ಧಾರವಾಡ:

ಮಹಾನಗರ ಪಾಲಿಕೆಯ ವಾರ್ಡ್‌ 1ರಲ್ಲಿ ಸಮರ್ಪಕ ಕುಡಿಯುವ ನೀರಿಗಾಗಿ ಪಾಲಿಕೆಯಲ್ಲಿರುವ ಎಲ್‌ ಆ್ಯಂಡ್‌ ಟಿ ಹಾಗೂ ಕೆಯುಐಡಿಎಫ್‌ಸಿ ಕಚೇರಿಗೆ ಮುತ್ತಿಗೆ ಹಾಕಿ ನಾಗರಿಕರು ಪ್ರತಿಭಟನೆ ಮಾಡಿದರು.

ವಾರ್ಡ್ 1ರ ಕುಮಾರೇಶ್ವರನಗರ ಹಾಗೂ ಸುತ್ತಲಿನ ಎಲ್ಲ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಮೊದಲು ಐದು ದಿನಗಳಿಗೊಮ್ಮೆ ನೀರು ಬರುತ್ತಿತ್ತು, ಆದರೆ ಈಗ 8-10 ದಿನಗಳಿಗೊಮ್ಮೆ ನೀರು ಬರುತ್ತಿದೆ. ಅದು ಕೂಡ ಸಮರ್ಪಕವಾಗಿ ಬರುತ್ತಿಲ್ಲ. ಕುಡಿಯುವ ನೀರಿಗಾಗಿ ವಾಟರ್ ಕ್ಯಾನ್‌ಗಳಿಗೆ ಜನರು ಮೊರೆ ಹೋಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಬೇಜವಾಬ್ದಾರಿತನದ ವರ್ತನೆಯಿಂದ ಬೇಸತ್ತು ನೀರಿಗಾಗಿ ಹೋರಾಟವನ್ನು ಮಾಡುವ ಪ್ರಸಂಗ ಬಂದಿದೆ ಎಂದು ಹೋರಾಟದ ನೇತೃತ್ವ ವಹಿಸಿದ್ದ ಯುವ ಮುಖಂಡ ಸಂತೋಷ ದೇವರಡ್ಡಿ ಹೇಳಿದರು. ಎಲ್‌ ಆ್ಯಂಡ್ ಟಿ ಅಧಿಕಾರಿಗಳನ್ನು ಅವರ ಕಚೇರಿಯಲ್ಲಿ 3 ಗಂಟೆಗೂ ಹೆಚ್ಚು ಕಾಲ ಕೂಡಿ ಹಾಕಿ ಪ್ರತಿಭಟನೆ ಮಾಡಲಾಯಿತು. ಬಳಿಕ ಮೇಯರ್‌ ಜ್ಯೋತಿ ಪಾಟೀಲ ತಮ್ಮ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಸಮಸ್ಯೆ ಶೀಘ್ರವಾಗಿ ಪರಿಹರಿಸಲು ಸೂಚಿಸಿದರು. ಸಭಾ ನಾಯಕರಾದ ಈರೇಶ ಅಂಚಟಗೇರಿ ಸಹ ಇದ್ದರು.

ಹೋರಾಟದಲ್ಲಿ ವಾರ್ಡ್ ನಂ. 1ರ ಹಿರಿಯರಾದ ಶ್ರೀಕಾಂತ್ ಹಲಗತ್ತಿ, ಮಲ್ಲಪ್ಪ ಕಳ್ಳಿಗುಡ್ಡ, ಉಲ್ಲಾಸ ಗುನಗಾ, ಮಂಜುನಾಥ ಹಿರೇಮಠ, ಉದಯ್ ನಾಯ್ಕ್, ಜಯಶ್ರೀ ಪಾಟೀಲ, ಗಾಯತ್ರಿ ಪೂಜಾರಿ, ಅಮಿತ್ ಬಸಾಪುರ, ಬಸಪ್ಪ ಬಡಿಗೇರ್, ದರ್ಶನ್ ರಕ್ಕಸಗಿ, ನದಾಫ್, ರಾಘವೇಂದ್ರ ಕುಂದಣಗಾರ, ವಿ.ಬಿ. ಹಿರೇಮಠ, ರಾಜು ಸುರಪುರ ಇದ್ದರು.