ಮಹಾ ಸರ್ಕಾರಕ್ಕೆ ಬುದ್ಧಿ ಕಲಿಸಿದ ಕೃಷ್ಣೆ

| Published : May 28 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜ್‌ ಮೂಲಕ ಕರ್ನಾಟಕಕ್ಕೆ ಹರಿದು ಬರುವ ನೀರನ್ನು ತಡೆ ಹಿಡಿದಿದ್ದ ಮಹಾರಾಷ್ಟ್ರಕ್ಕೆ ಕೃಷ್ಣೆಯೇ ಬುದ್ಧಿ ಕಲಿಸಿದ್ದಾಳೆ. ನಿನ್ನೆಯಷ್ಟೇ ಬ್ಯಾರೇಜ್‌ನ ಗೇಟಗಳನ್ನು ಹಾಕಿದ್ದ ಮಹಾ ಸರ್ಕಾರ ನಾಚಿಕೆ ಪಟ್ಟುಕೊಳ್ಳುವಂತಾಗಿದೆ. ನೈಸರ್ಗಿಕವಾಗಿ ಕೃಷ್ಣಾ ನದಿಗೆ ಸೋಮವಾರದಿಂದ ನೀರು ಹರಿದು ಬರುತ್ತಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜ್‌ ಮೂಲಕ ಕರ್ನಾಟಕಕ್ಕೆ ಹರಿದು ಬರುವ ನೀರನ್ನು ತಡೆ ಹಿಡಿದಿದ್ದ ಮಹಾರಾಷ್ಟ್ರಕ್ಕೆ ಕೃಷ್ಣೆಯೇ ಬುದ್ಧಿ ಕಲಿಸಿದ್ದಾಳೆ. ನಿನ್ನೆಯಷ್ಟೇ ಬ್ಯಾರೇಜ್‌ನ ಗೇಟಗಳನ್ನು ಹಾಕಿದ್ದ ಮಹಾ ಸರ್ಕಾರ ನಾಚಿಕೆ ಪಟ್ಟುಕೊಳ್ಳುವಂತಾಗಿದೆ. ನೈಸರ್ಗಿಕವಾಗಿ ಕೃಷ್ಣಾ ನದಿಗೆ ಸೋಮವಾರದಿಂದ ನೀರು ಹರಿದು ಬರುತ್ತಿದೆ.

ಗಡಿ ವಿಚಾರದಲ್ಲಿ ಆಗಾಗ್ಗೆ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಸರ್ಕಾರ, ಈಗ ಕೃಷ್ಣಾ ನದಿ ನೀರಿನ ವಿಚಾರದಲ್ಲೂ ಹೊಟ್ಟೆಕಿಚ್ಚು ಪಡುತ್ತಿದೆ. ರಾಜಾಪುರ ಬ್ಯಾರೇಜ್‌ನ ಗೇಟ್ ಹಾಕಿ ಕರ್ನಾಟಕಕ್ಕೆ ಹರಿದು ಬರುತ್ತಿರುವ 2500 ಕ್ಯುಸೆಕ್ ನೀರನ್ನು ತಡೆ ಹಿಡಿದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ, ಮಹಾರಾಷ್ಟ್ರ ಪಶ್ಚಿಮ ಘಟ್ಟ ಹಾಗೂ ಸಯ್ಯಾದ್ರಿ ಶ್ರೇಣಿಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣೆಗೆ 800-1000 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರ ಸರ್ಕಾರ ಮೊಂಡುತನ ಮಾಡಿ ಗೇಟ್ ಹಾಕಿದರೂ ಸೇತುವೆ ಮೇಲಿಂದ ನೀರು ಹರಿದು ಬರುತ್ತಿದ್ದು, ಮಹಾರಾಷ್ಟ್ರ ಸರ್ಕಾರ ನಾಚಿಕೆ ಪಡುವಂತಾಗಿದೆ.

ಈಗಾಗಲೇ ಕೊಲ್ಲಾಪುರ, ಜಿಲ್ಲೆಯ ಹಲವು ಘಟ್ಟ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕೃಷ್ಣಾ ನದಿಯ ಉಪ ನದಿಗಳಾದ ವೇದಗಂಗಾ ಹಾಗೂ ದೂದಗಂಗಾ ನದಿಗಳ ಒಳ ಹರಿವು ಹೆಚ್ಚಾಗಿದ್ದು ಕರ್ನಾಟಕದತ್ತ ನೀರು ಹರಿದು ಬರುತ್ತಿದ್ದು ಮಹೀಷವಾಡಗಿ ಸೇತುವೆ ದಾಟಿದ್ದು, ಇನ್ನೇರಡು ದಿನಗಳಲ್ಲಿ ಹಿಪ್ಪರಗಿ ಆಣೆಕಟ್ಟೆಗೆ ನೀರು ತಲುಪಲಿದೆ. ಮಹಾರಾಷ್ಟ್ರ ಸರ್ಕಾರ ಹೊಟ್ಟೆಕಿಚ್ಚಿನಿಂದ ಪೊಲೀಸ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಗಸ್ತು ನೇಮಿಸಿದರೂ ನಿಸರ್ಗವೇ ಅವರಿಗೆ ತಕ್ಕ ಪಾಠ ಕಲಿಸಿದ್ದು, ಕೃಷ್ಣೆಯ ಒಡಲು ತುಂಬಿ ಹರಿಯುತ್ತಿದ್ದಾಳೆ.

----------

ಬಾಕ್ಸ್‌...

ರೈತರ ಮೊಗದಲ್ಲಿ ಮಂದಹಾಸ

ಭೀಕರ ಬರಗಾಲದಿಂದ ಗಡಿ ಭಾಗದ ಹಳ್ಳಿಗಳು ಹಾಗೂ ಕೃಷ್ಣಾ ತೀರದ ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ಕೊಂಕಣ ಭಾಗದಲ್ಲಿ ಸುರಿದ ಮಳೆಯಿಂದಾಗಿ ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣೇಗೆ ನೀರು ಹರಿದು ಬಂದಿತ್ತು. ಇದರಿಂದ ಹೊಟ್ಟೆ ಉರಿದುಕೊಂಡಿದ್ದ ಮಹಾರಾಷ್ಟ್ರ ಸರ್ಕಾರ ನಿನ್ನೆಯಷ್ಟೇ ಬ್ಯಾರೇಜ್‌ನ ಗೇಟ್‌ಗಳನ್ನು ಬಂದ್ ಮಾಡಿ ರೈತರ ಆಸೇಗೆ ತನ್ನಿರೆರಚಿತ್ತು. ಆದರೆ, ಪ್ರಕೃತಿ ಎದುರು ಮಾನವನ ಆಟ ಏನು ನಡೆಯುವುದಿಲ್ಲ ಎಂಬುವುದಕ್ಕೆ ಬ್ಯಾರೇಜ್‌ ಮೇಲ್ಭಾಗದಿಂದ ಸೋಮವಾರ ಮತ್ತೆ ಕೃಷ್ಣೆಗೆ ನೀರು ಹರಿದು ಬರುತ್ತಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಬೀರಿದ್ದು, ಕಬ್ಬು ನಾಟಿ ಮಾಡಲು ಸಜ್ಜಾಗಿದ್ದಾರೆ.