ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿಯು ಗುರುವಾರ ನಗರದ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅನೇಕ ಸಲಹೆ ಹಾಗೂ ಸೂಚನೆ ‌ನೀಡಿತು.

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಹೊರರೋಗಿಗಳ ದಾಖಲಾತಿ ಕೊಠಡಿ, ಔಷಧಿಗಳ ದಾಸ್ತಾನು ಕೊಠಡಿ, ಅಡುಗೆ ಮನೆ, ಶಸ್ತ್ರಚಿಕಿತ್ಸಾ ವಿಭಾಗ, ಮಾನಸಿಕ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಕೆಲವು ವಿಭಾಗದಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು ಎಂದು ಸೂಚಿಸಿತು.

ಈ ವೇಳೆ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಆಸ್ಪತ್ರೆಯ ನೋಂದಣಿ ಶುಲ್ಕ ಹೆಚ್ಚಿಸಿದರೆ ಅವಶ್ಯಕವಿರುವ ಸೌಲಭ್ಯಕ್ಕೆ ಬಳಸಿಕೊಳ್ಳಬಹುದು. ಆಸ್ಪತ್ರೆ ಆವರಣದಲ್ಲಿನ ರಸ್ತೆಗಳನ್ನು ದುರಸ್ತಿಪಡಿಸಬೇಕು. ಆಸ್ಪತ್ರೆ ಅಗತ್ಯವಿರುವ ಮೂಲಕಭೂತ ಸೌಕರ್ಯ ಪಟ್ಟಿ ನೀಡಿದರೆ, ಅನುದಾನ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಭರವಸೆ ನೀಡಿದರು‌.

ಸಮಿತಿಯ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿ, ಗ್ರಾಮೀಣ ಭಾಗದಿಂದ ಹೆಚ್ಚಿನ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸ್ಕ್ಯಾನಿಂಗ್ ಹಾಗೂ ಔಷಧಿಗೆ ಹೊರಗಡೆಗೆ ಬರೆಯಲಾಗುತ್ತಿದ್ದು, ಇದರಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ದೊರಕುವ ಎಲ್ಲಾ ಸೌಲಭ್ಯವನ್ನು ರೋಗಿಗಳಿಗೆ ನೀಡಬೇಕು ಎಂದು ತಾಕೀತು ಮಾಡಿದರು.


ರೋಗಿಗಳು ತಪಾಸಣೆಗಾಗಿ ಪರದಾಡಬಾರದು. ಅವರಿಗೆ ಸಮರ್ಪಕವಾಗಿ ಮಾಹಿತಿ ಒದಗಿಸಬೇಕು. ವೈದ್ಯರು ರೋಗಿಗಳನ್ನು ಮಾನವೀಯತೆ ದೃಷ್ಟಿಯಿಂದ ಕಾಣಬೇಕು. ಆಸ್ಪತ್ರೆಗೆ ಅಗತ್ಯವಿರುವ ಒಂದು ಅತ್ಯಾಧುನಿಕ ಆಂಬ್ಯುಲೆನ್ಸ್‌ನ್ನು ನನ್ನ ಅನುದಾನದಲ್ಲಿ ಒದಗಿಸಿಕೊಡಲಾಗುವುದು ಎಂದು ಸ್ಥಳದಲ್ಲಿಯೇ ಘೋಷಿಸಿದರು.

ವಿಧಾನ ಪರಿಷತ್ ಸದಸ್ಯರಾದ ಶರವಣ ಅವರು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಷ್ಟೇ ಈ ಆಸ್ಪತ್ರೆಯಲ್ಲಿ ಸೇವೆ ದೊರಕಬೇಕು. ಗುಣಮಟ್ಟ ಚಿಕಿತ್ಸೆ ನೀಡುವ ಮೂಲಕ ರೋಗಿಗಳಲ್ಲಿ ಭರವಸೆ ಮೂಡಿಸಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಮಿತಿಯು ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೇಷ್ಮೆ ಸೀರೆಗಳನ್ನು ಪೂರೈಸಬೇಕು ಎಂದು ಸೂಚಿಸಿತು.

ಈ ವೇಳೆ ಎಂಎಂಸಿ & ಆರ್‌ಐ ಡೀನ್ ಡಾ.ದಾಕ್ಷಾಯಿಣಿ, ಕೆ.ಅರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಎಚ್.ಪಿ. ಶೋಭಾ ಸೇರಿದಂತೆ ಮುಂತಾದವರು ಹಾಜರಿದ್ದರು.