ದಕ್ಷಿಣ ಶಿಕ್ಷಕರ ಕ್ಷೇತ್ರ: ಬಿಜೆಪಿಗೆ ಸೀಟು ಬಿಟ್ಟುಕೊಟ್ಟ ಜೆಡಿಎಸ್!

| Published : May 12 2024, 01:19 AM IST / Updated: May 12 2024, 01:17 PM IST

ಸಾರಾಂಶ

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೂ.3 ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿಗೆ ಸೀಟು ಬಿಟ್ಟುಕೊಟ್ಟಿದೆ.

 ಅಂಶಿ ಪ್ರಸನ್ನಕುಮಾರ್

 ಮೈಸೂರು :  ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೂ.3 ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿಗೆ ಸೀಟು ಬಿಟ್ಟುಕೊಟ್ಟಿದೆ.

ವಿಧಾನ ಪರಿಷತ್ತಿಗೆ ಶಿಕ್ಷಕರ ಹಾಗೂ ಪದವೀಧರ ಆರು ಕ್ಷೇತ್ರಗಳಿಂದ ಚುನಾವಣೆ ನಡೆಯುತ್ತಿದ್ದು, ಐದು ಕಡೆ ಬಿಜೆಪಿ, ಒಂದು ಕಡೆ ಮಾತ್ರ ಜೆಡಿಎಸ್ ಸ್ಪರ್ಧಿಸಲಿದೆ. ಈ ಮೊದಲು ನಾಲ್ಕು ಕಡೆ ಬಿಜೆಪಿ, ಎರಡು ಕಡೆ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಹೇಳಲಾಗಿತ್ತು. ಆದರೆ ತನ್ನ ಭದ್ರಕೋಟೆಯಾದ ಹಳೆಯ ಮೈಸೂರು ಭಾಗದ ಕ್ಷೇತ್ರವನ್ನೇ ಬಿಜೆಪಿಗೆ ಬಿಟ್ಟುಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆ.

ದಕ್ಷಿಣ ಪದವೀಧರ ಕ್ಷೇತ್ರದಿಂದ ಎರಡು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಕೆ.ಟಿ. ಶ್ರೀಕಂಠೇಗೌಡ ಹಾಗೂ ಅರಣ್ಯ ವಸತಿ ಹಾಗೂ ವಿಹಾರಧಾಮದ ಮಾಜಿ ಅಧ್ಯಕ್ಷ ವಿವೇಕಾನಂದ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಶ್ರೀಕಂಠೇಗೌಡರು ಕಳೆದ ಬಾರಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷ ಎಚ್.ಕೆ. ರಾಮು ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಸೋತು ಕಾಂಗ್ರೆಸ್ನ ಮಧು ಜಿ. ಮಾದೇಗೌಡ ಗೆದ್ದಿದ್ದರು. ಶ್ರೀಕಂಠೇಗೌಡರು ಲೋಕಸಭೆಗೆ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಆದರೆ ಸಿ.ಎಸ್. ಪುಟ್ಟರಾಜು, ಸುರೇಶ್ ಗೌಡ, ಡಿ.ಸಿ. ತಮ್ಮಣ್ಣ ಮೊದಲಾದವರು ಆಕಾಂಕ್ಷಿಗಳಿದ್ದರು. ಕೊನೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ಪರ್ಧಿಸಿದ್ದರಿಂದ ಸಾಧ್ಯವಾಗಿರಲಿಲ್ಲ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿರುವುದರಿಂದ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯಲು ಕೆ.ಟಿ. ಶ್ರೀಕಂಠೇಗೌಡ ಪ್ರಯತ್ನ ಆರಂಭಿಸಿದ್ದರು. ಇದರ ಜೊತೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಬೆಂಬಲಿಗ ವಿವೇಕಾನಂದ ಕೂಡ ಟಿಕೆಟ್ಗೆ ಆಕಾಂಕ್ಷಿಯಾಗಿದ್ದರು.

ಕಾಂಗ್ರೆಸ್ನಿಂದ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಕಣಕ್ಕಿಳಿಯುತ್ತಿದ್ದಾರೆ. ಅವರು ಈಗಾಗಲೇ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.2000- ಕಾಂಗ್ರೆಸ್, 2006- ಪಕ್ಷೇತರ, 2012, 2018- ಜೆಡಿಎಸ್. ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸುವ ಸಲುವಾಗಿಯೇ ಅವರು ಮಾ.21 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮರಿತಿಬ್ಬೇಗೌಡರಂತಹ ಪ್ರಬಲರನ್ನು ಎದುರಿಸಬೇಕಾದರೆ ಶ್ರೀಕಂಠೇಗೌಡರಿಗೆ ಟಿಕೆಟ್ ನೀಡಬೇಕು ಎಂಬ ಮಾತು ಕೇಳಿ ಬಂದಿದ್ದವು.

ಕ್ಷೇತ್ರ ತ್ಯಾಗಕ್ಕೆ ಕಾರಣ ಏನು?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣದಿಂದ ಜೆಡಿಎಸ್ ತನ್ನ ಭದ್ರಕೋಟೆಯಾದ ಹಳೇ ಮೈಸೂರು ಭಾಗದಲ್ಲಿ ಸಾಕಷ್ಟು ಮುಜುಗರ ಅನುಭವಿಸುತ್ತಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರ ಈ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿಯೇ ಬರುವುದರಿಂದ ಸಹವಾಸವೇ ಬೇಡ ಎಂದು ಬಿಜೆಪಿಗೆ ಸೀಟು ತ್ಯಾಗ ಮಾಡಿದೆ.

ಶನಿವಾರ ಮೈಸೂರಿನಲ್ಲಿ ಸಭೆ ನಡೆಸಿ ತಾವೇ ಮೈತ್ರಿಕೂಟದ ಅಭ್ಯರ್ಥಿ ಎಂದು ಕೆ.ಟಿ. ಶ್ರೀಕಂಠೇಗೌಡರು ಹೇಳಿದ್ದರು.

ಈಗ ಏನು ಮಾಡುತ್ತಾರೆ ಕಾದು ನೋಡಬೇಕಾಗಿದೆ.

ನಿಂಗರಾಜ್ ಗೌಡ ಪರಿಚಯ

ಮೈಸೂರು ವಿವಿ ಸಿಂಡಿಕೇಟ್ ಹಾಗೂ ಶಿಕ್ಷಣ ಮಂಡಳಿಯ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಪಾಂಡವಪುರ ತಾಲೂಕು ಈರೇಗೌಡನ ಕೊಪ್ಪಲಿನ ಚಿಕ್ಕಮರೀಗೌಡ ಹಾಗೂ ದೇವಮ್ಮ ದಂಪತಿಯ ಪುತ್ರ. ಬಿ.ಎಸ್ಸಿ, ಎಂಎಲ್ಐಎಸ್ಸಿ, ಪಿಎಚ್.ಡಿ ಪದವೀಧರರು. ಮೈವಿವಿ ಸಿಸ್ಟ್ನಲ್ಲಿ ಗ್ರಂಥಪಾಲಕ, ಎಟಿಐನಲ್ಲಿ ಮುಖ್ಯ ಗ್ರಂಥಪಾಲಕರಾಗಿದ್ದರು.

ಮೂರು ದಶಕಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಅಖಿಲ ಭಾರತ ಸಾಹಿತ್ಯ ಪರಿಷತ್ನೊಂದಿಗೆ ಒಡನಾಟ. ಲೋಕಸಭೆ, ವಿಧಾನಸಭೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿದ್ದಾರೆ.