ದೇಶ ಸೇವೆಯಲ್ಲಿದ್ದಾಗ ವೀರಮರಣ ಹೊಂದಿದ ಕುಂದಾಪುರ ಬೀಜಾಡಿಯ ಯೋಧ ಅನೂಪ್ ಪೂಜಾರಿ ಸ್ಮಾರಕ ನಿರ್ಮಾಣಕ್ಕೆ ಜಾಗ ಗುರುತಿಸುವ ಭರವಸೆ ನೀಡಿ ಒಂದೂವರೆ ವರ್ಷ ಕಳೆದದೆ. ಆದರೆ ಇದುವರೆಗೂ ಜಾಗದ ಗಡಿ ಗುರುತು ಮಾಡುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಶ್ರೀಕಾಂತ ಹೆಮ್ಮಾಡಿ

ಕುಂದಾಪುರ: ದೇಶ ಸೇವೆಯಲ್ಲಿದ್ದಾಗ ವೀರಮರಣ ಹೊಂದಿದ ಕುಂದಾಪುರ ಬೀಜಾಡಿಯ ಯೋಧ ಅನೂಪ್ ಪೂಜಾರಿ ಸ್ಮಾರಕ ನಿರ್ಮಾಣಕ್ಕೆ ಜಾಗ ಗುರುತಿಸುವ ಭರವಸೆ ನೀಡಿ ಒಂದೂವರೆ ವರ್ಷ ಕಳೆದದೆ. ಆದರೆ ಇದುವರೆಗೂ ಜಾಗದ ಗಡಿ ಗುರುತು ಮಾಡುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ.ಯೋಧನ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಿಸಬೇಕೆಂಬ ಗ್ರಾಮಸ್ಥರ ಕನಸು ಇದೀಗ ಆಡಳಿತದ ಸ್ಪಂದನೆಗಾಗಿ ಕಾಯುತ್ತಿದೆ.ದೇಶಕ್ಕಾಗಿ ಕೊನೆಯುಸಿರು ಚೆಲ್ಲಿದ ಯೋಧ: ಬೀಜಾಡಿ ನಿವಾಸಿ ಚಂದು ಪೂಜಾರಿ ಹಾಗೂ ನಾರಾಯಣ ಪೂಜಾರಿ ದಂಪತಿ ಪುತ್ರ ಅನೂಪ್ ಪೂಜಾರಿ (33) ಬಡ ಕುಟುಂಬದಲ್ಲಿ ಬೆಳೆದು, ದೇಶ ಸೇವೆಯ ಕನಸನ್ನು ಹೊತ್ತು ಭಾರತೀಯ ಸೇನೆ ಸೇರಿದ್ದರು. ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್‌ನಲ್ಲಿ ಲ್ಯಾನ್ಸ್ ಹವಾಲ್ದಾರ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಕರ್ತವ್ಯನಿಷ್ಠೆ ಹಾಗೂ ದೇಶಪ್ರೇಮದಿಂದ ಸೇನಾ ಬದುಕು ನಡೆಸಿದ್ದರು. ಆದರೆ 2024ರ ಡಿಸೆಂಬರ್‌ನಲ್ಲಿ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾದರು. ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತಂದು ಅವರ ನಿವಾಸದಿಂದ ಅನತಿ ದೂರದಲ್ಲಿರುವ ಬೀಜಾಡಿ ಸಮುದ್ರ ತೀರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಆ ಸಂದರ್ಭದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಅಂತಿಮ ನಮನ ಸಲ್ಲಿಸಿ, ಮಣ್ಣಿನ ಮಗನಿಗೆ ಭಾವಪೂರ್ಣ ವಿದಾಯ ಹೇಳಿದ್ದರು.

ಅನೂಪ್ ಅವರ ಅಗಲಿಕೆಯಿಂದ ಪತ್ನಿ, ಕೇವಲ ಎರಡು ವರ್ಷದ ಹೆಣ್ಣು ಮಗು ಸೇರಿದಂತೆ ಕುಟುಂಬಸ್ಥರು ದುಃಖದ ಕಡಲಲ್ಲಿ ಮುಳುಗಿದ್ದರು. ಆದರೆ ಇದೇ ವೇಳೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ವೀರನ ನೆನಪು ಹುಟ್ಟೂರಿನಲ್ಲಿ ಎಂದೆಂದಿಗೂ ಉಳಿಯಬೇಕು ಎಂಬ ಸಂಕಲ್ಪವೂ ಗ್ರಾಮಸ್ಥರಲ್ಲಿ ಮೂಡಿತ್ತು.ಜಾಗದ ಭರವಸೆ ಇನ್ನೂ ಈಡೇರಿಲ್ಲ: ಅನೂಪ್ ಸ್ಮಾರಕ ನಿರ್ಮಿಸಲು ಸುಮಾರು 50 ಸೆಂಟ್ಸ್ ಭೂಮಿಯನ್ನು ಗುರುತಿಸಿ ನೀಡುವ ಭರವಸೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ್ದರು. ಅಂತ್ಯಕ್ರಿಯೆ ನಡೆದ ಕಡಲತೀರದ ಆಸುಪಾಸಿನಲ್ಲೇ ಸ್ಮಾರಕ ನಿರ್ಮಾಣವಾಗಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಆಶಯವಾಗಿತ್ತು. ಆದರೆ ಭರವಸೆ ಈಡೇರಿಲ್ಲ.ಅಜರಾಮರವಾಗಲಿ ಯೋಧನ ನೆನಪು: ಬೀಜಾಡಿ ಸೇರಿದಂತೆ ಕರಾವಳಿ ಭಾಗಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಪ್ರಮುಖ ಪ್ರವಾಸಿ ತಾಣದ ಸಮೀಪದಲ್ಲೇ ಅನೂಪ್ ಸ್ಮಾರಕ ನಿರ್ಮಾಣವಾದರೆ, ಅದು ಕೇವಲ ಸ್ಮಾರಕವಾಗಿ ಉಳಿಯದೆ ದೇಶಭಕ್ತಿ, ಸೇವಾ ಮನೋಭಾವದ ಸಂದೇಶ ಸಾರುವ ಸ್ಥಳವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಸ್ಮಾರಕದೊಂದಿಗೆ ಅನೂಪ್ ಪೂಜಾರಿ ಅವರ ಪುತ್ಥಳಿ, ಅವರ ಜೀವನಗಾಥೆ, ಸೇನಾ ಸೇವೆ, ದೇಶಕ್ಕಾಗಿ ಮಾಡಿದ ತ್ಯಾಗ ಹಾಗೂ ಸೇನೆಯಲ್ಲಿನ ಸಾಧನೆಗಳನ್ನು ವಿವರಿಸುವ ಫಲಕ ಅಳವಡಿಸಬೇಕು.

-ಅಶೋಕ ಪೂಜಾರಿ ಬೀಜಾಡಿ ಸಾಮಾಜಿಕ ಕಾರ್ಯಕರ್ತ

-ಸಹೋದರನ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಸ್ಮಾರಕ ನಿರ್ಮಿಸುವ ಉದ್ದೇಶ ಕುಟುಂಬಕ್ಕಿದೆ. ಸರ್ಕಾರದಿಂದ ಜಾಗ ಮಂಜೂರಾದರೆ ಸರ್ವರ ಸಹಕಾರದೊಂದಿಗೆ ಸ್ಮಾರಕ ನಿರ್ಮಿಸಲು ಕುಟುಂಬ ಸಿದ್ಧವಾಗಿದೆ. ಆದರೆ ಒಂದೂವರೆ ವರ್ಷ ಕಳೆದರೂ ಜಾಗದ ಗಡಿ ಗುರುತು ಮಾಡುವ ಕಾರ್ಯವೇ ನಡೆದಿಲ್ಲ ಎಂಬ ನೋವಿದೆ.

ಶಿವರಾಮ ಅಮಿನ್, ಯೋಧನ ಸಹೋದರ

-ಅನೂಪ್ ಪೂಜಾರಿ ಅವರ ಸೇವೆಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ. ಬೀಜಾಡಿಯಲ್ಲಿ ಸರ್ಕಾರಿ ಭೂಮಿಯ ಲಭ್ಯತೆ ಕುರಿತು ಜಿಲ್ಲಾಡಳಿತದೊಂದಿಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

ಪ್ರದೀಪ್ ಕುರುಡೇಕರ್, ಕುಂದಾಪುರ ತಹಸೀಲ್ದಾರ್‌