ಬಸವಸಾಗರ ಜಲಾಶಯ ನಿರ್ವಹಣೆಗೆ ಅನುದಾನ ಕೊರತೆ !

| Published : Aug 25 2024, 01:47 AM IST

ಸಾರಾಂಶ

Lack of funds for the management of Basavasagar reservoir!

- ಜಲಾಶಯದ ನಿರ್ವಹಣೆಗೆ ಸರ್ಕಾರ ಮಾಡಬೇಕಿದೆ ಸಂಕಲ್ಪ । ಟೆಂಡರ್ ಪ್ರಕ್ರಿಯೆ ರದ್ದಾಗಿದ್ದರಿಂದ 2 ವರ್ಷಗಳಿಂದ ನಡೆಯದ ಸೂಕ್ತ ನಿರ್ವಹಣೆ

----

ಅನಿಲ್‌ ಬಿರಾದರ್‌

ಕನ್ನಡಪ್ರಭ ವಾರ್ತೆ ಕೊಡೇಕಲ್

ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದ ನಿರ್ವಹಣೆಯ ಸಲುವಾಗಿ ಕರೆಯುವ ಟೆಂಡರ್ ಪ್ರಕ್ರಿಯೆ ಸೂಕ್ತವಾಗಿ ನಡೆಯದ ಕಾರಣ, ಕಳೆದ ಎರಡು ವರ್ಷಗಳಿಂದ ಜಲಾಶಯದ ನಿರ್ವಹಣೆಯಾಗದಿರುವುದರಿಂದ ರಾಜ್ಯದಲ್ಲಿ ಮತ್ತೊಂದು ಆಣೆಕಟ್ಟು ಅಪಾಯದಲ್ಲಿರುವಂತೆ ಕಾಣುತ್ತಿದೆ.

ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ (19) ಚೈನ್ ತುಂಡಾಗಿ ಬಿದ್ದ ಅವಘಡದ ನಂತರ, ರಾಜ್ಯದ ಎಲ್ಲಾ ಆಣೆಕಟ್ಟುಗಳಿಗೆ ಇದೊಂದು ನಿರ್ವಹಣೆ ವಿಷಯದಲ್ಲಿ ಎಚ್ಚರಿಕೆಯಾಗಿದೆ.

ಬಸವ ಸಾಗರ ಜಲಾಶಯದ ಅಧಿಕಾರಿಗಳು ತಿಳಿಸುವಂತೆ, ಪ್ರತಿ ಮುಂಗಾರಿನ ಮೊದಲು ಮಾರ್ಚ್ ಹಾಗೂ ಏಪ್ರಿಲ್ ಅವಧಿಯಲ್ಲಿ ಜಲಾಶಯದ ಗೇಟ್‌ನ ಸ್ಥಿತಿಗತಿಗಳ ಕುರಿತು ಅಗತ್ಯ ಪರಿಶೀಲನೆ ಮಾಡಿ, ಗೇಟ್‌ಗಳ ಸುರಕ್ಷತೆಯ ನಿರ್ವಹಣೆಗೆ ಬೇಕಾದ ಪೇಂಟಿಂಗ್, ವೆಲ್ಡಿಂಗ್ ಮತ್ತು ಗ್ರೀಸಿಂಗ್‌ಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರೂ ಸಹಿತ, ನಿರ್ವಹಣೆ ವಿಷಯವಾಗಿ ಕಳೆದ ಎರಡು ವರ್ಷಗಳಿಂದ ಪಟ್ಟಭದ್ರಾ ಹಿತಾಸಕ್ತಿಗಳ ಹಗ್ಗ-ಜಗ್ಗಾಟದಿಂದಾಗಿ ಟೆಂಡರ್ ರದ್ದಾಗಿರುವುದರಿಂದ ಗುತ್ತಿರುವುದರಿಂದ ಜಲಾಶಯದ ನಿರ್ವಹಣೆ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ನೀರಾವರಿ ಪರಿಣಿತರು.

ಬಸವಸಾಗರ ಜಲಾಶಯ ಈಗಾಗಲೇ ಪ್ರತಿಶತ 100ರಷ್ಟು ಸಂಪೂರ್ಣ ಭರ್ತಿಯಾಗಿದೆ. ತುಂಗಭದ್ರಾ ಆಣೆಕಟ್ಟಿನ ಗೇಟ್ ದುರಂತದ ನಂತರ ಬಸವ ಸಾಗರದ ಕ್ರಸ್ಟ್ ಗೇಟ್‌ಗಳನ್ನು ಮತ್ತೊಮ್ಮೆ ಪರೀಶಿಲಿಸಿದ್ದು, ಎಲ್ಲಾ 30 ಗೇಟ್‌ಗಳು ಸುಸ್ಥಿತಿಯಲ್ಲಿವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದ ಹೈಡ್ರೋಮೆಕ್ಯಾನಿಕಲ್ ಕಾಂಪೋನೆಂಟ್ಸ್, ಹೈಡ್ರೋಲಿಕ್ ಹಾಗೂ ಹೈಡ್ರೋ ಎಲೆಕ್ಟ್ರಿಕ್ ಸಾಮಗ್ರಿಗಳ ಕುರಿತು ನಿಗಮಕ್ಕೆ ಹಾಗೂ ಸರ್ಕಾರಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರೂ ಸಹಿತ ಸರಿಯಾಗಿ ಟೆಂಡರ್ ಆಗದ ಕಾರಣ ಜಲಾಶಯದ ನಿರ್ವಹಣೆಯಾಗುತ್ತಿಲ್ಲ.

ಈ ಹಿಂದೆ 2006 ರಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 5 ಸಹ ಸರಿಯಾಗಿ ಕಾರ್ಯನಿರ್ವಹಣೆ ಇರದ ಕಾರಣ ನೀರಿನ ರಭಸಕ್ಕೆ ಕಿತ್ತುಹೋಗಿತ್ತು. ಆದರೆ, ಜಲಾಶಯದಲ್ಲಿದ್ದ ಸ್ಟಾಪ್ ಲಾಕ್ ಸಿಸ್ಟಮ್ ಹೆಚ್ಚಿನ ನೀರು ಪೋಲಾಗದಂತೆ ಕಾರ್ಯನಿರ್ವಹಿಸಿದ್ದರಿಂದ 2 ದಿನದಲ್ಲಿಯೇ ನೂತನ ಕ್ರಸ್ಟ್ ಗೇಟ್‌ ಅನ್ನು ಅಳವಡಿಸುವ ಮೂಲಕ ಅತಿದೊಡ್ಡ ಅನಾಹುತವನ್ನು ಅಧಿಕಾರಿಗಳು ತಪ್ಪಿಸಿದ್ದರು. ಆದರೆ, ಈಗ ಮತ್ತೇ ಅದೇ ತರಹದ ಅಪಾಯ ಸಂಭವಿಸುವ ಮೊದಲು ಸರ್ಕಾರ ಗಮನಹರಿಸಿ 6 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರುಣಿಸುವ ಜಲಾಶಯದ ನಿರ್ವಹಣೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ರೈತರ ಹಿತ ಕಾಪಡಬೇಕಿದೆ.

ಗ್ರೀಸಿಂಗ್ ಕಾಣದ ರೋಪ್‌ಗಳು: ಜಲಾಶಯದಲ್ಲಿ ರೇಡಿಯಲ್ (ತ್ರಿಜ್ಯಾಕಾರದ) ವಿನ್ಯಾಸವುಳ್ಳ ಒಟ್ಟು 30 ಪ್ರಮುಖ ಎಲೆಕ್ಟ್ರಿನಿಕ್ ಆಧಾರಿತ ಕ್ರಸ್ಟ್ ಗೇಟ್‌ಗಳಿಗೆ ಸರಿಯಾಗಿ ಗ್ರೀಸಿಂಗ್ ಮಾಡಲಾಗುತ್ತಿಲ್ಲ ಎನ್ನಲಾಗಿದೆ. ಜಲಾಶಯದ ನಿರ್ವಹಣೆಗೆ ಒಟ್ಟು 2 ಕೋಟಿ ರು.ಗಳ ಪ್ರಸ್ತಾವನೆಯನ್ನು ನಿಗಮವು ಸರ್ಕಾರಕ್ಕೆ ಸಲ್ಲಿಸಿದರೂ ಸಹಿತ ಸೂಕ್ತ ಅನುದಾನ ಬಿಡುಗಡೆಯಾಗದ ಕಾರಣ ಗೇಟ್‌ಗಳಿಗೆ ಸರಿಯಾದ ಗ್ರೀಸಿಂಗ್ ಮಾಡಲಾಗಿಲ್ಲ ಎಂಬ ಅರೋಪ ಕೇಳಿಬರುತ್ತಿದೆ.

ಜಲಾಶಯಕ್ಕೆ ಒಳಹರಿವು ಅಧಿಕ ಪ್ರಮಾಣದಲ್ಲಿ ಹರಿದು ಬಂದಾಗ ಗೇಟ್‌ಗಳನ್ನು ಎರಿಸಲು ಎಲೆಕ್ಟ್ರಿನಿಕ್ ಆಧಾರಿತ ರೋಪ್‌ಗಳ ಬಳಕೆ ಮಹತ್ತರವಾಗಿದ್ದು, ನದಿಗೆ ನೀರು ಬಿಡುವ ಮುನ್ನ ಹಾಗೂ ಬಿಟ್ಟ ನಂತರ ಗೇಟ್‌ಗಳ ದುರಸ್ತಿ ಕಾರ್ಯಗಳನ್ನು ಸಹ ಪರಿಶೀಲಿಸಬೇಕಿದೆ.

ಕಳೆದ ಜುಲೈ ಹಾಗೂ ಈ ತಿಂಗಳ ಆ.10ರವರಗೆ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ಕೆಲವೊಮ್ಮೆ 3.30 ಲಕ್ಷ ಕ್ಯುಸೆಕ್‌ವರೆಗೆ ಜಲಾಶಯದ ಎಲ್ಲಾ 30 ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಟ್ಟಿದ್ದು, ಬರುವ ಅಲ್ಪ ಅನುದಾನದಲ್ಲಿಯೇ ಸೂಕ್ತವಾಗಿ ಗೇಟ್‌ಗಳ ಕಾರ್ಯಕ್ಷಮತೆಯನ್ನು ನಿರ್ವಹಿಸುತ್ತಿರುವುದು ನಿಗಮದ ಅಧಿಕಾರಿಗಳಿಗೆ ಸವಾಲಿನ ಸಂಗತಿಯಾಗಿದ್ದರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.

========ಬಾಕ್ಸ್‌===============

- 42 ವರ್ಷಗಳಾದರೂ ಬಸವ ಸಾಗರಕ್ಕೆ ಒಬ್ಬ ಸಿಎಂ ಭೇಟಿ ಇಲ್ಲ !

ಬಸವ ಸಾಗರ ಜಲಾಶಯವು ಕಲ್ಯಾಣ ಕರ್ನಾಟಕ ರೈತರ ಭಾಗದ ಜೀವನಾಡಿಯಾಗಿದ್ದು, ಜಲಾಶಯ ನಿರ್ಮಾಣಗೊಂಡು 42 ವರ್ಷಗಳು ಗತಿಸಿದರೂ ಸಹಿತ, ಇಲ್ಲಿಯವರೆಗೆ ರಾಜ್ಯ ಕಂಡ 23 ಮುಖ್ಯಮಂತ್ರಿಗಳ ಪೈಕಿ ಯಾರೊಬ್ಬರೂ ಇಲ್ಲಿಯವರೆಗೆ ಜಲಾಶಯಕ್ಕೆ ಭೇಟಿ ನೀಡದಿರುವುದು ನೋಡಿದರೆ, ಜಲಾಶಯವನ್ನು ಕಡೆಗಣಿಸಿದಂತೆ ಕಾಣುತ್ತದೆ ಎನ್ನುತ್ತಾರೆ ಕೃಷ್ಣಾ ಜಲಾನಯನದ ರೈತರು.

ಜಲಾಶಯದ ಹಿರಿಮೆ: ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಪ್ರದೇಶ 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.

ಯಾದಗಿರಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳು ಸೇರಿದಂತೆ ಬಸವಸಾಗರ ಹಿನ್ನೀರನ್ನು ಕುಡಿವ ನೀರು, ಬೃಹತ್ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಬೇಡಿಕೆ ಹಾಗೂ ಅಗತ್ಯ ನೀರನ್ನು ಒದಗಿಸಲು ಈ ಬೃಹತ್ ಜಲಾಶಯವೇ ಜಲಮೂಲವಾಗಿದೆ.

ಗೇಟ್‌ಗಳಿಂದ ಹರಿದಿದ್ದು 487 ಟಿಎಂಸಿ ನೀರು: ಕಳೆದ ಜುಲೈ ಮಧ್ಯಂತರದಿಂದ ಇಲ್ಲಿಯವರೆಗೆ ರಾಜ್ಯದ ಅವಳಿ ಜಲಾಶಯಗಳಾದ ಆಲಮಟ್ಟಿಯಿಂದ 591 ಟಿಎಂಸಿ ನೀರನ್ನು, ಬಸವಸಾಗರ ಜಲಾಶಯದಿಂದ 487 ಟಿಎಂಸಿ ಪ್ರಮಾಣದ ನೀರನ್ನು ಗೇಟ್‌ಗಳಿಂದ ನದಿಗೆ ಬಿಟ್ಟಿದ್ದು, ರಾಜ್ಯದ ಕಾವೇರಿ ಜಲಾನಯನ, ಲಿಂಗನಮಕ್ಕಿ, ಸುಪಾ ಹಾಗೂ ವರಾಹಿ ಜಲಾಶಯಗಳಿಗಿಂತ ದುಪ್ಪಟ್ಟು ನೀರನ್ನು ನದಿಗೆ ಬಿಡಲಾಗಿದೆ. ಇಷ್ಟೊಂದು ಪ್ರಮಾಣದ ನೀರಿನ ಒತ್ತಡವನ್ನು ನಿಭಾಯಿಸಬೇಕಾದ ಗೇಟ್‌ಗಳ ನಿರ್ವಹಣೆ ಅತ್ಯಗತ್ಯ. ಕೂಡಲೇ ಸರ್ಕಾರ ಈ ಕುರಿತು ಗಮನಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡುವ ಮೂಲಕ ಜಲಾಶಯದ ಸುರಕ್ಷತೆ ಕಾಪಾಡಬೇಕಿದೆ.

------

ಫೋಟೊ:

24ವೈಡಿಆರ್4: ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯ.