ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನ ತೆರವಾಗಿದೆ. ಅಧ್ಯಕ್ಷ ಗಾದಿಗಾಗಿ ತೆರೆಮರೆಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಮೀಸಲಾತಿ ನಿಗದಿ ಯಾವುದಕ್ಕೆ ಆಗುತ್ತದೆ ಎನ್ನುವುದೇ ಸದ್ಯದ ಕುತೂಹಲ.
ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನದ ಮೊದಲ 30 ತಿಂಗಳ ಅವಧಿಯನ್ನು ಸಹ ಇಬ್ಬರಿಗೆ ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಮೊದಲ ಅವಧಿಯಲ್ಲಿ ಲತಾ ಗವಿಸಿದ್ದಪ್ಪ ಚಿನ್ನೂರು 15 ತಿಂಗಳು ಹಾಗೂ ನಂತರ ಶಿವಗಂಗಾ ಶಿವರಡ್ಡಿ ಭೂಮಕ್ಕನವರ 15 ತಿಂಗಳು ಅಧಿಕಾರ ಮಾಡಬೇಕಾಗಿತ್ತು. ಆದರೆ, ಮೊದಲ ಅವಧಿಯಲ್ಲಿ ಹಂಚಿಕೆಯಾದ 15 ತಿಂಗಳ ನಂತರ ಲತಾ ಗವಿಸಿದ್ದಪ್ಪ ಚಿನ್ನೂರು ರಾಜೀನಾಮೆಯ ನಂತರ ಆರು ತಿಂಗಳು ಕಾಲ ಚುನಾವಣೆ ನಡೆಯಲಿಲ್ಲ. ಹೀಗಾಗಿ, ನ್ಯಾಯಾಲಯ ಮೊರೆ ಹೋಗಿ ಶಿವಗಂಗಾ ಶಿವರಡ್ಡಿ ಭೂಮಕ್ಕನವರ ಆರು ತಿಂಗಳ ಕಾಲ ಹೆಚ್ಚಿಗೆ ಅಧಿಕಾರದಲ್ಲಿ ಇದ್ದರು. ಹೀಗಾಗಿ, ಈಗ ಮೊದಲ 30 ತಿಂಗಳ ಅವಧಿಯ ಬದಲಾಗಿ 36 ತಿಂಗಳು ಕಾಲ ಆಗಿದೆ. ಈಗ ಉಳಿದಿರುವ 24 ತಿಂಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗಿದೆ.ಈಗಾಗಲೇ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಯುತ್ತಿದೆ.
ಅವಧಿ ಮುಗಿದಿರುವ ಗಂಗಾವತಿ ಸೇರಿದಂತೆ ರಾಜ್ಯಾದ್ಯಂತ ಹಲವಾರು ನಗರಸಭೆಗಳಿಗೆ ಸರ್ಕಾರ ಇನ್ನೂ ಮೀಸಲಾತಿಯನ್ನೇ ನಿಗದಿ ಮಾಡಿಲ್ಲ. ಮೀಸಲಾತಿ ನಿಗದಿಯಾಗುತ್ತಿದ್ದಂತೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ.ಕೊಪ್ಪಳ ನಗರಸಭೆಯಲ್ಲಿ 31 ಸದಸ್ಯ ಬಲ ಇದ್ದು, ಸಂಸದರು, ಶಾಸಕರು, ವಿಪ ಸದಸ್ಯರು ಸೇರಿದಂತೆ ಸುಮಾರು 33 ಸದಸ್ಯ ಬಲ ಹೊಂದಿದೆ.
ಇದರಲ್ಲಿ ಬಿಜೆಪಿ 10, ಕಾಂಗ್ರೆಸ್ ಪಕ್ಷ 17, ಓರ್ವ ಜೆಡಿಎಸ್, ಇಬ್ಬರು ಪಕ್ಷೇತರ ಸದಸ್ಯರು ಸೇರಿ 31 ಸದಸ್ಯ ಬಲವನ್ನು ಹೊಂದಿದೆ. ಮತ್ತೋರ್ವ ಜೆಡಿಎಸ್ ಸದಸ್ಯ ಚೆನ್ನಪ್ಪ ಕೋಟ್ಯಾಳ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೂ ಗುರುತಿಸಿಕೊಂಡಿಲ್ಲ.ಈಗ ಅಧ್ಯಕ್ಷ ಗಾದಿಗಾಗಿ ಮೀಸಲಾತಿ ಇನ್ನು ನಿಗದಿಯಾಗಿಲ್ಲವಾದರೂ ತೆರೆಮರೆಯಲ್ಲಿ ಮೀಸಲಾತಿಯನ್ನೇ ನಿಗದಿ ಮಾಡಿಸುವ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೂ ಎರಡು ಗುಂಪುಗಳು ಆಗಿದ್ದು, ಮೀಸಲಾತಿ ನಿಗದಿಗಾಗಿ ಗುಂಪುಗಾರಿಕೆ ನಡೆದಿದೆ.
ಈಗ ಎಸ್ಸಿಗೆ ಮೀಸಲಾಗುತ್ತದೆಯೋ ಅಥವಾ ಬಿಸಿಎಂ ಎ ಗೆ ಮೀಸಲಾಗುತ್ತದೆಯೋ ಎನ್ನುವುದೇ ಸದ್ಯದ ಕುತೂಹಲ. ಈ ಎರಡು ವರ್ಗಗಳ ಪರವಾಗಿ ಲಾಬಿಯಂತೂ ನಡೆದಿದೆ.ಎಸ್ಸಿ ಸಮುದಾಯದಿಂದ ಮುತ್ತು ರಾಜ ಕುಷ್ಟಗಿ ಪ್ರಯತ್ನ ನಡೆಸಿದ್ದರೆ ಬಿಸಿಎಂ ಎ ವರ್ಗದಲ್ಲಿ ನಾಲ್ಕು ಬಾರಿ ಜಯ ಸಾಧಿಸಿರುವ ಅಮ್ಜಾದ್ ಪಟೇಲ ತಯಾರಿ ನಡೆಸಿದ್ದಾರೆ. ಹಾಗೆಯೇ ಅಜೀಮ್ ಅತ್ತಾರ ಮತ್ತು ವಿರುಪಾಕ್ಷಪ್ಪ ಮೋರನಾಳ ಸಹ ತಮ್ಮ ಶಕ್ತಿಮೀರಿ ಪ್ರಯತ್ನ ನಡೆಸಿದ್ದಾರೆ.
ಈಗ ಮೇಲ್ನೋಟಕ್ಕೆ ಮುತ್ತುರಾಜ ಕುಷ್ಟಗಿ ಮತ್ತು ಅಮ್ಜಾದ್ ಪಟೇಲ್ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಅಜೀಮ್ ಅತ್ತಾರ ಪರವಾಗಿ ಪಕ್ಷಾತೀತವಾಗಿ ಗುಂಪು ಸಿದ್ಧವಾಗುತ್ತಿದೆ. ತೆರೆಮರೆಯಲ್ಲಿ ಈಗಾಗಲೇ ಒಂದು ಸಭೆಗಳನ್ನು ಔಪಚಾರಿಕವಾಗಿ ಮಾಡಲಾಗಿದ್ದು, ಅಜೀಮ್ ಅತ್ತಾರ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ದಿಸೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೆರೆಮರೆಯಲ್ಲಿಯೇ ಒಂದಾಗಿ ಪ್ರಯತ್ನವಂತೂ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ.ಆದರೆ, ಮೀಸಲಾತಿ ನಿಗದಿ ಯಾವ ವರ್ಗಕ್ಕೆ ಆಗುತ್ತದೆ ಎನ್ನುವುದೇ ಸದ್ಯದ ಕುತೂಹಲ.
ಭಾಗ್ಯನಗರ ಪಪಂ ಸದಸ್ಯರ ಆಯ್ಕೆಯಾಗಿ ಎರಡು (ಡಿಸೆಂಬರ್ ವೇಳೆಗೆ) ವರ್ಷವಾಗುತ್ತಾ ಬಂದರೂ ಇದುವರೆಗೂ ಮೀಸಲಾತಿ ನಿಗದಿಯಾಗಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಲೇ ಇಲ್ಲ.ಕೊಪ್ಪಳ ನಗರಸಭೆ ಸದಸ್ಯರ ಆಯ್ಕೆ ನಡೆದು ಮೂರು ವರ್ಷದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಯಿತು. ಹೀಗಾಗಿ, ಕೊಪ್ಪಳ ನಗರಸಭೆ ಸದಸ್ಯರ ಅವಧಿ ಎಂಟು ವರ್ಷಗಳಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))