ಉದ್ಘಾಟನೆಗೆ ಸಿದ್ಧವಾಗಿದೆ ಓದುಗ ಸ್ನೇಹಿ ಗ್ರಂಥಾಲಯ!

| Published : Jun 15 2024, 01:09 AM IST

ಸಾರಾಂಶ

ಗ್ರಂಥಾಲಯ ಇಲಾಖೆ ಒಂದೊಂದಾಗಿ ತನ್ನ ಗಂಥಾಲಯಗಳಿಗೆ ಆಧುನಿಕ ಹಾಗೂ ಓದುಗ ಸ್ನೇಹಿ ರೂಪ ನೀಡುತ್ತಿದೆ. ಇದರ ಭಾಗವಾಗಿ ನಾರಾಯಣಪುರದಲ್ಲಿ ಸುಸಜ್ಜಿತ ಗ್ರಂಥಾಲಯ ಸಿದ್ಧಗೊಂಡಿದೆ.

ಬಸವರಾಜ ಹಿರೇಮಠ

ಧಾರವಾಡ:

ಇಲ್ಲಿಯ ಕೋರ್ಟ್‌ ವೃತ್ತದ ಸಮೀಪದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಹೊರತುಪಡಿಸಿದರೆ ಧಾರವಾಡದ 2ನೇ ಅತಿ ದೊಡ್ಡ, ಓದುಗ ಸ್ನೇಹಿ ಗ್ರಂಥಾಲಯವು ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದೆ.

₹ 1.30 ಕೋಟಿ ವೆಚ್ಚದಲ್ಲಿ ನಾರಾಯಪುರದ ಲಯನ್ಸ್‌ ಶಾಲೆಯ ಎದುರು 3800 ಚದರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಎಲ್ಲವು ಅಂದಕೊಂಡಂತೆ ನಡೆದರೆ ಜುಲೈ ತಿಂಗಳಲ್ಲಿ ಗ್ರಂಥಾಲಯವು ವಿದ್ಯಾರ್ಥಿ ಓದುಗರಿಗೆ, ಸಾಹಿತ್ಯ ಓದುಗರಿಗೆ ಹಾಗೂ ಹಿರಿಯ ನಾಗರಿಕರಿಗೆ ಮುಕ್ತವಾಗಲಿದೆ.

ಆಧುನಿಕ ಸಂದರ್ಭದಲ್ಲಿ ಮೊಬೈಲ್‌, ಕಂಪ್ಯೂಟರ್‌ ಮೂಲಕ ಗೂಗಲ್ ಹುಡುಕಿ ಎಂತಹ ಮಾಹಿತಿ ಹೊರತೆಗೆದರೂ ಜ್ಞಾನವನ್ನು ಸಂಪಾದಿಸಲು ಗ್ರಂಥಗಳು, ಗ್ರಂಥಾಲಯಗಳು ಅಗತ್ಯವಾಗಿ ಬೇಕು. ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು ಎನ್ನುತ್ತಾರೆ. ಓದಲು ಬರುವವರಿಗೆ ಗ್ರಂಥಾಲಯಗಳು ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷರದ ಭಂಡಾರಗಳು. ಅಂತಹ ಗ್ರಂಥಾಲಯಗಳು ಧಾರವಾಡದಲ್ಲಿ ಸಾಕಷ್ಟಿದ್ದರೂ ಸುಸಜ್ಜಿತವಾಗಿಲ್ಲ. ಇತ್ತೀಚೆಗೆ ಗ್ರಂಥಾಲಯ ಇಲಾಖೆ ಒಂದೊಂದಾಗಿ ತನ್ನ ಗಂಥಾಲಯಗಳಿಗೆ ಆಧುನಿಕ ಹಾಗೂ ಓದುಗ ಸ್ನೇಹಿ ರೂಪ ನೀಡುತ್ತಿದೆ. ಇದರ ಭಾಗವಾಗಿ ನಾರಾಯಣಪುರದಲ್ಲಿ ಸುಸಜ್ಜಿತ ಗ್ರಂಥಾಲಯ ಸಿದ್ಧಗೊಂಡಿದೆ.

ಏನೇನಿದೆ?:

ನಾರಾಯಣಪುರ ನೂತನ ಗ್ರಂಥಾಲಯ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಕೇಂದ್ರದ ಉಪ ನಿರ್ದೇಶಕ ರಾಮಯ್ಯ, ನಿರ್ಮಿತಿ ಕೇಂದ್ರದಿಂದ ₹ 1.30 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದ್ದು ₹16 ಲಕ್ಷ ವೆಚ್ಚದಲ್ಲಿ ಪೀಠೋಪಕರಣ ಸಿದ್ಧಗೊಳಿಸಲಾಗುತ್ತಿದೆ. ಎರಡು ಅಂತಸ್ತಿನ ವಿಶಾಲವಾದ ಕಟ್ಟಡದಲ್ಲಿ ಗಾಳಿ, ಬೆಳಕಿನೊಂದಿಗೆ 100 ಜನ ಸಮಾಧಾನದಿಂದ ಕೂತು ಓದಲು ಕುರ್ಚಿ, ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಮೊದಲು ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯವಿದ್ದು ಅಲ್ಲಿನ 40 ಸಾವಿರ ಗ್ರಂಥಗಳನ್ನು ಹೊಸ ಕಟ್ಟಡಕ್ಕೆ ಹಸ್ತಾಂತರಿಸಿದ್ದು, ಹಂತ ಹಂತವಾಗಿ ಹೆಚ್ಚಿನ ಗ್ರಂಥಗಳನ್ನು ಓದುಗರಿಗೆ ಒದಗಿಸಲು ಗ್ರಂಥಾಲಯ ಇಲಾಖೆ ಯೋಜನೆ ರೂಪಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಸಾಮಾನ್ಯ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತಿಗಳಿಗೆ ಓದಲು ಈ ಕಟ್ಟಡಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಧಾರವಾಡದಲ್ಲಿ ನಗರ ಕೇಂದ್ರ ಗ್ರಂಥಾಲಯ ಸೇರಿದಂತೆ 23 ಶಾಖಾ ಕೇಂದ್ರ, 10 ಸೇವಾ ಕೇಂದ್ರ, 18 ವಾಚನಾಲಯಗಳು ಇವೆ. ನಗರ ಕೇಂದ್ರ ಗ್ರಂಥಾಲಯವನ್ನು ಸುಸಜ್ಜಿತ, ಓದುಗ ಸ್ನೇಹಿ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪುಸ್ತಕ ಸಂಗ್ರಹಿಸಿಡಲಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಓದುವ ಸ್ಥಳ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ರೂಪಿಸಲಾಗಿದೆ. ಈ ಮೊದಲು ಬೆಳಗ್ಗೆ 8ರಿಂದ 11.30, ಸಂಜೆ 4ರಿಂದ ರಾತ್ರಿ 8ರ ವರೆಗೆ ಗ್ರಂಥಾಲಯಗಳು ಕೆಲಸ ನಿರ್ವಹಿಸುತ್ತಿದ್ದು ಈಗ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕೆಲಸ ನಿರ್ವಹಿಸುತ್ತಿವೆ. ಓದುಗರು ಸಹ ಉತ್ಸಾಹದಿಂದ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.

ಗ್ರಂಥ ಹೊರತುಪಡಿಸಿ ಕಂಪ್ಯೂಟರ್‌ ಮೂಲಕವೂ ಜ್ಞಾನ ಹೆಚ್ಚಿಸಿಕೊಳ್ಳಲು, ನೌಕರಿಗೆ ಅರ್ಜಿ ಹಾಕಲು ಕಂಪ್ಯೂಟರ್‌, ಇಂಟರನೆಟ್‌ ವ್ಯವಸ್ಥೆಯನ್ನು ನಗರ ಕೇಂದ್ರ ಗ್ರಂಥಾಲಯದಲ್ಲಿ ಮಾಡಲಾಗಿದ್ದು 11 ಲಕ್ಷ ಗ್ರಂಥಗಳನ್ನು ಹೊಂದಿದೆ. ಏಕಕಾಲಕ್ಕೆ ಸಾವಿರ ಜನರು ಓದಲು ಸ್ಥಳಾವಕಾಶ ಇದ್ದು, ಇದೇ ರೀತಿಯಲ್ಲಿ ಇತರೆ ಗ್ರಂಥಾಲಯಗಳನ್ನು ನಿರ್ಮಿಸುವುದು ನಮ್ಮ ಆಶಯ ಎಂದು ರಾಮಯ್ಯ ತಿಳಿಸಿದರು.

ನಾರಾಯಣಪುರದಲ್ಲಿ ₹ 1.30 ಕೋಟಿ ವೆಚ್ಚದಲ್ಲಿ ನೂತನ ಗ್ರಂಥಾಲಯ ನಿರ್ಮಾಣವಾಗಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆಯಲ್ಲಿ ಉದ್ಘಾಟನೆ ವಿಳಂಬವಾಗಿದ್ದು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಧಾರವಾಡ ನಗರಕ್ಕೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಓದಲು ವಿದ್ಯಾರ್ಥಿಗಳು ಬರುತ್ತಾರೆ. ಎಲ್ಲರೂ ಖಾಸಗಿ ಗ್ರಂಥಾಲಯಕ್ಕೆ ಹೋಗಿ ಹಣ ನೀಡಿ ಓದಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬಡ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಿದ್ದು, ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ ಹೇಳಿದರು.