ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎರಡು ವರ್ಷಗಳಿಂದ ರಾಜಕೀಯದಲ್ಲಿ ‘ಸೈಲೆಂಟ್’ ಆಗಿದ್ದ ಕುಮಾರ್ ಬಂಗಾರಪ್ಪ ನರೇಂದ್ರ ಮೋದಿಯವರ ಆಗಮನದ ಬಳಿಕ ಸಕ್ರಿಯರಾಗಿದ್ದು, ಬಿಜೆಪಿಯಲ್ಲಿ, ಅದರಲ್ಲಿಯೂ ಬಿಜೆಪಿ ಅಭ್ಯರ್ಥಿಯೂ ಆದ ಸಂಸದ ಬಿ.ವೈ.ರಾಘವೇಂದ್ರ ನಿರಾಳವಾಗುವಂತೆ ಮಾಡಿದ್ದಾರೆ.ಸೊರಬ ಭಾಗದಲ್ಲಿ ಪ್ರಬಲ ಹಿಡಿತ ಹೊಂದಿರುವ, ಜೊತೆಗೆ ಈಡಿಗ ಸಮುದಾಯದಲ್ಲಿ ತಮ್ಮ ಪ್ರಭಾವವನ್ನು ಗಟ್ಟಿಯಾಗಿಯೇ ಹೊಂದಿರುವ ಕುಮಾರ್ ಬಂಗಾರಪ್ಪ ಅವರ ರಾಜಕೀಯ ನಿರ್ಲೀಪ್ತತೆಯನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸದಿದ್ದರೂ, ಸಂಸತ್ ಚುನಾವಣೆ ವೇಳೆ ಪ್ರಮುಖ ವಿಷಯವಾಗಿ ಮಾರ್ಪಟ್ಟಿತ್ತು. ಯಾರ ಮೇಲೆ ಮುನಿಸು ಹೊಂದಿದ್ದಾರೆ ಎಂಬುದೇ ಗೊತ್ತಾಗದ ರೀತಿಯಲ್ಲಿ ಮೌನಕ್ಕೆ ಜಾರಿದ್ದ, ಎಲ್ಲ ರಾಜಕೀಯ ಚಟುವಟಿಕೆಗಳಿಂದಲೂ ದೂರವಿದ್ದ ಕುಮಾರ್ ಬಂಗಾರಪ್ಪ ಅವರ ಮುಂದಿನ ನಡೆಯೇನು ಎಂಬುದರತ್ತ ಎಲ್ಲರ ಚಿತ್ತ ಹರಿದಿತ್ತು.
ವಿಧಾನಸಭಾ ಚುನಾವಣೆ ವೇಳೆಯಲ್ಲಿ ಕುಮಾರ್ ಬಂಗಾರಪ್ಪಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಒಂದು ಹಂತದಲ್ಲಿ ಮುಂದುವರಿದಾಗ ಸ್ವತಃ ಬಿ.ಎಸ್.ಯಡಿಯೂರಪ್ಪ ಸೊರಬಕ್ಕೆ ಬಂದು ಕುಮಾರ್ ಬಂಗಾರಪ್ಪ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಬೆಂಬಲಿಸಿ, ಗೆಲ್ಲಿಸುವಂತೆ ಮನವಿ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರನ್ನು 4 ವರ್ಷಗಳಿಂದಲೂ ವಿರೋಧಿಸುತ್ತಲೇ ಬಂದಿದ್ದ ‘ನಮೋ ಬ್ರಿಗೇಡ್’ ಹೆಸರಿನ ಮೂಲ ಬಿಜೆಪಿಗರ ತಂಡ ಸೋಲಿಸುವ ಪಣ ತೊಟ್ಟಿತ್ತು. ಇನ್ನೊಂದೆಡೆ ಸರ್ಕಾರಿ ನೌಕರರನ್ನು ಎದುರು ಹಾಕಿಕೊಂಡ ಪರಿಣಾಮ ಮತ ಗಳಿಕೆಯಲ್ಲಿ ಹಿನ್ನೆಡೆಯಾಯಿತು. ಕೊನೆಗೂ ಕುಮಾರ್ ಬಂಗಾರಪ್ಪ ಸೋತರು. ಈ ಸೋಲು ಅವರನ್ನು ತೀರಾ ಹತಾಶರನ್ನಾಗಿ ಮಾಡಿತ್ತು. ಚುನಾವಣಾ ಸೋಲಿನ ಪರಾಮರ್ಶೆ ಸಭೆಗೂ ಹಾಜರಾಗದೆ ದೂರ ಸರಿದು ನಿಂತರು.ಲೋಕಸಭಾ ಚುನಾವಣೆ ಬರುತ್ತಿದ್ದಂತೆ ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಿಸುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಂತ್ರ ಯಶಸ್ಸು ಕಾಣಲಿಲ್ಲ. ಈ ತಂತ್ರದ ಮೂಲಕ ಬಂಗಾರಪ್ಪ ಕುಟುಂಬವನ್ನು ಒಟ್ಟುಗೊಡಿಸಿ ಕಾಂಗ್ರೆಸ್ ಗೆ ದೊಡ್ಡ ಲಾಭ ಮಾಡಿಕೊಡುವ ಯೋಜನೆ ರೂಪಿಸಿದ್ದರು. ಆದರೆ ಮಧು ಬಂಗಾರಪ್ಪ ಶತಾಯಗತಾಯ ಒಪ್ಪದ ಕಾರಣ ಇದು ಕೈಗೂಡಲಿಲ್ಲ. ಆದರೆ ಈ ಸುದ್ದಿ ಬಿಜೆಪಿ ವಲಯದಲ್ಲಿ ಆತಂಕ ಮೂಡಿಸಿದ್ದು ಸುಳ್ಳಲ್ಲ. ತಕ್ಷಣವೇ ಬಿಜೆಪಿ ನಾಯಕರು ಕುಮಾರ್ ಬಂಗಾರಪ್ಪ ಅವರ ಮನವೊಲಿಕೆ ಪ್ರಯತ್ನ ನಡೆಸಿದರೂ ಅದು ಯಶಸ್ಸು ಕಂಡಿರಲಿಲ್ಲ.
ಕಾಂಗ್ರೆಸ್‌ನಿಂದ ಬಂಗಾರಪ್ಪ ಪುತ್ರಿ ಗೀತಾ ಅವರು ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಈಡಿಗ ಮತಗಳ ಕ್ರೋಢೀಕರಣವಾಗುವುದನ್ನು ತಪ್ಪಿಸಲು ಪುನಃ ಕುಮಾರ್ ಬಂಗಾರಪ್ಪ ಮನವೊಲಿಕೆ ಯತ್ನ ಮುಂದುವರೆಯಿತು. ಈಡಿಗ ಸಮಾಜದ ಸಮಾವೇಶವನ್ನು ಕೂಡ ಸಾಗರದಲ್ಲಿ ನಡೆಸಿ ಯಡಿಯೂರಪ್ಪ ಅವರನ್ನು ಅಭಿನಂದಿಸಲಾಯಿತು.ಮಾ.18ರಂದು ಪ್ರಧಾನಿ ನರೇಂದ್ರ ಮೋದಿಯವರ ಶಿವಮೊಗ್ಗದ ಕಾರ್ಯಕ್ರಮದಂದು ವೇದಿಕೆಗೆ ಕುಮಾರ್ ಬಂಗಾರಪ್ಪ ಅವರನ್ನು ಕರೆತಂದು ಸಂದೇಶವೊಂದನ್ನು ರವಾನಿಸಬೇಕೆಂಬ ಪ್ರಯತ್ನ ಯಡಿಯೂರಪ್ಪ ಮತ್ತು ರಾಘವೇಂದ್ರ ನಡೆಸಿದ್ದರು. ಈ ಪ್ರಯತ್ನ ಫಲಕಾರಿಯಾಗಿದ್ದು, ಬಿಜೆಪಿಗೆ ಸಂಭ್ರಮ ತಂದಿತ್ತು. ಅಂದು ವೇದಿಕೆಯಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ನಡೆಸಿಕೊಂಡ ರೀತಿಯೇ ಎಲ್ಲವನ್ನೂ ಹೇಳಿತ್ತು.
ಅದರ ಮುಂದುವರಿದ ಭಾಗವಾಗಿ ಏ.4ರ ಗುರುವಾರ ಸೊರಬಕ್ಕೆ ಭೇಟಿ ನೀಡಿದ್ದ ಬಿ. ವೈ. ರಾಘವೇಂದ್ರ ಅವರು ಕುಮಾರ್ ಬಂಗಾರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಇಬ್ಬರೂ ಒಂದಾಗಿ ಇಡೀ ದಿನ ಸೊರಬ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು. ಸಮಸ್ಯೆ ಬಗೆಹರಿದಂತೆ ಕಂಡು ಬಂದಿದೆ.ಕೊನೆಗೂ ಕುಮಾರ್ ಬಂಗಾರಪ್ಪ ಬಿಜೆಪಿಗೆ ದಕ್ಕಿದರು..!