ಸಾರಾಂಶ
ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಗೆ ನೀರು ಹರಿದು ಬಂದಿದ್ದು, ತಾಲೂಕಿನ ರೈತರ ಆಸೆ ಕೊನೆಗೂ ಈಡೇರಿದೆ. ಕಳೆದ ವರ್ಷ ಸಕಾಲಕ್ಕೆ ಮಳೆ ಇಲ್ಲದೇ ಸಂಕಷ್ಟ ಅನುಭವಿಸಿದ್ದ ರೈತರು, ಈ ಬಾರಿ ಉತ್ತಮ ಮಳೆಯಾಗಿದೆಯಾದರೂ ಸಮರ್ಪಕ ಫಸಲು ಪಡೆಯುವಲ್ಲಿ ಕೊಂಚ ತೊಂದರೆ ಅನುಭವಿಸುವಂತಾಗಿತ್ತು. ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕೆಂಬ ರೈತರ ಬೇಡಿಕೆಗೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ವಿಶೇಷ ಕಾಳಜಿಗೆ ಆಲಮಟ್ಟಿ ಲಾಲಬಹಾದ್ದೂರ ಜಲಾಶಯದಿಂದ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಗೆ ನೀರು ಹರಿದಿರುವುದರಿಂದ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಶಾಸಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.ಮುಂಗಾರು ಹಾಗೂ ಹಿಂಗಾರು ಸಮಯದಲ್ಲಿ ಮಳೆ ಸಮರ್ಪಕವಾಗಿ ಆಗದಿರುವುದರಿಂದ ತೊಗರಿ ಸೇರಿದಂತೆ ಇತರೆ ಬೆಳೆಗಳು ಕೈ ಕೊಡುತ್ತಿದ್ದವು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಚಿಮ್ಮಲಗಿ ಏತ ನೀರಾವರಿ ಕಾಲುವೆಗಳ ನೀರು ಹರಿಸುವ ದಾರಿಯನ್ನೇ ಚಾತಕ ಪಕ್ಷಿಯಂತೆ ಕಾತುರದಿಂದ ಕಾಯುತ್ತ ಕುಳಿತಿದ್ದ ರೈತರಿಗೆ ಶಾಸಕ ನಾಡಗೌಡರು ಮುಂದಾಲೋಚನೆಯಿಂದ ಚಿಮ್ಮಲಗಿ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನದಿಂದಾಗಿ ಬತ್ತಿಹೋಗಿದ್ದ ಮುದ್ದೇಬಿಹಾಳ-ತಾಳಿಕೋಟಿ ತಾಲೂಕುಗಳ ರೈತರ ಮೊಗದಲ್ಲೀಗ ಮಂದಹಾಸ ಮೂಡಿದೆ. ಇದಕ್ಕೆ ಕಾರಣ ಸೋಮವಾರ ಬೆಳ್ಳಂಬೆಳಗ್ಗೆ ಅವರ ಜಮೀನುಗಳಿಗೆ ಜೀವ ತುಂಬಲು ಸಾಕ್ಷಾತ್ ಕೃಷ್ಣೆಯೇ ಹರಿದು ಬಂದಿದ್ದಾಳೆ ಎನ್ನುವಂತಾಗಿತ್ತು.
10 ದಿನಗಳ ಕಾಲ ನೀರು:ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಗೆ ನೀರು ಬಿಡಲಾಗಿದ್ದು, 10 ದಿನಗಳ ಕಾಲ ನೀರು ಹರಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಮುಂಬರುವ ಬೇಸಿಗೆ ಸಮಯದಲ್ಲಿ ಭೂಮಿಯ ಅಂತರ್ಜಲ ಹೆಚ್ಚಿಸುವಲ್ಲಿ, ಕೆರೆಗಳನ್ನು ತುಂಬಿಸಲು ಸಹಕಾರಿಯಾಗಲಿದೆ. ಇದರಿಂದ ಈ ಭಾಗದ ಸಾವಿರಾರು ಎಕರೆ ಭೂಮಿಗೆ ಸಾಕಾಗುವಷ್ಟು ನೀರು ಪೂರೈಸಿದಂತಾಗುತ್ತದೆ. ಅಲ್ಲದೇ, ರೈತರಿಗೆ ಸಕಾಲದಲ್ಲಿ ಬೆಳೆ ತೆಗೆಯಲು ಸಹ ಅನುಕೂಲವಾಗಲಿದೆ.
ಮತಕ್ಷೇತ್ರ ವ್ಯಾಪ್ತಿಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಎರಡು ತಾಲೂಕುಗಳ ಅನ್ನದಾತರ ಹಿತ ಕಾಯುತ್ತ ಬಂದಿರುವ ಶಾಸಕ ಸಿ.ಎಸ್.ನಾಡಗೌಡರು ರೈತರ ಮನವಿಗೆ ಸ್ಪಂದಿಸಿದ್ದು, ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಸರ್ಕಾರದ ನೀರಾವರಿ ಸಚಿವ ಮೇಲೆ ಒತ್ತಡ ಹಾಕಿ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಡಗೌಡರ ಪ್ರಯತ್ನಕ್ಕೆ ಕ್ಷೇತ್ರದಾದ್ಯಂತ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅನ್ನದಾತರು ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.ಕೋಟ್.......
ಕಳೆದ ವರ್ಷ ಸಕಾಲಕ್ಕೆ ಮಳೆ ಇಲ್ಲದೆ ಬಹುತೇಕ ರೈತರು ಸಂಕಷ್ಟ ಅನುಭವಿಸುವಂತಾಯಿತು. ಈ ಬಾರಿ ಉತ್ತಮ ಮಳೆಯಾಗಿದೆಯಾದರೂ ಸಮರ್ಪಕ ಫಸಲು ಪಡೆಯುವಲ್ಲಿ ಕೊಂಚ ತೊಂದರೆ ಅನುಭವಿಸುವಂತಾಯಿತು. ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕೆಂಬ ರೈತರ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಒತ್ತಾಯಿಸಿ ಚಿಮ್ಮಲಗಿ ಏತ ನೀರಾವರಿಯ ಕಾಲುವೆಗಳಿಗೆ ನೀರು ಹರಿಸಲಾಗಿದೆ. ರೈತರು ನೀರು ವ್ಯರ್ಥ ಮಾಡದೇ ಅಗತ್ಯವಿರುವ ನೀರನ್ನು ಕುಡಿಯಲು ಬಳಸಿಕೊಳ್ಳಬೇಕು.-ಸಿ.ಎಸ್.ನಾಡಗೌಡ, ಶಾಸಕರು, ಅಧ್ಯಕ್ಷರು, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ.--------ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ನಿರ್ಮಿಸಿದ ಕಾಲುವೆಗಳಿಗೆ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚಿಸಿ ನೀರು ಹರಿಯುವಂತೆ ಮಾಡಿದ್ದರಿಂದ ತಾಲೂಕಿನ ರೈತರ ತಮ್ಮ ಹೊಲಗಳಲ್ಲಿನ ಉಳ್ಳಾಗಡ್ಡಿ, ಮೆಕ್ಕೆಜೋಳ, ಗೋಧಿ ಬೆಳೆಗಳಿಗೆ ತುಂಬಾ ಅನುಕೂಲವಾಗಲಿದೆ. ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶಾಸಕ ಸಿ.ಎಸ್.ನಾಡಗೌಡವರಿಗೆ ಹಾಗೂ ರಾಜ್ಯ ಸರ್ಕಾರ ಕೃತಜ್ಞತೆ ಸಲ್ಲಿಸುತ್ತೇನೆ.
-ಶಿವಶಂಕರಗೌಡ ಹಿರೇಗೌಡರ, ತಾಲೂಕು ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಸಮಿತಿ.