ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣನ್ಯೂಸ್‌ನಿಂದ ಬೆಳಕಿಗೆ ಬಂದ ಹಿರೇಬೆಣಕಲ್‌ಗೆ ಕಾಯಕಲ್ಪ

| N/A | Published : Sep 07 2025, 05:16 AM IST

Pre-historic site at Hirebeṇakal
ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣನ್ಯೂಸ್‌ನಿಂದ ಬೆಳಕಿಗೆ ಬಂದ ಹಿರೇಬೆಣಕಲ್‌ಗೆ ಕಾಯಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಆಯ್ಕೆ ಮಾಡಿದ್ದ ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿರುವ ಕೊಪ್ಪಳ ಜಿಲ್ಲೆಯ ಪುರಾತನ ‘ಹಿರೇಬೆಣಕಲ್ ಶಿಲಾಸಮಾಧಿ’ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ.

ಕೊಪ್ಪಳ : ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಆಯ್ಕೆ ಮಾಡಿದ್ದ ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿರುವ ಕೊಪ್ಪಳ ಜಿಲ್ಲೆಯ ಪುರಾತನ ‘ಹಿರೇಬೆಣಕಲ್ ಶಿಲಾಸಮಾಧಿ’ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿಯಿಂದ ಮೊದಲ ಹಂತವಾಗಿ ₹80 ಲಕ್ಷ ಬಿಡುಗಡೆ ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಇತ್ತೀಚಿಗೆ ಹಿರೇಬೆಣಕಲ್ ಶಿಲಾಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅಭಿವೃದ್ಧಿಪಡಿಸುವ ಕುರಿತು ಭರವಸೆ ನೀಡಿದ್ದರು. ಕಳೆದ ತಿಂಗಳು ಹಿರೇಬೆಣಕಲ್ ಆದಿಮಾನವ ಕುರುಹುಗಳ ಛಾಯಾಚಿತ್ರಗಳನ್ನು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಸಹ ಮಾಡಿದ್ದರು. ಇದೀಗ ಹಣ ಬಿಡುಗಡೆಯ ಆದೇಶ ಹೊರಬಿದ್ದಿದೆ.

ಅಭಿವೃದ್ಧಿ ಕುರಿತು ಕೈಗೊಂಡಿರುವ ಯೋಜನೆಯ ಪತ್ರದಲ್ಲಿ, ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮ ಸಂಸ್ಥೆಗಳು ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಆಯ್ಕೆಯಾಗಿರುವ ಸ್ಥಳ ಹಿರೇಬೆಣಕಲ್ ಶಿಲಾಸಮಾಧಿ’ ಎಂದು ಪ್ರಸ್ತಾಪ ಮಾಡಿದೆ.

ಆದಿಮಾನವನ ನೆಲೆ ಕುರುಹು:

ದೇಶದಲ್ಲಿಯೇ ಆದಿಮಾನವ ನೆಲೆಯ ಕುರುಹು ಹೊಂದಿರುವ ಹಿರೇಬೆಣಕಲ್ ಶಿಲಾಸಮಾಧಿ ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಇವುಗಳನ್ನು ಕ್ರಿ.ಪೂ. 800 ರಿಂದ ಕ್ರಿ.ಪೂ.200ರ ಅವಧಿಯಲ್ಲಿ ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ. ಇಷ್ಟೊಂದ ಭವ್ಯ ಇತಿಹಾಸ ಹೊಂದಿದ್ದರೂ ಈ ತಾಣ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು.

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣನ್ಯೂಸ್’ ಗುರುತಿಸಿದ ಬಳಿಕ ಸರ್ಕಾರ ಇದರತ್ತ ದೃಷ್ಟಿ ಹರಿಸಿದ್ದು, ಮೊದಲ ಹಂತವಾಗಿ ರಸ್ತೆ, ಕುಡಿಯುವ ನೀರು, ಆಸನದ ವ್ಯವಸ್ಥೆಗೆ ₹80 ಲಕ್ಷ ಬಿಡುಗಡೆ ಮಾಡಿದೆ.

ಕನ್ನಡಪ್ರಭ’ಕ್ಕೆ ಚಾರಣ

ಬಳಗದಿಂದ ಧನ್ಯವಾದ

ಗಂಗಾವತಿ ಹತ್ತಿರ ಇರುವ ಪ್ರಾಗೈತಿಹಾಸಿಕ ನೆಲೆಯಾಗಿರುವ ಹಿರೇಬೆಣಕಲ್ ಶಿಲಾಸಮಾಧಿ ಅಭಿವೃದ್ಧಿಪಡಿಸಲು ಕೊನೆಗೂ ಮುಂದಾಗಿರುವುದು ಸಂತೋಷವಾಗಿದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ಹಾಗೂ ‘ಕನ್ನಡಪ್ರಭ’ಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಗಂಗಾವತಿ ಚಾರಣ ಬಳಗದ ಡಾ। ಶರಣಬಸಪ್ಪ ಕೋಲ್ಕಾರ ಮತ್ತು ಡಾ। ಶಿವಕುಮಾರ ಸೇರಿದಂತೆ ಅನೇಕರು ಹೇಳಿದ್ದಾರೆ.

ಕನ್ನಡಪ್ರಭ, ಏಷ್ಯಾನೆಟ್‌

ಸುವರ್ಣನ್ಯೂಸ್‌

ಗುರುತಿಸಿದ್ದ 7 ಅದ್ಭುತ

2022ರ ಮೇ ತಿಂಗಳ 4ರಂದು ಕರ್ನಾಟಕದ ಅದ್ಭುತಗಳನ್ನು ಗುರುತಿಸುವ ಕಾರ್ಯಕ್ಕೆ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಚಾಲನೆ ನೀಡಿದ್ದವು. ಮೊದಲು ಸ್ಥಳಗಳನ್ನು ಗುರುತಿಸುವುದಕ್ಕಾಗಿ ನಾಮನಿರ್ದೇಶನ ಮಾಡಲು ಜನರಿಗೆ ಅವಕಾಶ ನೀಡಲಾಯಿತು. ಬಳಿಕ ಮೊದಲ 100 ಸ್ಥಳಗಳಿಗೆ ಮತದಾನ ಬಳಿಕ 49 ಸ್ಥಳ, ನಂತರ 21 ಜಾಗಕ್ಕೆ ಮತದಾನ ಮಾಡಿಸಲಾಯಿತು. ನಟ ರಮೇಶ್‌ ಅರವಿಂದ್ ಅವರನ್ನು ಒಳಗೊಂಡ ಜ್ಯೂರಿಗಳ ತಂಡವು ರಾಜ್ಯದ 7 ಅದ್ಭುತಗಳನ್ನು ಅಂತಿಮಗೊಳಿಸಿತು. ಇದರಲ್ಲಿ ಹಿರೇಬೆಣಕಲ್‌ ಶಿಲಾ ಸಮಾಧಿಗಳು ಮೊದಲ ಸ್ಥಾನ ಪಡೆದವು. 2023ರ ಫೆಬ್ರವರಿ 25ರಂದು 7 ಅದ್ಭುತಗಳನ್ನು ಘೋಷಣೆ ಮಾಡಲಾಯಿತು.

ಕರ್ನಾಟಕದ 7 ಅದ್ಭುತಗಳು

1.ಹಿರೇಬೆಣಕಲ್‌ ಶಿಲಾ ಸಮಾಧಿಗಳು

2. ಹಂಪಿ

3. ಗೋಲ್‌ ಗುಂಬಜ್‌

4. ಗೊಮ್ಮಟೇಶ್ವರ ಮೂರ್ತಿ (ಶ್ರವಣಬೆಳಗೊಳ)

5. ಮೈಸೂರು ಅರಮನೆ

6. ಜೋಗ ಜಲಪಾತ

7. ನೇತ್ರಾಣಿ ದ್ವೀಪ

Read more Articles on