ದಸರಾ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅ. 16ರಿಂದ 20ರವರೆಗೆ ರಾಜ್ಯ ಮತ್ತು ಹೊರರಾಜ್ಯದ ವಿವಿಧ ನಗರಗಳಿಗೆ ಕೆಎಸ್ಸಾರ್ಟಿಸಿ ಮೂರು ಸಾವಿರ ಹೆಚ್ಚುವರಿ ಬಸ್ ಸೇವೆ ನೀಡಲಿದೆ.
ಕನ್ನಡ್ರಭ ವಾರ್ತೆ ಬೆಂಗಳೂರು
ದಸರಾ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅ. 16ರಿಂದ 20ರವರೆಗೆ ರಾಜ್ಯ ಮತ್ತು ಹೊರರಾಜ್ಯದ ವಿವಿಧ ನಗರಗಳಿಗೆ ಕೆಎಸ್ಸಾರ್ಟಿಸಿ ಮೂರು ಸಾವಿರ ಹೆಚ್ಚುವರಿ ಬಸ್ ಸೇವೆ ನೀಡಲಿದೆ.ಅ.16ರ ಶುಕ್ರವಾರ ರಾತ್ರಿಯಿಂದ ಅ.20ರವರೆಗೆ ಮೆಜೆಸ್ಟಿಕ್, ಮೈಸೂರು ರಸ್ತೆ, ಶಾಂತಿನಗರ ಬಸ್ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಮೂರು ಸಾವಿರ ಬಸ್‌ಗಳು ಸಂಚರಿಸಲಿವೆ. ಈ ಹೆಚ್ಚುವರಿ ಬಸ್‌ಗಳು ಅ.20 ಮತ್ತು 21ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಾಪಾಸಾಗಲಿವೆ.
ದಸರಾ ಹಬ್ಬ ವೀಕ್ಷಣೆಗೆ ಮೈಸೂರಿಗೆ ತೆರಳುವವರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿಯಾಗಿ 700 ಬಸ್‌ಗಳು ಸೇವೆ ನೀಡಲಿವೆ. ಅದರಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಿಂದ ಮೈಸೂರು ನಗರಕ್ಕೆ 300 ಬಸ್‌ಗಳು ಹಾಗೂ ಮೈಸೂರು ಸುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಸ್ಥಳಗಳಿಗೆ 400 ಬಸ್‌ಗಳು ಸೇವೆ ನೀಡಲಿವೆ.ಮೈಸೂರು-ಮಂಗಳೂರಿಗೆ ವಿಶೇಷ ಪ್ಯಾಕೇಜ್ ಸೇವೆ:
ಮೈಸೂರಿಗೆ ದಸರಾ ವೀಕ್ಷಣೆಗೆ ಬರುವವರಿಗಾಗಿ ಕೆಎಸ್ಸಾರ್ಟಿಸಿ ಅ.15ರಿಂದ 26ರವರೆಗೆ ಒಂದು ದಿನದ ಮೂರು ಪ್ರವಾಸಿ ಪ್ಯಾಕೇಜ್ ಸೇವೆ ಒದಗಿಸುತ್ತಿದೆ. ‘ಗಿರಿದರ್ಶಿನಿ‘ ಪ್ಯಾಕೇಜ್ ಅಡಿ ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ ಸೇರಿ ಇನ್ನಿತರ ಸ್ಥಳಗಳ ಪ್ರವಾಸ. ‘ಜಲದರ್ಶಿನಿ’ ಅಡಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ಹಾರಂಗಿ ಜಲಾಶಯ ಸೇರಿ ಇನ್ನಿತರ ಸ್ಥಳಗಳ ವೀಕ್ಷಣೆ ಹಾಗೂ ‘ದೇವದರ್ಶಿನಿ’ ಅಡಿ ನಂಜನಗೂಡು, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಗಳಿಗೆ ಪ್ರವಾಸಿ ಪ್ಯಾಕೇಜ್ ಸೇವೆ ನೀಡಲಾಗುತ್ತಿದೆ.ಮಂಗಳೂರು ದಸರಾ ವೀಕ್ಷಣೆಗೆ ಬರುವವರಿಗಾಗಿ ಅ. 11ರಿಂದ 20ರವರೆಗೆ 5 ಪ್ರವಾಸಿ ಪ್ಯಾಕೇಜ್ ಸೇವೆ ಒದಗಿಸಲಾಗುತ್ತಿದೆ. ಮಂಗಳೂರು-ತಲಕಾವೇರಿ-ಭಾಗಮಂಡಲ ಪ್ಯಾಕೇಜ್, ಮಂಗಳೂರು ದಸರಾ ಪ್ಯಾಕೇಜ್, ಮಂಗಳೂರು-ಕೊಲ್ಲೂರು ಪ್ಯಾಕೇಜ್, ಮಂಗಳೂರು-ಸಿಗಂದೂರು ಪ್ಯಾಕೇಜ್ ಮತ್ತು ಮಂಗಳೂರು-ಶೃಂಗೇರಿ ಪ್ಯಾಕೇಜ್ ಸೇವೆ ಒದಗಿಸಲಾಗುತ್ತಿದೆ.
