ದಾಬಸ್‍ಪೇಟೆ: ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು ಸರ್ಕಾರಿ ಕನ್ನಡ ಶಾಲೆಗಳ ಮರಣಶಾಸನವಾಗಿದೆ ಎಂದು ಎಐಡಿಎಸ್‍ಒ ಸಂಘಟನೆ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣಕುಮಾರ್ ಆರೋಪಿಸಿದರು.
ನೆಲಮಂಗಲ ತಾಲೂಕಿನ ಬಸವನಹಳ್ಳಿ ಹಾಗೂ ಬರದಿಮಂಡಿಗೆರೆ, ಮಾಚೋನಾಯಕನಹಳ್ಳಿ ಹಾಗೂ ಬೆಟ್ಟಹಳ್ಳಿಯ ಸರ್ಕಾರಿ ಶಾಲೆಯ ಪೋಷಕರು ಹಾಗೂ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಬಿಇಒಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.ನಮ್ಮೂರ ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ, ರೈತ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸಲು ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಎಂಬ ಮಾರಕ ನೀತಿ ಜಾರಿಗೊಳಿಸಿದೆ. ತಾಲೂಕಿನ ಬಸವನಹಳ್ಳಿ ಹಾಗೂ ಬರದಿಮಂಡಿಗೆರೆ ವ್ಯಾಪ್ತಿಯ 25ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದು, ಸರ್ಕಾರದ ಈ ಕರಾಳ ನೀತಿ ವಿರುದ್ಧ ಹೋರಾಡಬೇಕಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಲ್ಲಿ ಸುತ್ತಮುತ್ತಲಿನ ಶಾಲೆಗಳನ್ನು ವಿಲೀನಗೊಳಿಸುವ ಸಂಚನ್ನು ತಡೆಯಬೇಕು ಎಂದರು.
ಸಂಘಟನೆ ರಾಜ್ಯ ಖಜಾಂಚಿ ಸುಭಾಷ್ ಮಾತನಾಡಿ, ಶಾಲೆ ಮುಚ್ಚುವುದಿಲ್ಲ ಎಂದು ಬಾಯಿ ಮಾತಿನಲ್ಲಿ ಹೇಳುವ ಸರ್ಕಾರ ಅದನ್ನು ಲಿಖಿತ ರೂಪದಲ್ಲಿ ಕೊಡಲು ಸಿದ್ದವಿಲ್ಲ. ಹಳ್ಳಿ ಶಾಲೆಗಳನ್ನು ಮೂಲಸೌಕರ್ಯಗಳಿಂದ ವಂಚಿಸಿ, ಅವು ತಾವಾಗಿಯೇ ಮುಚ್ಚಿ ಹೋಗುವಂತೆ ಮಾಡುವ ವ್ಯವಸ್ಥಿತ ಸಂಚು ಈ ನೀತಿಯಲ್ಲಿ ಅಡಗಿದೆ. ರಾಮನಗರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ ವಿಲೀನ ಮಾಡುತ್ತಿರುವುದು ಈ ಯೋಜನೆಯ ಕರಾಳ ಅರಿವಾಗುತ್ತದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ನೆಲಮಂಗಲ ತಾಲೂಕಿನಲ್ಲಿ ಪ್ರಸ್ತುತ ಯಾವುದೇ ಸರ್ಕಾರಿ ಶಾಲೆ ಮುಚ್ಚಿಲ್ಲ, ಕೇವಲ ಇಬ್ಬರು ಮಕ್ಕಳಿದ್ದರೂ ಶಾಲೆ ನಡೆಸುತ್ತಿದ್ದೇವೆ. ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದೂ ಇಲ್ಲ. ಶಿಕ್ಷಕರನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಬಲವಂತವಾಗಿ ವರ್ಗಾವಣೆ ಮಾಡಲ್ಲ. ಒಂದು ಮಗುವಿರುವ ಶಾಲೆಗಳ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ವಿಷಯವಾಗಿ ಇಲ್ಲಿವರೆಗೂ ನಮಗೆ ಯಾವುದೇ ಆದೇಶವೂ ಇಲ್ಲ ಎಂದು ತಿಳಿಸಿದರು.
ಈ ವೇಳೆ ರಾಜ್ಯ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜ್ಞಾನಮೂರ್ತಿ, ಶಿವಪ್ರಕಾಶ್, ವಿನಯ್ ಸಾರಥಿ, ಎಂ.ಹಂಸ, ಐಶ್ವರ್ಯ, ನಿರ್ಮಲ, ಕಲಾವತಿ, ಬೂದಿಹಾಲ್ ಮುನಿರಾಜು, ಉಪೇಂದ್ರ, ಮಾಚೋನಾಯಕನಹಳ್ಳಿಯ ನಾಗರಾಜು, ಹನುಮಂತರಾಯಪ್ಪ, ರಾಜಮ್, ಗೋವಿಂದರಾಜು, ವಜ್ರಕಟ್ಟೆಪಾಳ್ಯದ ರಘು, ನಾಗರಾಜು, ಕೌಡಿಪಾಳ್ಯದ ಭೀಮಣ್ಣ, ರೇಣುಕಾ, ಶಿವಮ್ಮ, ಲಕ್ಷ್ಮೀ, ಮೈಲನಹಳ್ಳಿ ನಟರಾಜು ಹಾರಿದ್ದರು.
ಪೋಟೋ 5 :
ನೆಲಮಂಗಲ ತಾಲೂಕಿನ ಬಸವನಹಳ್ಳಿ, ಬರದಿಮಂಡಿಗೆರೆ, ಮಾಚೋನಾಯಕನಹಳ್ಳಿ ಹಾಗೂ ಬೆಟ್ಟಹಳ್ಳಿಯ ಸರ್ಕಾರಿ ಶಾಲೆ ಪೋಷಕರು ಹಾಗೂ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಬಿಇಒ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.