನಿರ್ವಹಿಸುವುದು ಕಂಡು ಬಂದಿತು.ಬಿಎಸ್‌ಪಿಎಲ್ ಕಂಪನಿಗೆ ಭಾರಿ ಹಿನ್ನಡೆ

ಬೃಹತ್ ಕಾರ್ಖಾನೆಯನ್ನು ಯಾವುದೇ ಲಂಗು, ಲಗಾಮು ಇಲ್ಲದೆ ಮತ್ತು ಸ್ಥಳೀಯರ ಅಹವಾಲು ಆಲಿಸದೆ ಕಾರ್ಖಾನೆ ಪ್ರಾರಂಭಿಸಲು ಮಂದಾಗಿದ್ದ ಬಿಎಸ್‌ಪಿಎಲ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹ 54000 ಕೋಟಿ ಹೂಡಿಕೆ ಮಾಡಿ ಕಾರ್ಖಾನೆ ಸ್ಥಾಪಿಸಲು ಮುಂದಾಗಿತ್ತು. ಆದರೆ, ಇದನ್ನು ವಿರೋಧಿಸಿ ಭಾರಿ ಪ್ರತಿಭಟನೆ ನಡೆಯಿತು. ಇದಾದ ಬಳಿಕ ಸರ್ವಪಕ್ಷ ನಿಯೋಗ ಸಿಎಂ ಭೇಟಿಯಾಗಿ ಯಾವುದೇ ಕಾರಣಕ್ಕೂ ಕಾರ್ಖಾನೆ ಆರಂಭಿಸಬಾರದು. ಇದರಿಂದ ಜನರಿಗೆ ತೊಂದರೆಯಾಗಲಿದೆ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಸಿಎಂ ಕೂಡ ಕಾರ್ಖಾನೆ ಕೆಲಸ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದರು. ಇದೀಗ ಜಿಲ್ಲಾಡಳಿತವೇ ಅಧಿಕೃತ ಪ್ರಕಟಣೆ ಹೊರಡಿಸಿ ಕಾಮಗಾರಿ ಸ್ಥಗಿತಗೊಳಿಸಿರುವುದು ಬಿಎಸ್‌ಪಿಎಲ್ ಕಾರ್ಖಾನೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ದಲಿತರ ಆಕ್ರೋಶ

ಸಿಎಂ ಆದೇಶಿಸಿದರೂ ಕಾರ್ಖಾನೆ ಕಾಮಗಾರಿ ಮುಂದುವರಿಸಿರುವುದನ್ನು ತಡೆಯಲು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬಿಎಸ್‌ಪಿಎಲ್ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ, ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಕಿತ್ತು ಹಾಕಿದರು. ಜನರು ಧೂಳಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಕಾರ್ಖಾನೆ ಪ್ರಾರಂಭಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ದಲಿತ ಸಂಘಟನೆಗಳನ್ನು ಒಡೆಯುವ ನಿಮ್ಮ ಕಂಪನಿ ಆಟ ನಡೆಯಲು ಬಿಡುವುದಿಲ್ಲ. ನಿಮ್ಮ ಕಾರ್ಖಾನೆಯನ್ನು ಇಲ್ಲಿಂದ ಓಡಿಸುತ್ತೇವೆ ಎಂದರು. ಈ ವೇಳೆ ದಲಿತ ಸಂಘಟನೆ ಮಲ್ಲಿಕಾರ್ಜುನ ಪೂಜಾರ, ಸಿದ್ದು ಮಣ್ಣಿನವರ, ಯಂಕಪ್ಪ ಹೊಸಳ್ಳಿ, ಮೂಕಪ್ಪ ಮೇಸ್ತ್ರಿ, ಗವಿ ಹೂಗಾರ ಇದ್ದರು.