ಸಾರಾಂಶ
ಕೆರೆ ಮಾಯವಾಗಿ ನೇರಳೆ ಬೆಡಗಿ ಬಂದಿದ್ದು ಈಗ ಎಲ್ಲರ ಫೇವರೆಟ್ ಹಾಟ್ ಸ್ಪಾಟ್ ಆಗಿದೆ. ಕುಶಾಲನಗರ ಸಮೀಪದ ತಾವರೆಕೆರೆ ಈಗ ಪುಷ್ಪಕಾಶಿಯಾಗಿ ಬದಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಅರೆ ಇದೇನಪ್ಪ.... ಇಲ್ಲಿದ್ದ ಕೆರೆ ಎಲ್ಲೋಯ್ತು...? ಕೆರೆ ಮಾಯವಾಗಿ ನೇರಳೆ ಬೆಡಗಿ ಬಂದಿದ್ದು, ಈಗ ಎಲ್ಲರ ಫೇವರೇಟ್ ಹಾಟ್ ಸ್ಪಾಟ್ ಆಗಿದೆ.ಹೌದು, ಮಡಿಕೇರಿ-ಕುಶಾಲನಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 275ರ ಕುಶಾಲನಗರ ಸಮೀಪದಲ್ಲಿರುವ ತಾವರೆಕೆರೆ ಈಗ ಅಕ್ಷರಶಃ ಪುಷ್ಪಕಾಶಿಯಾಗಿ ಬದಲಾಗಿದ್ದು, ದಿನಕ್ಕೆ ಸಾವಿರಾರು ಮಂದಿ ಈ ಪುಷ್ಪಲೋಕವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ರಸ್ತೆಯ ಬದಿಯಲ್ಲೇ ಕೆರೆ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ವಾಹನವನ್ನು ನಿಲ್ಲಿಸಿ ಫೋಟೋ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದು, ಈ ಪಕೃತಿಯ ಮೋಡಿಗೆ ಫಿದಾ ಆಗಿದ್ದಾರೆ. ಇಲ್ಲಿ ಬೆಳೆದ ಅಂತರ ತಾವರೆ ಈಗ ಎಲ್ಲರಿಗೂ ಅಚ್ಚುಮೆಚ್ಚು.
ಪ್ರವಾಸಿಗರನ್ನು ನಿಯಂತ್ರಿಸಲು ಕೆರೆಯ ಸಮೀಪದಲ್ಲಿ ಟ್ರಾಫಿಕ್ ಪೊಲೀಸರು ಕೂಡ ಇದ್ದು, ಪ್ರವಾಸಿಗರನ್ನು ನಿಯಂತ್ರಿಸಲು ಹರಸಾಹಸಡುತ್ತಿದ್ದಾರೆ.ಇದು ಉಷ್ಣವಲಯದ ದಕ್ಷಿಣ ಅಮೆರಿಕಾದ ಅಮೆಜಾನ್ ನದಿ ಜಲಾನಯನ ಪ್ರದೇಶಕ್ಕೆ ಸ್ಥಳೀಯವಾಗಿದ್ದು, ಈಗ ಎಲ್ಲಾ ಉಷ್ಣವಲಯದ ಮತ್ತು ಉಪೋಷ್ಣವಲಯದ ದೇಶಗಳಿಗೆ ಹರಡಿದೆ. ಇದನ್ನು ನೀರಿನ ತೋಟಗಳಿಗೆ ಅಲಂಕಾರಿಕ ಸಸ್ಯವಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಪರಿಚಯಿಸಲಾಯಿತು ಮತ್ತು 1904ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಕಂಡುಬಂದಿತು.
ಗಂಟೆ ಹೂವಿನ ಜೊಂಡು, ಅಂತರ ತಾವರೆ, ಅಂತರಗಂಗೆ, ಕತ್ತೆ ಕಿವಿ ಎಂದು ನಾನಾ ಹೆಸರಿನಲ್ಲಿ ಕರೆಯಲ್ಪಡುವ ‘ವಾಟರ್ ಹಯಸಿಂತ್’ ಸಸ್ಯ ಐಕಾರ್ನಿಯ, ಅಥವಾ ನೀರಿನ ಹಯಸಿಂತ್ (Eichhornia crassipes) ಒಂದು ಏಕದಳ ಸಸ್ಯ. ಇದು ನೀರಿನಲ್ಲಿ ಅಥವಾ ತೇವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಸಸ್ಯದ ಕಾಂಡ ಸಂಯುಕ್ತವಾಗಿರುತ್ತದೆ. ಕ್ರ್ಯಾಸಿಪೆಸ್ ಎಂಬ ಪ್ರಭೇದವು ಅಮೆರಿಕ, ಆಸ್ಟ್ರೇಲಿಯಾ, ಜಾವಾ, ಭಾರತ, ಮತ್ತು ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ನೀರಿನಲ್ಲಿ ಕಳೆಯಾಗಿ ಬೆಳೆದು ತೊಂದರೆ ಉಂಟುಮಾಡುತ್ತದೆ.