ಕೆಎಸ್‌ಆರ್‌ಟಿಸಿ ಬಸ್‌-ಟ್ಯಾಂಕರ್ ಡಿಕ್ಕಿ: ಹಲವರಿಗೆ ಗಾಯ

| Published : Sep 24 2024, 01:59 AM IST

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಸೋಮವಾರ ಸಂಜೆ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ/ಬಂಟ್ವಾಳ

ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಸೋಮವಾರ ಸಂಜೆ ಸಂಭವಿಸಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ನಡುವೆ ಗುಂಡ್ಯ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಟ್ಯಾಂಕರ್ ಹಾಗೂ ಬಸ್ ಚಾಲಕ ಸಹಿತ ಬಸ್ಸಿನಲ್ಲಿದ್ದ ೨೦ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು. ಈ ಪೈಕಿ ಟ್ಯಾಂಕರ್ ಚಾಲಕ, ಬಸ್ಸಿನಲ್ಲಿದ್ದ ಮಹಿಳೆ ಸಹಿತ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಹಲವು ಪ್ರಯಾಣಿಕರು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.ಕೆಎಸ್‌ಆರ್‌ಟಿಸಿ ಬಸ್‌ ಪಲ್ಟಿ:

ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್‌.ಟಿ.ಸಿ.ಬಸ್ ಪಲ್ಟಿಯಾದ ಘಟನೆ ಬಿ.ಸಿ.ರೋಡು-ವಿಲ್ಲಾಂಪುರ ರಾಜ್ಯ ಹೆದ್ದಾರಿಯ ವಗ್ಗ ಸಮೀಪ ಕೊಪ್ಪಳದಲ್ಲಿ ಸೋಮವಾರ ನಡೆದಿದೆ.ಧರ್ಮಸ್ಥಳದ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.ಸ್ಥಳೀಯ ಯುವಕರು ಬಸ್ಸಿನಿಂದ ಪ್ರಯಾಣಿಕರನ್ನು ಹೊರಗೆ ತೆಗೆಯಲು ಸಹಕರಿಸಿದ್ದಾರೆ. ಮಂಗಳೂರು ವಿಭಾಗಕ್ಕೆ ಸೇರಿದ ಬಸ್ಸು ತಾಂತ್ರಿಕ ದೋಷದಿಂದ ಪಲ್ಟಿಯಾಗಿದೆ ಎನ್ನಲಾಗಿದೆ. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.