ಸಾರಾಂಶ
ಹೊಸಪೇಟೆ: ರಾಜ್ಯ ಸರ್ಕಾರ ಕುರುಬರನ್ನು ಎಸ್‌ಟಿಗೆ ಸೇರಿಸುವ ಪ್ರಸ್ತಾವವನ್ನು ಕೈಬಿಡದ ಹಿನ್ನೆಲೆಯಲ್ಲಿ ಮತ್ತು ನಾವು ನೀಡಿದ್ದ ಗಡುವಿನಲ್ಲಿ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅ.7ರಂದು ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಳ್ಳದೇ ಬಹಿಷ್ಕರಿಸಲು ಸಮುದಾಯ ತೀರ್ಮಾನಿಸಿದೆ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ತಿಳಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸಾಂಕೇತಿಕವಾಗಿ ಮಹರ್ಷಿ ವಾಲ್ಮೀಕಿ ಪೂಜೆ ಮಾಡುತ್ತೇವೆ. ಆದರೆ, ಸರ್ಕಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಜಯಂತಿ ಮುಗಿದ ಬಳಿಕ ಮುಂದಿನ ಹೋರಾಟದ ರೂಪುರೇಷೆಗಳನ್ನು ತಿಳಿಸಲಾಗುವುದು. ಸರ್ಕಾರದ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಸರ್ಕಾರಕ್ಕೆ ಹತ್ತು ದಿನಗಳ ಕಾಲ ಗಡುವು ಕೊಟ್ಟಿದ್ದರೂ, ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿದೆ. ಪ್ರಕ್ರಿಯೆ ನಿಲ್ಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಾಲ್ಮೀಕಿ ನಾಯಕ ಸಮುದಾಯದಿಂದ ಆಯ್ಕೆಯಾಗಿರುವ ಶಾಸಕರು, ಸಂಸದರು ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಮುಂದೆ ಅವರನ್ನು ಕೂಡ ಘೇರಾವ್ ಹಾಕಲಾಗುವುದು. ಪತ್ರ ಚಳವಳಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ್ ಮಾತನಾಡಿ, ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲು ಹೊರಟಿದೆ. ನಾವು ಜಯಂತಿಯನ್ನು ಬಹಿಷ್ಕರಿಸುತ್ತಿದ್ದು, ನಮ್ಮ ವಾಲ್ಮೀಕಿಶ್ರೀಗಳು ಕೂಡ ಜಯಂತಿಯಲ್ಲಿ ಪಾಲ್ಗೊಳ್ಳದಿರಲು ಕೋರುತ್ತೇವೆ. ಯಾವುದೇ ರಾಜಕೀಯ ಪಕ್ಷಕ್ಕೆ ಮಾನ್ಯತೆ ಕೊಡದಂತೆ ಇರಬೇಕೆಂಬುದು ನಮ್ಮ ನಿಲುವು ಎಂದರು.ನಮ್ಮ ಸಮುದಾಯದಿಂದ ಆಯ್ಕೆಯಾಗಿರುವ ಎಲ್ಲ ರಾಜಕೀಯ ಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿದ್ದರೂ ಪಕ್ಷಾತೀತವಾಗಿ ಸರಕಾರದ ಈ ಕ್ರಮವನ್ನು ಖಂಡಿಸಬೇಕು. ನಮ್ಮ ಸಮಾಜಕ್ಕಾಗಿ ಸಮಾಜದ ಶಾಸಕರು, ಸಂಸದರು, ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಇದೇ ಮೊಂಡುತನ ಮುಂದುವರೆಸಿದಲ್ಲಿ ಮುಂದಿನ ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಬೆಂಬಲಿಸುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ನಗರಸಭೆ ಸದಸ್ಯರೂ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಲ್ಲಿ ಈ ಮೂಲಕ ಸರಕಾರಿ ಜಯಂತಿಯಲ್ಲಿ ಪಾಲ್ಗೊಳ್ಳದಿರಲು ಮನವರಿಕೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಜನಪಕ್ಷಪಾತ ಹಾಗೂ ಅಧಿಕಾರ ದುರ್ಬಳಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಗಮನ ಕೂಡ ಸೆಳೆಯಲಾಗುವುದು. ದೇಶದ ವಿವಿಧ ರಾಜ್ಯಗಳಲ್ಲಿ ಇರುವ ವಾಲ್ಮೀಕಿ ಸಮಾಜದ ಮುಖಡರನ್ನು ಸಂಪರ್ಕಿಸಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಸಮಾಜ ಸೇರಿದಂತೆ ಇತರೆ ಸಮುದಾಯಗಳನ್ನು ಕೂಡ ಎಸ್‌ಟಿ ಕೆಟಗರಿಗೆ ಸೇರ್ಪಡೆ ಮಾಡಲು ಹೊರಟಿದ್ದಾರೆ. ಲೋಧಾ ಸಮಿತಿ ಈಗಾಗಲೇ ಕುರುಬರನ್ನು ಬುಡಕಟ್ಟು ಸಮುದಾಯ ಎಂದು ಗುರುತಿಸಿಲ್ಲ. ಆದರೂ ಮುಖ್ಯಮಂತ್ರಿ ಅವರು ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.ಮುಖಂಡರಾದ ಗೋಸಲ ಭರಮಪ್ಪ, ಕಿನ್ನಾಳ ಹನುಮಂತ, ಗುಡಿ ಗುಡಿ ಸೋಮನಾಥ, ಗುಜ್ಜಲ ಚಂದ್ರಶೇಖರ, ದೇವೇಂದ್ರಪ್ಪ, ತಾರಿಹಳ್ಳಿ ವೆಂಕಟೇಶ, ಶ್ರೀಕಂಠ, ಬೆಳಗೋಡು ಅಂಬಣ್ಣ, ನೀರಲಗಿ ಹನುಮಂತ, ಗುಡುಗಂಟಿ ಮಲ್ಲಿಕಾರ್ಜುನ ಮತ್ತಿತರರಿದ್ದರು.