ಕುದುರೆಗುಂಡಿ- ಕಾನೂರು ರಸ್ತೆ ಕೆಲವು ಸಮಯ ಬಂದ್

| Published : Jul 18 2024, 01:32 AM IST

ಸಾರಾಂಶ

ನರಸಿಂಹರಾಜಪುರ: ತಾಲೂಕಿನಲ್ಲಿ ಮಳೆ ಮುಂದುವರಿದ್ದು ಬುಧವಾರ ಬೆಳಿಗ್ಗೆ ಕುದುರೆಗುಂಡಿ- ಕಾನೂರು ರಸ್ತೆಯ ಮೇಲೆ ನೀರು ನಿಂತಿದ್ದರಿಂದ ವಾಹನಗಳು ಬದಲಿ ಮಾರ್ಗವಾದ ಕುದುರೆಗುಂಡಿ- ಗುಡ್ಡೇಹಳ್ಳ, ಹೊಳೆಕೊಪ್ಪ-ಬಾಳೆಹಿತ್ತಲು ಮಾರ್ಗವಾಗಿ ಸಂಚರಿಸಿದವು. 11 ಗಂಟೆ ನಂತರ ರಸ್ತೆಯ ನೀರು ಇಳಿದಿದ್ದು ಮತ್ತೆ ಮಾಮೂಲಿ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು.

ನರಸಿಂಹರಾಜಪುರ: ತಾಲೂಕಿನಲ್ಲಿ ಮಳೆ ಮುಂದುವರಿದ್ದು ಬುಧವಾರ ಬೆಳಿಗ್ಗೆ ಕುದುರೆಗುಂಡಿ- ಕಾನೂರು ರಸ್ತೆಯ ಮೇಲೆ ನೀರು ನಿಂತಿದ್ದರಿಂದ ವಾಹನಗಳು ಬದಲಿ ಮಾರ್ಗವಾದ ಕುದುರೆಗುಂಡಿ- ಗುಡ್ಡೇಹಳ್ಳ, ಹೊಳೆಕೊಪ್ಪ-ಬಾಳೆಹಿತ್ತಲು ಮಾರ್ಗವಾಗಿ ಸಂಚರಿಸಿದವು. 11 ಗಂಟೆ ನಂತರ ರಸ್ತೆಯ ನೀರು ಇಳಿದಿದ್ದು ಮತ್ತೆ ಮಾಮೂಲಿ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು. ಬುಧವಾರ ಬೆಳಿಗ್ಗೆ 10 ಗಂಟೆವರೆಗೆ ಮಳೆ ಜೋರಾಗಿದ್ದು ನಂತರ ಮಧ್ಯಾಹ್ನವರೆಗೆ ಮಳೆ ಕಡಿಮೆಯಾಗಿತ್ತು. ಸಂಜೆ ನಂತರ ಮತ್ತೆ ಮಳೆ ಜೋರಾಗಿ ಸುರಿದಿದೆ. ಮಳೆಯಿಂದ ತಾಲೂಕಿನ ಮೇಗರಮಕ್ಕಿ ಗ್ರಾಮದ ಕಿಚೇಬಿಯ ಸುಭಾಷ್ ಎಂಬುವರ ಮನೆ ಕೆಳಭಾಗದ ಧರೆ ಕುಸಿದಿದೆ. ನರಸಿಂಹರಾಜಪುರ ಪಟ್ಟಣದ ಹಳೇ ಪೇಟೆ ವಾರ್ಡ ನಂ 10 ರಲ್ಲಿ ಸತ್ಯನ್ ನಾಯರ್ ಎಂಬುವರ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ. ಸಂಕ್ಸೆ ಗ್ರಾಮದ ಗೋಣಿಕೊಪ್ಪದ ಎನ್.ಕೆ.ವಿಜಯ ಎಂಬುವರ ಮನೆ ಮುಂಭಾಗದ ಶೆಡ್ ಕಳಚಿ ಬಿದ್ದಿದ್ದು ಶೆಡ್ ನ ಕೆಳಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿದೆ. ಬಾಳೆ ಗ್ರಾಮದ ಕುಡ್ನಳ್ಳಿ ಮಧು ಎಂಬುವರಿಗೆ ಸೇರಿದ ಹಸು ಕಾಡಿಗೆ ಮೇಯಲು ಹೋಗಿದ್ದಾಗ ಮರ ಬಿದ್ದು ಮೃತಪಟ್ಟಿದೆ. ಕಡಹಿನ ಬೈಲು ಗ್ರಾಮ ಪಂಚಾಯಿತಿಯ ನೇರ್ಲೆಕೊಪ್ಪದ ಸಂದೇಶ್ ಅವರ ಮನೆ ಕೊಟ್ಟಿಗೆ ಮೇಲೆ ಮರ ಉರುಳಿ ಬಿದ್ದು ಕೊಟ್ಟಿಗೆಗೆ ಹಾನಿಯಾಗಿದೆ. ಬಡಗಬೈಲು ಗ್ರಾಮದ ಮುರಗನ ಕೆರೆ ಉಮಾ ಎಂಬುವರ ವಾಸದ ಮನೆ ಮೇಲೆ ಅಡಕೆ ಮರ ಉರುಳಿ ಮನೆಗೆ ಹಾನಿಯಾಗಿದೆ. ಮಳೆ, ಗಾಳಿಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹಾಗೇ ಮುಂದುವರಿದಿದೆ. ವಿದ್ಯುತ್ ಬಂದರೂ ಒಂದೆರಡು ಗಂಟೆಯಲ್ಲೇ ಮತ್ತೆ ಹೋಗುತ್ತಿದೆ.