ಸಾರಾಂಶ
ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆಆಚರಣೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಕೃಷ್ಣಮಠದಲ್ಲಿ ಆ. 26 ಮತ್ತು 27ರಂದು ನಡೆಯುವ ವೈಭವ - ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಆಚರಣೆಗೆ ಭರದಿಂದ ಸಿದ್ದತೆಗಳು ನಡೆಯುತ್ತಿವೆ. ಈ ಬಾರಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಈ ಹಬ್ಬವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವ ಎಂದು ಆಚರಿಸಲು ನಿರ್ಧರಿಸಿದ್ದು, ಅದರಂತೆ ಈಗಾಗಲೇ ಕೃಷ್ಣಮಠದಲ್ಲಿ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನ, ಉಪನ್ಯಾಸಗಳು ನಡೆಯುತ್ತಿವೆ.ಉಡುಪಿಯ ಕೃಷ್ಣ ಜನ್ಮಾಷ್ಟಮಿಯ ವಿಶೇಷತೆ ಇರುವುದು ಮರುದಿನ ಮೊಸರಕುಡಿಕೆ ಹಬ್ಬ ಅಥವಾ ವಿಟ್ಲಪಿಂಡಿ ಆಚರಣೆಯಲ್ಲಿ. ಅಂದು ರಥಬೀದಿಯಲ್ಲಿ ಕೃಷ್ಣನ ಮಣ್ಣಿನ ಮೂರ್ತಿಗೆ ರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಗೊಲ್ಲವೇಷಧಾರಿಗಳು ಕೃಷ್ಣನ ಬಾಲ್ಯದ ಲೀಲೋತ್ಸವಗಳನ್ನು ಪ್ರತಿನಿಧಿಸುವಂತೆ ರಥಬೀದಿಯಲ್ಲಿ ಮೊಸರುಕುಡಿಕೆ ಆಟವನ್ನು ಆಡುತ್ತಾರೆ.
ರಥಬೀದಿಯಲ್ಲಿ ಅಲ್ಲಲ್ಲಿ ಎತ್ತರದ ಗುರ್ಜಿಗಳಲ್ಲಿ ಮೊಸರು, ಕಜ್ಜಾಯ, ಓಕುಳಿ ನೀರು ಇತ್ಯಾದಿಗಳನ್ನು ಕಟ್ಟಿರುವ ಮಡಕೆಗಳಲ್ಲಿ ಗೊಲ್ಲವೇಷಧಾರಿಗಳು ಕುಣಿಯುತ್ತಾ ಕೊಲುಗಳಿಂದ ಹಾರಿ ಒಡೆಯುತ್ತಾರೆ ಮತ್ತು ಬಾಯಿ ಬಡಿದುಕೊಳ್ಳುತ್ತಾರೆ. ಈ ಸಾಂಪ್ರದಾಯಿಕ ಗುರ್ಜಿಗಳ ನಿರ್ಮಾಣ ಕಾರ್ಯ ಈಗ ರಥಬೀದಿಯಲ್ಲಿ ನಡೆಯುತ್ತಿದೆ.ಈ ಉತ್ಸವದ ಇನ್ನೊಂದು ವಿಶೇಷತೆ ಹುಲಿವೇಷಧಾರಿಗಳ ಕುಣಿತ, ರಥಬೀದಿಯಲ್ಲಿ ಅಲ್ಲಲ್ಲಿ ಹಾಕಿರುವ ವೇದಿಕೆಗಳ ಮೇಲೆ ತಂಡೋಪತಂಡಗಳಲ್ಲಿ ಹುಲಿವೇಷಧಾರಿಗಳು ನಾನಾ ರೀತಿಯಲ್ಲಿ ಕುಣಿದು, ಮಣಿದು ನೆರೆದ ಜನರಿಗೆ ಭರಪೂರ ಮನೋರಂಜನೆ ನೀಡುತ್ತಾರೆ.
ಉಡುಪಿ ಕೃಷ್ಣಮಠದಲ್ಲಿ ನಡೆಯುವ ಕೃಷ್ಣಜನ್ಮಾಷ್ಟಮಿಯ ವೈಶಿಷ್ಟ್ಯ ಎಂದರೆ, ಅಂದು ಕೃಷ್ಣನ ಭಕ್ತರು ಇಡೀದಿನ ಉಪವಾಸ ಇದ್ದು, ವೃತ, ಪಾರಾಯಣಗಳನ್ನು ನಡೆಸುತ್ತಾರೆ. ಅಂದು ಮಧ್ಯರಾತ್ರಿ ಪರ್ಯಾಯ ಶ್ರೀಗಳು ಕೃಷ್ಣನಿಗೆ ಗರ್ಭಗುಡಿಯಲ್ಲಿ ಮತ್ತು ಚಂದ್ರನಿಗೆ ತುಳಸಿ ಕಟ್ಟೆಯಲ್ಲಿ ಅರ್ಘ್ಯಪ್ರದಾನ ಮಾಡಿ, ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆಗೆ ಅವತಾರ ಎತ್ತಿದ ಕೃಷ್ಣನಿಗೆ ಅಭಾರ ಸಲ್ಲಿಸುತ್ತಾರೆ.ಬಾಲಕೃಷ್ಣನಿಗೆ ಅರ್ಪಿಸುವುದಕ್ಕೆ ಹತ್ತಾರು ಬಗೆಯ ಲಡ್ಡು, ಚಕ್ಕುಲಿ, ಕಜ್ಜಾಯಗಳನ್ನು ನೂರಾರು ಮಂದಿ ಬಾಣಸಿಗದರು ಮೂರ್ನಾಲ್ಕು ದಿನಗಳಿಂದಲೇ ತಯಾರಿಸಲಾರಂಭಿಸುತ್ತಾರೆ. ಈ ಬಾರಿ ಪರ್ಯಾಯ ಶ್ರೀಗಳು ಇದನ್ನು ಲಡ್ಡು ಉತ್ಸವ ಎಂದು ಆಚರಿಸುವುದಕ್ಕೆ ನಿರ್ಧರಿಸಿದ್ದಾರೆ.