ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಪ್ರಥಮ ವರ್ಷದ ಗ್ರಾಮೀಣ ಕ್ರೀಡಾಕೂಟ ಹಾಗೂ ಕ್ರಿಕೆಟ್ ಪಂದ್ಯಾವಳಿ ನಡೆಯಿತು.ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟಕ್ಕೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಚಾಲನೆ ನೀಡಿದರು.
ಕೊಡಗು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಶತಮಾನ ಕಂಡ ಕೃಷಿ ಪತ್ತಿನ ಸಹಕಾರ ಸಂಘವು ಕೇವಲ ಬ್ಯಾಂಕ್ ವ್ಯವಹಾರಕ್ಕೆ ಸೀಮಿತವಾಗದೆ ಸೇವೆ ಮತ್ತು ಇತರ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದೆ ಎಂದರು.ಇದೇ ಪ್ರಥಮ ಬಾರಿಗೆ ಸದಸ್ಯರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜೊತೆಗೆ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಬಹುಮಾನ ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡುವ ಮೂಲಕ ಪ್ರೋತ್ಸಾಹ ಮಾಡಲಾಗುತ್ತಿದೆ ಎಂದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಬಹುತೇಕ ಕ್ರೀಡೆಗಳು ಇಂದು ನಶಿಸಿ ಹೋಗುತ್ತಿವೆ. ಹಿಂದಿನ ದಿನಗಳಲ್ಲಿ ಕ್ರೀಡೆ,ಕಲೆ, ಮತ್ತಿತರ ಗ್ರಾಮೀಣ ಚಟುವಟಿಕೆಗಳು ಜನರ ಬದುಕಿನ ಭಾಗವಾಗಿದ್ದವು. ಹಿಂದಿನ ಕಾಲದ ಕ್ರೀಡೆಗಳೆ ಇಂದು ವೈಜ್ಞಾನಿಕ ರೂಪ ಪಡೆದುಕೊಂಡಿವೆ ಎಂದರು.ಕ್ರೀಡಾಕೂಟದ ಜರ್ಸಿ ಬಿಡುಗಡೆ ಮಾಡಿದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸಹಕಾರ ಸಂಘದ ಮೂಲಕ ಪ್ರತಿ ವರ್ಷ ಸಹಕಾರ ಕಪ್ ಹೆಸರಿನಲ್ಲಿ ಕ್ರೀಡೋತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಡ ನಡೆಸಲು ತೆಗೆದುಕೊಂಡಿರುವ ತೀರ್ಮಾನವನ್ನು ಅಭಿನಂದಿಸಿದರು. ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನವನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಕೈಗೊಂಡಿರುವ ಗ್ಯಾಲರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮೈದಾನ ಅನೇಕ ಕ್ರೀಡಾಪಟುಗಳಿಗೆ ವೇದಿಕೆಯಾಗಿದೆ ಎಂದರು.
ಗ್ರಾಮೀಣ ಕ್ರೀಡಾ ಕೂಟದ ಸಂಚಾಲಕ ಹಾಗೂ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದ್ ಕುಮಾರ್, ನಿರ್ದೇಶಕರಾದ ಪಿ.ಬಿ.ಯತೀಶ್, ಮಧಸೂದನ್, ಮಧು, ನೇತ್ರಾವತಿ, ಕವಿತಾ, ರಾಜೇಶ್, ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್.ರಾಣಿ, ಹೆಬ್ಬಾಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎಸ್.ರಾಜಶೇಖರ್, ಸಂಘದ ಕಾರ್ಯನಿರ್ವಣಾಧಿಕಾರಿ ಲೋಕೇಶ್, ಸಿಬ್ಬಂದಿ ಇದ್ದರು.