ನಳಿನ್‌ ಕುಮಾರ್‌ ಕಟೀಲ್‌, ವೇದವ್ಯಾಸ್‌ ಕಾಮತ್‌ ನೇತೃತ್ವದ ‘ಕುಡ್ಲದ ಪಿಲಿ ಪರ್ಬ-2025 ಸೀಸನ್‌ 4’

| Published : Oct 03 2025, 01:07 AM IST

ನಳಿನ್‌ ಕುಮಾರ್‌ ಕಟೀಲ್‌, ವೇದವ್ಯಾಸ್‌ ಕಾಮತ್‌ ನೇತೃತ್ವದ ‘ಕುಡ್ಲದ ಪಿಲಿ ಪರ್ಬ-2025 ಸೀಸನ್‌ 4’
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಮಂಗಳವಾರ ‘ಕುಡ್ಲದ ಪಿಲಿಪರ್ಬ-2025’ ಸೀಸನ್ ನಾಲ್ಕನ್ನು ಉದ್ಘಾಟಿಸಲಾಯಿತು.

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಮಂಗಳವಾರ ‘ಕುಡ್ಲದ ಪಿಲಿಪರ್ಬ-2025’ ಸೀಸನ್ ನಾಲ್ಕನ್ನು ಉದ್ಘಾಟಿಸಲಾಯಿತು. ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಉದ್ಘಾಟಿಸಿ, ಎಲ್ಲರೂ ಸೇರಿ ಒಟ್ಟಾಗಿ ಆಚರಿಸುವುದು ಹುಲಿ ಉತ್ಸವ. ನವರಾತ್ರಿ ಉತ್ಸವವನ್ನು ಊರಿಗೆ ಊರೇ ಸಂಭ್ರಮಿಸುತ್ತದೆ. ಕಂಬಳ, ಹುಲಿ ವೇಷ, ಯಕ್ಷಗಾನಗಳು ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸುತ್ತವೆ. ಇವುಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಇವು ಮುಂದಿನ ಪೀಳಿಗೆಗೂ ಮುನ್ನಡೆಯುವ ವಿಶ್ವಾಸವನ್ನು ತೋರಿಸುತ್ತದೆ. ಇದು ಕೇವಲ ಮನೋರಂಜನೆ ಮಾತ್ರವಲ್ಲ ಭಕ್ತಿ, ಭಾವದ ಮೂಲಕ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿಯನ್ನು ಸೂಚಿಸುತ್ತದೆ ಎಂದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಗಣೇಶೋತ್ಸವದಿಂದ ಶುರುವಾಗಿ ನವರಾತ್ರಿ, ದೀಪಾವಳಿ ವರೆಗೆ ಕರಾವಳಿಯಲ್ಲಿ ಉತ್ಸವದ ಮೆರುಗು ಇರುತ್ತದೆ. ಹುಲಿ ವೇಷ ಕೂಡ ಹಿಂದಿನ ಪರಂಪರೆಯನ್ನು ಉಳಿಸಿಕೊಂಡಿರುವುದು ಶ್ಲಾಘನೀಯ ಎಂದರು. ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ತುಳು ನಾಡಿನ ರಂಗ್‌ ರಂಗ್‌ನ ಹುಲಿ ವೇಷ ನವರಾತ್ರಿಯ ಕಳೆ ಹೆಚ್ಚಿಸಿದೆ ಎಂದರು. ವಿ.ಕೆ. ಫರ್ನಿಚರ್ಸ್‌ನ ವಿಠ್ಠಲ್ ಕುಲಾಲ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ, ವಿಖ್ಯಾತ್ ಶೆಟ್ಟಿ, ಅನಿಲ್ ಬೋಳೂರು, ಸಂಜಯ್ ಪೈ, ನರೇಶ್ ಪ್ರಭು ಹಾಗೂ ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳ ಸಹಿತ ಅನೇಕ ಬಿಜೆಪಿ ಪ್ರಮುಖರು ಇದ್ದರು.ಪಿಲಿ ಪರ್ಬ ಗತವೈಭವದ ಮೆಲುಕು: ಶಾಸಕ ವೇದವ್ಯಾಸ್‌ ಕಾಮತ್‌

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅಧ್ಯಕ್ಷತೆ ವಹಿಸಿ, ಪಿಲಿಪರ್ಬ ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಾಲ್ಕನೇ ವರ್ಷದ ಪ್ರಯತ್ನವಾಗಿದೆ. ಸಾಂಪ್ರದಾಯಿಕ ಕಲೆಯಾಗಿರುವ ಈ ಹುಲಿವೇಷಕ್ಕೆ ಇಂದು ಸ್ಪರ್ಧಾಕೂಟದ ಸ್ಪರ್ಶ ಲಭಿಸಿದೆ. ಜಿಲ್ಲೆಯ ಅನುಭವಿ ಹಾಗೂ ನುರಿತ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲ 10 ಹುಲಿವೇಷ ತಂಡಗಳಿಗೂ ಶುಭವಾಗಲಿ ಎಂದರು.