ಕನ್ನಡಪ್ರಭ ವಾರ್ತೆ ಭೇರ್ಯ

ಖಾಸಗಿ ಶಾಲೆಗಳ ವ್ಯಾಮೋಹ ತೊರೆದು, ಗುಣಮಟ್ಟದ ಶಿಕ್ಷಣ ಮತ್ತು ಉಚಿತ ಸೌಲಭ್ಯಗಳನ್ನು ನೀಡುತ್ತಿರುವ ನಮ್ಮ ಸರ್ಕಾರಿ ಶಾಲೆಗೆನಿಮ್ಮ ಮಕ್ಕಳನ್ನು ದಾಖಲುಮಾಡಿ ಎಂದು ಸಾಲಿಗ್ರಾಮ ತಾಲೂಕಿನ ಕುರುಬಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಬಿ.ವಿ. ಪ್ರಸನ್ನಕುಮಾರ್ ತಮಟೆ ಬಾರಿಸುವ ಮೂಲಕ ವಿದ್ಯಾರ್ಥಿಗಳೊಂದಿಗೆ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಪೋಷಕರ ಮಾತಿಗೆ ಹೆಚ್ಚು ಬೆಲೆ ಇದೆ, ಪೋಷಕರು ಮತ್ತು ಮಕ್ಕಳನ್ನು ಶಾಲೆಗಳು ಮುಕ್ತ ಸ್ವಾತಂತ್ರ್ಯ ನೀಡಿ ಗೌರವಯುತವಾಗಿ ನಡೆಸಿ ಕೊಳ್ಳುಲಾಗುವುದು, ಪೋಷಕರೇ ಶಾಲಾಭಿವೃದ್ದಿಯ ಅಧ್ಯಕ್ಷರಾಗಿ, ಸದಸ್ಯರಾಗಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ಅವಕಾಶವಿದೆ ಎಂದು ತಮಟೆ ಬಾರಿಸಿ ಕೊಂಡು ಗ್ರಾಮದಲ್ಲಿ ಜಾಥಾ ಮೂಲಕ ಕೂಗುತ್ತಾ ಸಾರಿದರು.

ಪ್ರತಿ ತಿಂಗಳು ಶುಲ್ಕ ಕೊಟ್ಟಿಲ್ಲ ಎಂದು ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸುವ ಪರಿಪಾಠ ಇಲ್ಲ,‌‌ಡೊನೇಷನ್ ನೀಡುವ ಅಗತ್ಯವಿಲ್ಲ ಅದರ ಬದಲು ಮನೆಯಲ್ಲಿಯೇ ಆ ಹಣದಿಂದ ಉತ್ತಮ ಪುಸ್ತಕಗಳನ್ನು ಖರೀದಿಸಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿ ಇದರ ಪ್ರಯೋಜನ ಪಡೆಯಬಹುದು.

ಕ್ರೀಡೆಗೆ ಉತ್ತಮ ಅವಕಾಶವಿದೆ, ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆವಿಗೂ ಸರ್ಕಾರಿ ಶಾಲೆ ಮಕ್ಕಳು ಚಾಂಪಿಯನ್ ಶಿಪ್ ಪಡೆದಿದ್ದಾರೆ ಹಾಗಾಗಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿ ಜಾಥ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು.


ಯಾವುದೇ ಟ್ಯೂಷನ್ ಹಾವಳಿ ಇಲ್ಲ. ಶಾಲೆಯಲ್ಲಿಯೇ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ.‌ಪ್ರತಿ ತಿಂಗಳು ಶಾಲೆಯಿಂದ ಉಚಿತವಾಗಿ ಪ್ರಗತಿ ಪತ್ರ ಕಳುಹಿಸಿಕೊಡಲಾಗುವುದು, ಜೊತೆಗೆ ಪರೀಕ್ಷಾ ಪೂರ್ವ ತರಬೇತಿ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಬಿಸಿಯೂಟದ ವ್ಯವಸ್ಥೆ ಇದ್ದು, ತಾಯಂದಿರು ಬೇಗನೆ ಎದ್ದು, ಡಬ್ಬಿ ತಯಾರು ಮಾಡಿ ಕಳುಹಿಸುವ ಅಗತ್ಯವಿಲ್ಲ, ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ, ಮಕ್ಕಳನ್ನು ಶಾಲೆಗೆ ಸೇರಿಸಲು ದೊಡ್ಡ ಕ್ಯೂಗಳಲ್ಲಿ ಗಂಟೆ ಗಟ್ಟಲೆ ನಿಲ್ಲುವ ಗೋಜಿಲ್ಲ, ಶುಲ್ಕ ಪಾವತಿ ವಿಷಯದಲ್ಲಿ ಪೋಷಕರು ಆತಂಕ ಪಡುವ ಅಗತ್ಯವಿರುವುದಿಲ್ಲ, ನಿಮ್ಮದೇ ಅಧಿಕಾರದ ವಾತಾವರಣ ಕಾಣಬೇಕಿದ್ದರೆ ಸರ್ಕಾರಿ ಶಾಲೆಗೆ ಸೇರಿಸಿಎಂದು ಗ್ರಾಮದ ಪ್ರಮುಖ ಬೀದಿಯಲ್ಲಿ ಮಕ್ಕಳೊಂದಿಗೆ ತಮಟೆ ಬಾರಿಸಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆಗೆ ಕಳುಹಿಸಿ ಎಂಬ ಘೋಷಣೆ ಮೂಲಕ ಪೋಷಕರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಹಶಿಕ್ಷಕ ಟಿ.ಜೆ. ಮಂಜುನಾಥ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್, ಮೇಲೂರು ಗ್ರಾಪಂ ಕಾರ್ಯದರ್ಶಿ ಚಲುವೇಗೌಡ, ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷರಾದ ನಾಗರಾಜ್, ರವಿ,‌ಮಾಜಿ ಸದಸ್ಯ ಶಿವಕುಮಾರ್. ಅಡುಗೆ ಸಿಬ್ಬಂದಿ ನಾಗಮ್ಮ. ವಾಟರ್ ಮ್ಯಾನ್ ಆಕಾಶ್, ಯುವ ಮುಖಂಡ ಸಂಜಯ್ ಶಾಲಾ ಮಕ್ಕಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.