ವೈಚಾರಿಕ, ವೈಜ್ಞಾನಿಕ ಕವಿಯಾಗಿದ್ದ ಕುವೆಂಪು: ಡಾ.ವೈ.ಎಂ ಯಾಕೋಳ್ಳಿ

| Published : Dec 29 2024, 01:19 AM IST

ವೈಚಾರಿಕ, ವೈಜ್ಞಾನಿಕ ಕವಿಯಾಗಿದ್ದ ಕುವೆಂಪು: ಡಾ.ವೈ.ಎಂ ಯಾಕೋಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ ಶಿಕ್ಷಣ ಸಂಸ್ಥೆಯ ಜಿ.ಇ.ಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆ ಹಾಗೂ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಕನ್ನಡ ಸಂಘದ ಸಹಭಾಗಿತ್ವದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಗೋಕಾಕ

ರಾಷ್ಟ್ರಕವಿ ಕುವೆಂಪು ಅವರು ವೈಚಾರಿಕ, ವೈಜ್ಞಾನಿಕ ಕವಿಯಾಗಿದ್ದರು. ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ ಎಂದು ನಿವೃತ್ತ ಪ್ರಾಚಾರ್ಯ, ಸವದತ್ತಿಯ ಸಾಹಿತಿ ಡಾ.ವೈ.ಎಂ ಯಾಕೋಳ್ಳಿ ಹೇಳಿದರು.

ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜಿಇಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆ ಹಾಗೂ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಕನ್ನಡ ಸಂಘದ ಸಹಭಾಗಿತ್ವದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡವನ್ನು ಕುವೆಂಪು ಪ್ರತಿನಿಧಿಸಿದರೆ ಬೇಂದ್ರೆ ಅವರು ಉತ್ತರ ಕರ್ನಾಟಕವನ್ನು ಪ್ರತಿನಿಧಿಸಿ ಕನ್ನಡವನ್ನು ಬೇರುಮಟ್ಟದಲ್ಲಿ ಕಟ್ಟಿದ್ದಾರೆ. ಕುವೆಂಪು ಅವರು ಬರೆದ ಸಾವಿರ, ಸಾವಿರ ಪುಟ್ಟಗಳಷ್ಟು ಕಾದಂಬರಿಗಳು ಕನ್ನಡ ಮೇಲೆ ಅತೀವ ಪ್ರಭಾವ ಬೀರಿವೆ. ಕನ್ನಡಕ್ಕೆ ಬಹಳಷ್ಟು ಪ್ರಶಸ್ತಿಗಳನ್ನು ತಂದುಕೊಟ್ಟ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕನ್ನಡಕ್ಕೆ ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದು ಕನ್ನಡದ ಅಸ್ಮಿತೆಯ ಕುವೆಂಪು ಅವರು. ಹುಟ್ಟಿನಿಂದ ಸಾಯುವವರೆಗೆ ಕನ್ನಡವನ್ನು ಓದಿದರೂ ಮುಗಿಯದ ಸಾಹಿತ್ಯ ಕನ್ನಡದಲ್ಲಿದೆ. ಇಂದಿನ ವಿದ್ಯಾರ್ಥಿಗಳು ಕರ್ನಾಟಕ ಕಂಡ ಮಹಾನ ಸಾಹಿತಿಗಳನ್ನು ಓದಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾವಂತರು ಸಮಾಜ ಕಟ್ಟುವ ಕಾರ್ಯವನ್ನು ಮಾಡುತ್ತಾರೆ. ಸಾಹಿತ್ಯದ ಮೂಲಕ ಸಮಾಜ ಕಟ್ಟುವ ಕಾರ್ಯವನ್ನು ಅಂದಿನ ಸಾಹಿತಿಗಳು ಮಾಡಿದರು. ಅವರಂತೆ ನಾವು ಇಂದು ಸದೃಢ ಸಮಾಜ ಕಟ್ಟಬೇಕಿದೆ. ಕನ್ನಡ ಅಭಿಮಾನ ಹೆಚ್ಚಿಸಲು ಇಂದು ಕುವೆಂಪು ಅವರ ಕಾವ್ಯ ಮತ್ತು ಕಾದಂಬರಿಗಳು ನಮಗೆ ಇಂದು ಬೇಕಾಗಿವೆ. ಅವರು ಬರೆದ ಕವನ, ಕಾವ್ಯ, ಕಾದಂಬರಿ ಕಥೆಗಳನ್ನು ಓದಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಬೇಕಿದೆ. ಕುವೆಂಪು ಅವರ ವೈಚಾರಿಕ ಸಾಹಿತ್ಯ ಇಂದಿನ ಯುವಕರಿಗೆ ಅತೀ ಅವಶ್ಯಕವಾಗಿದೆ. ಅದನ್ನು ಇಂದಿನ ಯುವ ಸಾಹಿತಿಗಳು ಓದಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಈಶ್ವರ ಮಮದಾಪೂರ, ಕನ್ನಡ ಅಂದರೆ ಕುವೆಂಪು. ಕುವೆಂಪು ಅಂದರೆ ಕನ್ನಡ ಹಾಗೆ ಬದುಕು ಬಾಳಿದವರು ರಾಷ್ಟ್ರಕವಿ. ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಇಂದು ನಾವು ಮಾಡಬೇಕಿದೆ. ಕನ್ನಡ ನಾಡಿನ ಪ್ರಮುಖ ಕಣ್ಣುಗಳೆಂದರೆ ಕುವೆಂಪು ಮತ್ತು ಬೇಂದ್ರೆ. ಇವರಿಬ್ಬರೂ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದಿನ ಬರಹ ಮತ್ತು ಕವಿತೆಗಳು ಪ್ರೀತಿ ಮತ್ತು ವಿಶ್ವಾಸ ಬೆಳೆಸುವ ಕಾರ್ಯಮಾಡಬೇಕಾಗಿದೆ ಎಂದರು.

ಕುವೆಂಪು ಕನ್ನಡದ ಅಸ್ಮಿತೆಯಾಗಿ ನಮ್ಮ ಮನ, ಮನೆಗಳಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಮೂಢನಂಬಿಕೆ ವಿರುದ್ಧವಾಗಿ ಕುವೆಂಪು ಅವರು ತಮ್ಮ ಬರವಣಿಗೆಯ ಮೂಲಕ ಸಮರ ಸಾರಿದ್ದರು. ಇಂದು ನಾವು ನಿರ್ಲಕ್ಷ್ಯ ವಹಿಸಿದರೆ ಕನ್ನಡ ಭಾಷೆಯನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದೇವೆ. ನಮ್ಮ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಲು ನಾವು ಇಂದು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಮಾಡಬೇಕಿದೆ ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಕುವೆಂಪು ಅವರ ಕುರಿತು ಹಮ್ಮಿಕೊಂಡ ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ವಿ.ವಿ ಮೋದಿ ವಹಿಸಿದ್ದರು. ಸುದಾ ಕಲ್ಲೋಳಿ ಸ್ವಾಗತಿಸಿದರು, ಶ್ರೀದೇವಿ ಖಡಕಬಾವಿ ನಿರೂಪಿಸಿದರು, ಅಜಯ ಮಾಲದಿನ್ನಿ ವಂದಿಸಿದರು. ಈ ವೇಳೆ ವೈ.ಬಿ.ಕೊಪ್ಪದ, ಪ್ರಕಾಶ ದಾನನ್ನವರ, ವಿಜಯಲಕ್ಷ್ಮೀ ಬಬಲಿ ಉಪಸ್ಥಿತರಿದ್ದರು.