ಸಾರಾಂಶ
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಸತಿ ಶಾಲೆಯನ್ನು ತೆರೆಯುವಂತೆ ಗ್ರಾಮದ ಪ್ರಮುಖರು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ತಾಲೂಕು ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಸತಿ ಶಾಲೆಯನ್ನು ತೆರೆಯುವಂತೆ ಗ್ರಾಮದ ಪ್ರಮುಖರು ಆಗ್ರಹಿಸಿದ್ದಾರೆ. ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ತೊರೆನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ ಡಿ ರವಿಕುಮಾರ್, ಕಳೆದ 33 ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ಹೆಸರುವಾಸಿಯಾಗಿದ್ದ ಸರ್ಕಾರಿ ಶಾಲೆ ಮಕ್ಕಳ ಸಂಖ್ಯೆ ಕೊರತೆಯಿಂದ ಮುಚ್ಚಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಶಾಲೆಯಲ್ಲಿ ಹಿಂದುಳಿದ ವರ್ಗದ ವಸತಿ ಶಾಲೆ ಆರಂಭಿಸುವಂತೆ ತೊರೆನೂರು, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯ ಗ್ರಾಮಸ್ಥರ ಆಗ್ರಹವಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಪ್ರಸ್ತಾವನೆಯನ್ನು ಶಾಸಕರ ಗಮನಕ್ಕೆ ತರಲಾಗಿದೆ. ಸದ್ಯದಲ್ಲಿ ಮೂರು ಗ್ರಾಮಗಳ ಮುಖಂಡರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಂಡು ಬೆಂಗಳೂರಿಗೆ ನಿಯೋಗ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಎಲ್ಲಾ ಮೂಲಭೂತ ಸೌಕರ್ಯ ಹೊಂದಿರುವ ಈ ಶಾಲಾ ಆವರಣದಲ್ಲಿ ಹಿಂದುಳಿದ ವರ್ಗದ ವಸತಿ ಶಾಲೆ ನಿರ್ಮಾಣದಲ್ಲಿ ಸುಮಾರು ನೂರಕ್ಕೂ ಅಧಿಕ ಮಕ್ಕಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದ ಅವರು ಶಾಲಾ ಆವರಣ ಸುಮಾರು 3 ಎಕರೆ ವಿಸ್ತೀರ್ಣ ಹೊಂದಿದೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಈ ಶಾಲೆಯನ್ನು ಮೀಸಲಿಡುವಂತೆ ಅವರು ಗ್ರಾಮಸ್ಥರ ಪರವಾಗಿ ಕೋರಿದರು.ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರು ಆಗಿರುವ ಎಂ ಟಿ ಬೇಬಿ ಅವರು ಮಾತನಾಡಿ, ವಸತಿ ಶಾಲೆ ಕಲಿಯುವ ಮೂಲಕ ಗ್ರಾಮಾಂತರ ವ್ಯಾಪ್ತಿಯ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಗ್ರಾಮದ ಮಾಜಿ ಸೈನಿಕರಾದ ರಮೇಶ್, ಹಿರಿಯರಾದ ನಂಗಾರು ಬೆಳ್ಳಿಯಪ್ಪ, ಗ್ರಾಮದ ಪ್ರಮುಖರಾದ ನಾಪಂಡ ಪೂವಯ್ಯ, ಕೆ ವಿ ರೋಹಿ ಇದ್ದರು.