ಅಶ್ಲೀಲ ವಿಡಿಯೋ ಕೇಸ್: ಉಪ್ಪು ತಿಂದವ್ರು ನೀರು ಕುಡೀಬೇಕು-ಎಚ್‌ಡಿಕೆ

| Published : Apr 29 2024, 01:45 AM IST / Updated: Apr 29 2024, 06:13 AM IST

ಸಾರಾಂಶ

ತನಿಖೆ ಮುಗಿದ ಬಳಿಕ ನಾನು ಮಾತನಾಡುತ್ತೇನೆ. ಸತ್ಯಾಂಶ ಏನೇ ಇದ್ದರೂ ಹೊರಗೆ ಬರಲಿ. ತಪ್ಪು ಎಸಗಿದ್ದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

 ಬೆಂಗಳೂರು :  ಹಾಸನ ಸಂಸದ ಹಾಗೂ ತಮ್ಮ ಸೋದರನ ಪುತ್ರ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪ ಸಂಬಂಧ ಎಸ್‌ಐಟಿ ರಚನೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು.ಹಾಸನ ಜಿಲ್ಲೆಯ ಪ್ರಕರಣದ ತನಿಖೆಗೆ ಮುಖ್ಯಮಂತ್ರಿಗಳು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದ್ದಾರೆ. ಯಾರೇ ತಪ್ಪು ಮಾಡಿರಲಿ. ಈ ನೆಲದ ಕಾನೂನಿನ ಪ್ರಕಾರ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ತಿಳಿಸಿದರು.

ತನಿಖೆಯ ಮೂಲಕ ಎಲ್ಲಾ ಸತ್ಯಾಂಶಗಳು ಹೊರಗೆ ಬರಲಿ. ಯಾರೇ ತಪ್ಪು ಎಸಗಿದ್ದರೂ, ಅವರು ಯಾರೇ ಆಗಿದ್ದರೂ ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವ ಪ್ರಶ್ನೆ ಬರುವುದಿಲ್ಲ. ಆದ್ದರಿಂದ ತನಿಖೆಯ ವರದಿ ಸಂಪೂರ್ಣವಾಗಿ ಹೊರ ಬಂದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದರು.