ಕುದುರೆಗುಂಡಿ ಅಪಘಾತ: ಓರ್ವನ ಸಾವು

| Published : May 07 2024, 01:10 AM IST

ಸಾರಾಂಶ

ಕೊಪ್ಪ, ತಾಲೂಕಿನ ಕುದುರೆಗುಂಡಿಯಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಕುದುರೆಗುಂಡಿಯ ಬೂತನಜಡ್ಡುವಿನ ಕೂಲಿ ಕಾರ್ಮಿಕ ಕೆರೆಸ್ವಾಮಿ (೫೭) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೊಪ್ಪ : ತಾಲೂಕಿನ ಕುದುರೆಗುಂಡಿಯಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಕುದುರೆಗುಂಡಿಯ ಬೂತನಜಡ್ಡುವಿನ ಕೂಲಿ ಕಾರ್ಮಿಕ ಕೆರೆಸ್ವಾಮಿ (೫೭) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಇರ್ವರು ಪುತ್ರರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮಂಗಳವಾರ ಮೃತರ ಊರಾದ ಬೂತನಜಡ್ಡುವಿನಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಘಟನೆಯ ವಿವರ : ಸೋಮವಾರ ಮಧ್ಯಾಹ್ನದ ವೇಳೆಗೆ ಕೊಪ್ಪ ಕಡೆಯಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿದ್ದ ಬೆಂಗಳೂರು ಮೂಲದ ಟೊಯೊಟೊ ಕ್ವಾಲಿಸ್ ಕಾರು ಕುದುರೆಗುಂಡಿಯ ಕರ್ನಾಟಕ ಬ್ಯಾಂಕ್ ಮುಂಭಾಗದಲ್ಲಿ ಕೊಪ್ಪ ಕಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸೀತೂರು ಸಮೀಪದ ಸತೀಶ್ ಮಾವಿನಕಟ್ಟೆ (೩೦) ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಂಬದಿ ಸವಾರರಾಗಿದ್ದ ಕೆರೆಸ್ವಾಮಿ (೫೭) ಸ್ಥಳದಲ್ಲಿಯೇ ಮೃತಪಟ್ಟಿದ್ದು ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.