ಹಗರಿಬೊಮ್ಮನಹಳ್ಳಿ: ಪಟ್ಟಣದ ಪೋಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ನಡೆದಿರುವ ಕಟ್ಟಡ ಕಾರ್ಮಿಕ ಖಲೀಲ್ ಸಾಬ್ ಲಾಕಪ್ ಸಾವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಸಿಪಿಐ(ಎಂ) ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಆಂಗವಾಗಿ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ಖಲೀಲ್ ಸಾಬ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.ಪ್ರಕರಣದಲ್ಲಿ ಮೃತಪಟ್ಟಿರುವ ಖಲೀಲ್ ಸಾಬ ಕಟ್ಟಡ ಕಾರ್ಮಿಕನಾಗಿದ್ದು, ಕೌಟುಂಬಿಕ ಕಲಹದ ನಿಮಿತ್ತ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಠಾಣೆಗೆ ಕರೆದೊಯ್ದು ಕರ್ತವ್ಯ ನಿರತ ಇಬ್ಬರು ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸುವ ಮೂಲಕ ಕಾರ್ಮಿಕನ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಪೈಶಾಚಿಕ ಕೃತ್ಯದ ಪರಿಣಾಮವಾಗಿ ಖಲೀಲ್ ಕಿವಿಯಲ್ಲಿ ರಕ್ತ ಬಂದಿದೆ. ಮೆದುಳಿಗೆ ತೀವ್ರ ಹೊಡೆತ ಬಿದ್ದ ಪರಿಣಾಮ ಸಾವು ಸಂಭವಿಸಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ತರುವ 45 ನಿಮಿಷದ ಮಂಚೆಯೇ ಸಾವಾಗಿದೆ ಎಂದು ವೈದ್ಯಾಧಿಕಾರಿ ದೃಢಪಡಿಸಿದ್ದಾರೆ. ಇದು ಲಾಕಪ್ ಸಾವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದರು.ಸಾರ್ವಜನಿಕರ ಹಾಗೂ ಕುಟುಂಬದವರ ಸಮಾಧಾನಕ್ಕಾಗಿ ಇಬ್ಬರೂ ಪೊಲೀಸರ ಮೇಲೆ ಕೇಸ್ ದಾಖಲಿಸಿ ಇಲಾಖಾ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದರೂ ನ್ಯಾಯಯುತ ತನಿಖೆ ನಡೆಯುವ ಕುರಿತು ಅನುಮಾನಗಳಿವೆ. ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಜಿಲ್ಲಾ ಮುಖಂಡ ಆರ್.ಎಸ್. ಬಸವರಾಜ್ ಮಾತನಾಡಿ, ಇದೊಂದು ಗಂಭೀರ ಪ್ರಕರಣವಾಗಿದೆ. ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಸಾವನ್ನಪ್ಪಿರುವ ದುರ್ದೈವಿಯ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಕುಟುಂಬ ವಾಸವಾಗಿರುವ ನಂದೀಪುರ ಗ್ರಾಮದಲ್ಲಿ ನಿವೇಶನ ಸಹಿತ ಮನೆ ನಿರ್ಮಿಸಿ ಕೊಡಬೇಕು. ಪರಿಹಾರವಾಗಿ ₹50 ಲಕ್ಷ ಹಣ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಉಪ ತಹಸೀಲ್ದಾರ್ ಶಿವಕುಮಾರ ಗೌಡ ಅವರ ಮೂಲಕ ಗೃಹಮಂತ್ರಿ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು. ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಂಗಪ್ಪ ದಾಸರ್, ಸರ್ದಾರ ಹುಲಿಗೆಮ್ಮ, ಕೆ. ರಮೇಶ್, ಕೆ. ಗಾಳೆಪ್ಪ, ಚಾಂದಬಿ ಹಾಗೂ ಕೆ. ಬಸವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.