ಸಾರಾಂಶ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂ.19ಕ್ಕೆ ಹೊಸ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಬುಧವಾರ ಕ್ರೇನ್‌ಗಳ ಮೂಲಕ ಡಮ್ಮಿ ಗೇಟ್ (ಕಬ್ಬಿಣದ ತುಣುಕು)ಗಳನ್ನು ಬಿಟ್ಟು ರಿಹರ್ಸಲ್ ನಡೆಸಲಾಯಿತು
ಕೊಪ್ಪಳ/ವಿಜಯನಗರ : ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂ.19ಕ್ಕೆ ಹೊಸ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಬುಧವಾರ ಕ್ರೇನ್‌ಗಳ ಮೂಲಕ ಡಮ್ಮಿ ಗೇಟ್ (ಕಬ್ಬಿಣದ ತುಣುಕು)ಗಳನ್ನು ಬಿಟ್ಟು ರಿಹರ್ಸಲ್ ನಡೆಸಲಾಯಿತು. ಈ ವೇಳೆ, ಎದುರಾದ ದೋಷಗಳನ್ನು ಸರಿಪಡಿಸಿಕೊಳ್ಳಲಾಗಿದ್ದು, ರಿಹರ್ಸಲ್ ಬಹುತೇಕ ಯಶಸ್ವಿಯಾಗಿದೆ. ನೂತನ ಗೇಟುಗಳು ಬುಧವಾರ ತಡರಾತ್ರಿ ಆಗಮಿಸಿದ್ದು, ಗುರುವಾರದಿಂದ ತಾತ್ಕಾಲಿಕ ಗೇಟ್ ಅಳವಡಿಸುವ ಕಾರ್ಯ ಆರಂಭವಾಗಲಿದೆ.
ಬುಧವಾರ ಬೆಳಗ್ಗೆ ಜಲಾಶಯಕ್ಕೆ ಆಗಮಿಸಿದ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ವಿಶೇಷ ಪೂಜೆ ನೆರವೇರಿಸಿದರು. ಜಲಾಶಯದ ರಾಜಪುರೋಹಿತ ಗುರುರಾಜ ಆಚಾರ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಗಣೇಶ ಪೂಜೆ ನಂತರ ಅಷ್ಟ ದಿಕ್ಪಾಲಕರಿಗೆ ಕುಂಬಳಕಾಯಿ ಬಲಿ ನೀಡಿ, ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಲಾಯಿತು.
3 ಬಾರಿ ರಿಹರ್ಸಲ್:
ಬಳಿಕ, ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು, ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಅವರ ನೇತೃತ್ವದಲ್ಲಿ ತಜ್ಞರ ತಂಡ ಕಾರ್ಯಾಚರಣೆಗೆ ಇಳಿದಿದ್ದು, 19ನೇ ಕ್ರಸ್ಟ್ ಗೇಟ್ ಮುರಿದ ಜಾಗದಲ್ಲಿ ಮೂರು ಬಾರಿ ರಿಹರ್ಸಲ್ ನಡೆಸಿತು.
ಬೃಹತ್ ಗಾತ್ರದ ಎರಡು ಕ್ರೇನ್‌ಗಳನ್ನು 19ನೇ ಕ್ರಸ್ಟ್ ಗೇಟ್‌ನ ಎರಡೂ ಬದಿಯಲ್ಲಿ ನಿಲ್ಲಿಸಲಾಯಿತು. ಬಳಿಕ, ಕಟ್ ಆಗಿರುವ ಗೇಟ್‌ನ ಚೈನ್ ಲಿಂಕ್ ಹೊರ ತೆಗೆದು, ಸರಿಪಡಿಸಲಾಯಿತು. ನಂತರ, ಕ್ರೇನ್‌ಗಳ ಸಹಾಯದಿಂದ ಗೇಟ್ ಮಾದರಿಯ ಕಬ್ಬಿಣದ ತುಂಡುಗಳನ್ನು ನೀರಿನಲ್ಲಿ ಇಳಿಸಿ, ಅವುಗಳು ರಭಸಕ್ಕೆ ಕೊಚ್ಚಿ ಹೋಗುವುದನ್ನು ಮತ್ತೊಂದು ಕ್ರೇನ್ ಮೂಲಕ ತಡೆದು ನಿಲ್ಲಿಸುವ ಪ್ರಯತ್ನ ನಡೆಸಲಾಯಿತು. ಮೊದಲು ನಡೆದ ಪ್ರಯತ್ನದಲ್ಲಿ ಎದುರಾದ ಸಮಸ್ಯೆಗಳನ್ನು ಗುರುತಿಸಿ, ಪರಿಹರಿಸಿಕೊಂಡು ಎರಡನೇ ಬಾರಿ ಮತ್ತು ಮೂರನೇ ಬಾರಿ ರಿಹರ್ಸಲ್ ನಡೆಸಲಾಗಿದ್ದು, ಬಹುತೇಕ ಯಶಸ್ವಿಯಾಗಿದೆ.
ಇದೇ ವೇಳೆ, ನೀರಿನಲ್ಲಿ ಗೇಟ್ ಇಳಿಸುವ ಮುನ್ನ ಬೇಕಾಗಬಹುದಾದ ಸಲಕರಣೆಗಳು, ತುರ್ತು ವೆಲ್ಡಿಂಗ್ ಗೆ ಬೇಕಾಗಬಹುದಾದ ಸುಮಾರು 50 ಸಿಲಿಂಡರ್‌ಗಳನ್ನು ಸಹ ಸಂಗ್ರಹಿಸಿಟ್ಟುಕೊಳ್ಳಲಾಗಿದೆ.
ತಡರಾತ್ರಿ ಬರಲಿರುವ ಗೇಟ್:
ಜಿಂದಾಲ್‌ನಲ್ಲಿ ಸಿದ್ಧವಾಗಿರುವ ಮೂರು ಎಲಿಮೆಂಟ್‌ಗಳು (ಮೂರು ಪೀಸ್) ಬುಧವಾರ ಬೆಳಗ್ಗೆಯೇ ಬರಬೇಕಾಗಿತ್ತು. ಆದರೆ, ಗೇಟ್ ಗಳನ್ನು ಸಾಗಿಸುವಲ್ಲಿ ಎದುರಾದ ಸಮಸ್ಯೆಯಿಂದಾಗಿ ತಡರಾತ್ರಿ ಆಗಮಿಸಿದವು. ಹೀಗಾಗಿ, ತಾತ್ಕಾಲಿಕ್ ಗೇಟ್ ಅಳವಡಿಸುವ ಕಾರ್ಯವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಮುಂದೇನು?:
ಜಿಂದಾಲ್‌ನಲ್ಲಿ ಸಿದ್ಧಪಡಿಸಲಾದ 4 ಅಡಿ ಎತ್ತರದ 60 ಅಡಿ ಅಗಲದ ಮೂರು ಎಲಿಮೆಂಟ್ (ಗೇಟ್)ಗಳನ್ನು ಒಂದಾದ ಮೇಲೆ ಒಂದರಂತೆ ಅಳವಡಿಸಲಾಗುತ್ತದೆ. ಇದಾದ ಮೇಲೆ, ನಾರಾಯಣ ಎಂಜಿನಿಯರ್ ಮತ್ತು ಹಿಂದೂಸ್ಥಾನ ಎಂಜಿನಿಯರ್ ಕಂಪನಿಗಳು ಸಿದ್ಧಪಡಿಸಿರುವ ಎರಡು ಎಲಿಮೆಂಟ್‌ಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಂದಾಲ್‌ನ ಮೂರು, ನಾರಾಯಣ ಮತ್ತು ಹಿಂದೂಸ್ಥಾನ ಎಂಜಿನಿಯರ್ಸ್ ನಿಂದ ತಲಾ ಎರಡೆರಡು ಸೇರಿ ಒಟ್ಟು 8 ಎಲಿಮೆಂಟ್‌ಗಳು ಬರಲಿವೆ. ಈ ಪೈಕಿ ಐದು ಗೇಟ್‌ಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗುವುದು. ಈ ಗೇಟ್‌ಗಳಲ್ಲಿ ಏನಾದರೂ ತೊಂದರೆ ಕಂಡು ಬಂದಲ್ಲಿ ಉಳಿದ ಮೂರು ಗೇಟುಗಳನ್ನು ಆದ್ಯತೆ ಮೇಲೆ ಬಳಸಿಕೊಳ್ಳಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ಹಳೆಯ ಕ್ರಸ್ಟ್ ಗೇಟ್ 48 ಟನ್ ತೂಕದ್ದಾಗಿತ್ತು. ಈಗ 13 ಟನ್ ತೂಕದ ಐದು ಎಲಿಮೆಂಟ್‌ಗಳನ್ನು ಕೂಡಿಸಲಾಗುತ್ತದೆ.
ತುಂಗಭದ್ರಾ ಜಲಾಶಯದಲ್ಲಿರುವ ನೀರನ್ನು ಉಳಿಸಿಕೊಂಡು ಬುಧವಾರ ಮೂರು ರಿಹರ್ಸಲ್ ನಡೆಸಲಾಯಿತು.
ಮೊದಲ ರಿಹರ್ಸಲ್ - 1627 ಅಡಿ ಎತ್ತರದಲ್ಲಿ 84 ಟಿಎಂಸಿ ನೀರು.
ಎರಡನೇ ರಿಹರ್ಸಲ್ - 1624 ಅಡಿ 74 ಟಿಎಂಸಿ ನೀರು.
ಮೂರನೇ ರಿಹರ್ಸಲ್ - 1621 ಅಡಿ 66 ಟಿಎಂಸಿ ನೀರು.
ನೀರು ಉಳಿಸಿಕೊಂಡೇ ತಾತ್ಕಾಲಿಕ ಎಲಿಮೆಂಟ್ ಅಳವಡಿಸುವ ಯತ್ನಕ್ಕೆ ಯಶಸ್ಸು ದೊರೆಯುವ ವಿಶ್ವಾಸ ಮೂಡಿದೆ. ಜಿಂದಾಲ್ ನಿಂದ ಗೇಟ್ ಆಗಮಿಸುತ್ತಿದ್ದಂತೆ ಅಳವಡಿಸುವ ಪ್ರಕ್ರಿಯೆ ನಡೆಯಲಿದೆ. ಕ್ರೇನ್‌ಗಳ ಸಹಾಯದಿಂದ ರಿಹರ್ಸಲ್ ಮಾಡಲಾಗಿದ್ದು, ಯಶಸ್ವಿಯಾಗುವ ವಿಶ್ವಾಸ ಮೂಡಿದೆ.
- ಕನ್ನಯ್ಯ ನಾಯ್ಡು, ತಜ್ಞ ಎಂಜಿನಿಯರ್