ಕೋಟಿ ಗೀತಾ ಲೇಖನ ಯಜ್ಞವನ್ನು ಇನ್ನೂ ಎರಡು ವರ್ಷ ಮುಂದುವರಿಸುತ್ತಿರುವುದಾಗಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಘೋಷಿಸಿದ್ದಾರೆ.

ಉಡುಪಿ: ಭಗವದ್ಗೀತೆಯ ಲೇಖನ ಮತ್ತು ಪಾರಾಯಣಕ್ಕೆ ಭಕ್ತರ ಇಚ್ಚೆ ಇನ್ನೂ ಹೆಚ್ಚಾಗಿರುವುದರಿಂದ ತಾವು ಪರ್ಯಾಯದ 2 ವರ್ಷದ ಅವಧಿಗೆ ಹಮ್ಮಿಕೊಂಡಿದ್ದ ಕೋಟಿ ಗೀತಾ ಲೇಖನ ಯಜ್ಞವನ್ನು ಇನ್ನೂ ಎರಡು ವರ್ಷ ಮುಂದುವರಿಸುತ್ತಿರುವುದಾಗಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಘೋಷಿಸಿದ್ದಾರೆ.ಗುರುವಾರ ತಮ್ಮ ಪರ್ಯಾಯೋತ್ಸವದ ಮಂಗಳೋತ್ಸವದ ಸಂದರ್ಭದಲ್ಲಿ ದೆಹಲಿಯ ನಿವೃತ್ತ ಐಎಎಸ್ ಅಧಿಕಾರಿ ಎಸ್. ಲಕ್ಷ್ಮೀನಾರಾಯಣನ್ ಅವರು 2 ಕೋಟಿ ರು. ವೆಚ್ಚದಲ್ಲಿ ರಚಿಸಿರುವ ಚಿನ್ನದ ಭಗವದ್ಗೀತೆಯ ಕೃಷ್ಣಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾವು ಕೋಟಿ ಗೀತಾ ಲೇಖನ. ನಿರಂತರ ಗೀತಾ ಪಾರಾಯಣ ಯೋಜನೆಗ‍ಳನ್ನು ಘೋಷಿಸಿದಾಗ, ಇದರಲ್ಲಿ ಯಾರೂ ಭಾಗವಹಿಸುತ್ತಾರೆ, ಇದು ನಡೆಯುವುದಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದರು. ಆದರೆ ಎಲ್ಲವನ್ನೂ ಕೃಷ್ಣನೇ ನಡೆಸುತ್ತಾನೆ ಎಂದು ಹೇಳಿದ್ದೇವು. ಅದರಂತೆ ಕೃಷ್ಣ ನಡೆಸಿದ್ದಾನೆ. ಭಕ್ತರು ಇನ್ನೂ ಗೀತಾ ಲೇಖನ ಮಾಡುತಿದ್ದಾರೆ. ನಿರಂತರ ಪಾರಾಯಣಕ್ಕೆ ದೂರದ ಪಂಜಾಬ್, ಆಂದ್ರ, ಕೇರಳ, ಪುಣೆಯಿಂದಲೂ ಭಕ್ತರು ಬಂದು ಇಡೀ ದಿನ ಗೀತೆಯನ್ನು ಪಾರಾಯಣ ಮಾಡಿದ್ದಾರೆ, ಈಗಲೂ ಭಕ್ತರು ಬೇಡಿಕೆ ಇದೆ. ಆದ್ದರಿಂದ ಈ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದರು.ಚಿನ್ನದಲ್ಲಿ ಬರೆದಿಡಬಹುದಾದ ಒಂದೇ ಒಂದು ಗ್ರಂಥ ಇದ್ದರೇ ಅದು ಭಗವದ್ಗೀತೆ, ಅದರಂತೆ ಕೃಷ್ಣನೇ ಲಕ್ಷ್ಮೀನಾರಾಯಣನ್ ಅವರಿಂದ ತನ್ನ ಬೋಧನೆಯನ್ನು ಚಿನ್ನದಲ್ಲಿ ಬರೆಸಿಕೊಂಡಿದ್ದಾನೆ ಎಂದು ಶ್ರೀಗಳು ಶ್ಲಾಘಿಸಿದರು. ನಂತರ ಶ್ರೀಗಳು ಲಕ್ಷ್ಮೀನಾರಾಯಣನ್ ಅವರಿಗೆ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು. ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾರು ಈ ಚಿನ್ನದ ಗೀತೆಯನ್ನು ಅಲಂಕೃತ ತೊಟ್ಟಿಲಿನಲ್ಲಿಟ್ಟು ತೂಗಿ ಕೃಷ್ಣನಿಗೆ ಸಮರ್ಪಿಸಿದರು. ಪುತ್ತಿಗೆ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಡಾ. ಎಸ್.ವಿ. ಶರ್ಮ, ಮಾಹೆ ಸಹಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಅವರಿಗೆ ಜೀವಮಾನ ಸಾಧನೆಗೆ ಶ್ರೀಗಳು ವಿಶೇಷ ಸನ್ಮಾನ ನಡೆಸಿದರು. ಪಂಡಾಪುರದ ಪ್ರಧಾನ ಟ್ರಸ್ಟಿ ಶನೇಶ್ವರ ಮಹಾರಾಜ್, ಜ್ಞಾನೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ಗಿರೀಶ್ ತುಕ್ರಿ, ಮುಂಬೈ ಉದ್ಯಮಿಗಳಾದ ಹಿಮಾಂಶು ಮತ್ತು ನಟರಾಜ್, ಚೆನೈನ ಸಿಎ ಹರಿಕೃಷ್ಣ ಅವರನ್ನು ಶ್ರೀಗಳು ಗೌರವಿಸಿದರು. ವಿದ್ವಾನ್ ಡಾ. ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು....ಬಾಕ್ಸ್...

ಚಿನ್ನದ ಗೀತೆ ನಿರ್ಮಾಣಕ್ಕೆ ಕೃಷ್ಣನ ಸೂಚನೆ !

ತಾವು ಪುತ್ತಿಗೆ ಶ್ರೀಗಳಿಂದ ಗೀತಾ ಲೇಖನ ದೀಕ್ಷೆ ಸ್ವೀಕರಿಸಿದ್ದೆವು. ಆದರೆ ಕಾರ್ಯಬಾಹುಳ್ಯದಿಂದ ಬರೆಯುವುದನ್ನು ಮರೆತುಬಿಟ್ಟಿದ್ದೆ, ಕೆಲವು ತಿಂಗಳ ಹಿಂದೆ ನನಗೆ ಗೀತಾ ಲೇಖನ ಪೂರ್ಣಗೊಳಿಸಿದ್ದಕ್ಕೆ ಅಂಚೆಯಲ್ಲಿ ಪ್ರಮಾಣಪತ್ರ ಮತ್ತು ಪ್ರಸಾದ ಬಂತು, ನನಗೆ ಅಚ್ಚರಿಯಾಯಿತು, ನಾನು ಇನ್ನೂ ಬರೆದೇ ಇಲ್ಲ ಎಂದು ಪತ್ನಿಗೆ ಹೇಳಿದೆ. ಆಗ ಪತ್ನಿ ಇದು ಕೃಷ್ಣನ ಸೂಚನೆ, ಇನ್ನಾದರೂ ಬರೆಯಿರಿ ಎಂದಳು. ಆದರೆ ನನಗೆ ಬರೆಯುವುದಕ್ಕೆ ಕನ್ನಡ ಬರುವುದಿಲ್ಲ. ಅದಕ್ಕೆ ಚಿನ್ನದಲ್ಲಿ ಬರೆಸುವ ಯೋಚನೆ ಮಾಡಿದೆ ಎಂದು ಎಸ್. ಲಕ್ಷ್ಮೀನಾರಾಯಣನ್ ಹೇಳಿದರು.