ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿಯಲ್ಲಿ ಟೌನ್ ಶಿಪ್ (ಉಪನಗರ) ನಿರ್ಮಿಸಲು ಗುರುತಿಸಿರುವ ಭೂ ಪ್ರದೇಶದ ಪ್ರಿಲಿಮಿನರಿ ನೋಟಿಫಿಕೇಷನ್ (ಪ್ರಾಥಮಿಕ ಅಧಿಸೂಚನೆ) ಹೊರಡಿಸುವುದಕ್ಕೂ ಮುನ್ನ ರೈತರ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲದಿದ್ದರೆ ಪಕ್ಷಾತೀತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಎ.ಮಂಜುನಾಥ್ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಹೊಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೌನ್ ಶಿಪ್ ಕಾರಣದಿಂದ ಅನ್ಯಾಯಕ್ಕೆ ಒಳಗಾಗುತ್ತಿರುವ ರೈತರ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ನಾಯಕರ ನೇತೃತ್ವದಲ್ಲಿ ಹೋರಾಟ ನಡೆಸಿ ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಈಗ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಬಿಡದಿ ಟೌನ್ ಶಿಪ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಭೂ ಮಾಲೀಕರ ಕಣ್ತಪ್ಪಿಸಿ ತರಾತುರಿಯಲ್ಲಿ ಪ್ರಿಲಿಮಿನರಿ ನೋಟಿಫಿಕೇಷನ್ ಹೊರಡಿಸುವ ಹುನ್ನಾರ ನಡೆದಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.ಕೆಐಎಡಿಬಿಯ ಭೂಸ್ವಾಧೀನ ಕಾಯ್ದೆಯಲ್ಲಿ ಪ್ರಿಲಿಮಿನರಿ ನೋಟಿಫಿಕೇಷನ್ ಅಂದರೆ 28/1 ಅಂತ ಕರೆಯುತ್ತಾರೆ. ಬಿಡಿಎ ನೋಟಿಫಿಕೇಷನ್ ನಲ್ಲಿ 4/1 ಅನ್ನುತ್ತಾರೆ. ಪ್ರಾಧಿಕಾರ ರೂಪಿಸಿರುವ ಪ್ರಾಜೆಕ್ಟ್ ಗೆ ನನ್ನ ವಿರೋಧ ಇಲ್ಲ. ಆದರೆ, ನೋಟಿಫಿಕೇಷನ್ ಹೊರಡಿಸಿ ಪ್ರಾಜೆಕ್ಟ್ ಅನುಷ್ಠಾನಕ್ಕೆ ಬರದಿದ್ದರೆ ನೊಂದಿರುವ ರೈತರ ಪರಿಸ್ಥಿತಿ ಏನಾಗಬೇಕು. ಮುಂಬರುವ ಅಧಿಕಾರಿಗಳಿಗೂ ಇಷ್ಟೇ ಕಾಳಜಿ ವಹಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಏನೆಂದು ಪ್ರಶ್ನಿಸಿದರು.
ಪ್ರಾಧಿಕಾರ ಎಲ್ಲ ಜಮೀನನ್ನು ಪ್ರಿಲಿಮಿನರಿ ನೋಟಿಫಿಕೇಷನ್ ಹೊರಡಿಸಿ, ಆ ಮೂಲಕ ಹೂಡಿಕೆದಾರರನ್ನು ಆಹ್ವಾನ ಮಾಡಲಿದೆ. 20 ಗುಂಟೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಪರಿಹಾರ ಕೊಡಲಿದೆ. ಉಳಿದಂತೆ ಆಸಕ್ತ ರೈತರೊಂದಿಗೆ ಲ್ಯಾಂಡ್ ಷೇರಿಂಗ್ ಮಾಡಿಕೊಳ್ಳಲಿದೆ. ಯಾರನ್ನೊ ನಂಬಿಕೊಂಡು ನೋಟಿಫಿಕೇಷನ್ ಹೊರಡಿಸಿದ ಬಳಿಕ ಹೂಡಿಕೆದಾರರೇ ಬರದಿದ್ದರೆ ಏನು ಮಾಡಬೇಕು ಎಂದು ಕೇಳಿದರು.ರಿಯಲ್ ಎಸ್ಟೇಟ್ ಗೆ ಅವಕಾಶ ಕೊಡಲ್ಲ:
ಪ್ರಾಧಿಕಾರ ರಿಯಲ್ ಎಸ್ಟೇಟ್ ಮೂಲಕ ಹಣ ಸಂಪಾದಿಸಲು ಫಾಸ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ತಿಂಗಳ 30ನೇ ತಾರೀಖಿನೊಳಗೆ ನೋಟಿಫಿಕೇಶನ್ ಹೊರಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಇದು ರೈತರ ಬದುಕು ಮತ್ತು ಸ್ವಾಭಿಮಾನದ ಪ್ರಶ್ನೆ. ನೋಟಿಫಿಕೇಷನ್ ಹೊರಡಿಸಿ ರಿಯಲ್ ಎಸ್ಟೇಟ್ ಮಾಡಲು ಬಂದರೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಮಂಜುನಾಥ್ ಎಚ್ಚರಿಸಿದರು.ನೀವು ಯಾವ ಪ್ರಾಜೆಕ್ಟ್ ಮಾಡುತ್ತಿದ್ದೀರಿ, ಎಷ್ಟು ಎಕರೆ ಸ್ವಾಧೀನ ಪಡಿಸಿಕೊಳ್ಳುತ್ತೀರಿ, ಎಲ್ಲೆಲ್ಲಿ ಪ್ರಾಜೆಕ್ಟ್ ಆರಂಭಿಸುತ್ತೀರಿ, ಪ್ರಾಜೆಕ್ಟ್ ಮಾಡಲು ಬಂದಿರುವ ಹೂಡಿಕೆದಾರರು ಯಾರು, ಅವರು ಎಷ್ಟು ಹೂಡಿಕೆ ಮಾಡುತ್ತಾರೆ. ರೈತರ ಜಮೀನಿಗೆ ಯಾವ ಆಧಾರದ ಮೇಲೆ ದರ ನಿಗದಿ ಮಾಡುತ್ತೀರಿ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಶಾಸಕ ಬಾಲಕೃಷ್ಣ ಮತ್ತು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಗೆ ಸವಾಲು ಹಾಕಿದರು.
2008ರಿಂದ ಇಲ್ಲಿವರೆಗೂ ಈ ಭಾಗ ಶಾಪಗ್ರಸ್ಥವಾಗಿದೆ. ನೀವು ನಿಜವಾಗಿಯೂ ರೈತರಿಗೆ ಸಹಾಯ ಮಾಡಬೇಕು ಅಂದುಕೊಂಡಿದ್ದರೆ ಮಾಸ್ಟರ್ ಪ್ಲಾನ್ ರೂಪಿಸಿಕೊಡಿ. ರೈತರು ಭೂಮಿ ಬೇಕಾದರೆ ಉಳಿಸಿಕೊಳ್ಳುತ್ತಾರೆ, ಬೇಡ ಎನ್ನುವವರು ಮಾರಾಟ ಮಾಡುತ್ತಾರೆ. ಅಧಿಕಾರ ಇದೆ ಅಂತ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸಕ್ಕೆ ಮುಂದಾದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.ಈ ಪ್ರಾಧಿಕಾರಕ್ಕೆ ಸ್ವಂತ ಕಚೇರಿಯೇ ಇಲ್ಲ. ಲೇಔಟ್ ಮಾಡಿದ, ಅಪಾರ್ಟ್ ಮೆಂಟ್ ಕಟ್ಟಿದ ಅನುಭವ ಇಲ್ಲ. ಕೇವಲ ಸೀಲು, ಸಹಿ ಹಾಕುವುದಷ್ಟೇ ಕೆಲಸ. ಇಷ್ಟಕ್ಕೂ ಪ್ರಾಧಿಕಾರ ಹುಟ್ಟಿ ಕೇವಲ 9 ತಿಂಗಳಾಗಿದೆ. ಆಗಲೇ 10 ಸಾವಿರ ಎಕರೆಯಲ್ಲಿ ಟೌನ್ ಶಿಪ್ ಮಾಡಲು ಹೊರಟು ರೈತರ ಬದುಕಿನಲ್ಲಿ ಆಟವಾಡಲು ಮುಂದಾಗಿದೆ. ನಿಮಗೆ ಯಾವ ನೈತಿಕತೆ ಇದೆ. ಈ ಹೋರಾಟದಲ್ಲಿ ನನ್ನ ಸ್ವಾರ್ಥವಿಲ್ಲ. ಇಲ್ಲಿ ನನ್ನ ಜಮೀನೂ ಇದೆ. ನಿಮಗೆ ಆದಂಗೆ ನನಗೂ ಆಗುತ್ತದೆ ಅಂತ ಸುಮ್ಮನಿರಬಹುದು. ರೈತರಿಗೆ ತೊಂದರೆ ಆಗಬಾರದೆಂಬ ಕಾರಣದಿಂದ ನಿಮ್ಮೊಂದಿಗೆ ಹೋರಾಟಕ್ಕೆ ಸಿದ್ಧನಾಗಿದ್ದೇನೆ. ನಾವೆಲ್ಲರೂ ಪ್ರಿಲಿಮಿನರಿ ನೋಟಿಫಿಕೇಷನ್ ಆಗದಂತೆ ತಡೆಯಬೇಕಿದೆ. ಇದಕ್ಕಾಗಿ ಎಲ್ಲ ಬಗೆಯ ಹೋರಾಟಕ್ಕೂ ಸಿದ್ಧರಾಗಿದ್ದೇವೆ. ಚಳವಳಿ ನಡೆಸಲು ಹೋರಾಟ ಸಮಿತಿಯನ್ನೇ ರಚಿಸುತ್ತೇವೆ ಎಂದು ಮಂಜುನಾಥ್ ತಿಳಿಸಿದರು.
ಜೆಡಿಎಸ್ ಮುಖಂಡರಾದ ದವಳಗಿರಿ ಚಂದ್ರಣ್ಣ, ನರಸಿಂಹಯ್ಯ, ಹರೀಶ್ , ಹೇಮಂತ್ , ಕುಮಾರ್ ಮತ್ತಿತರರು ಇದ್ದರು.ಏನಿದು ಬಿಡದಿ ಟೌನ್ ಶಿಪ್ ವಿವಾದ?:
2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ .ಡಿ.ಕುಮಾರಸ್ವಾಮಿಯವರು ಬಿಡದಿ ಜತೆಗೆ ಹೊಸಕೋಟೆ, ಬಿಡದಿ, ಸೋಲೂರು, ಸಾತನೂರು ಟೌನ್ ಶಿಪ್ ಸ್ಥಾಪಿಸಲು ನೋಟಿಫಿಕೇಷನ್ ಹೊರಡಿಸಿದ್ದರು. ಇದರಲ್ಲಿ ಬಿಡದಿ ಟೌನ್ ಶಿಪ್ ನಿರ್ಮಿಸಲು ಕಂಚುಗಾರನಹಳ್ಳಿ ಹಾಗೂ ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9178 ಎಕರೆ ಭೂಮಿಯನ್ನು ಕಾಯ್ದಿರಿಸಿದ್ದರು. ಈ ಭೂಮಿಯನ್ನು ಟೌನ್ ಶಿಪ್ ಗೆ ಮೀಸಲಿಟ್ಟು ರೆಡ್ ಜೋನ್ ಅಂತ ಘೋಷಿಸಿದ್ದರಿಂದ ಬೇರೆ ಯಾವುದೇ ಉದ್ದೇಶಕ್ಕೆ ಬಳಸಲು ರೈತರಿಗೆ ಅವಕಾಶ ಇರಲಿಲ್ಲ.ಇದನ್ನು ಪ್ರಶ್ನಿಸಿ ರೈತರು ಹೋರಾಟ ನಡೆಸಿ ಹೈಕೋರ್ಟಿನ ಮೊರೆ ಹೋದರೂ ಸರ್ಕಾರದ ಪರವಾಗಿಯೇ ತೀರ್ಪು ಬಂದಿತು. ಕುಮಾರಸ್ವಾಮಿಯವರು ಅಧಿಕಾರ ಕಳೆದುಕೊಂಡ ನಂತರ ಮುಖ್ಯಮಂತ್ರಿಗಳಾದ ಸದಾನಂದಗೌಡರು, ಡಿಎಲ್ ಎಫ್ ನೊಂದಿಗೆ 500 ಕೋಟಿ ರು.ಗೆ ಒಪ್ಪಂದವಾಗಿದ್ದ ಕಾರಣ ಬಿಡದಿ ಹೊರತು ಉಳಿದ ನಾಲ್ಕು ಟೌನ್ ಶಿಪ್ ಗಳ ನೋಟಿಫಿಕೇಷನ್ ಗಳನ್ನು ರದ್ದುಪಡಿಸಿದರು. ಆನಂತರ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಡಿಎಲ್ ಎಫ್ ಕೂಡ ಬಿಡದಿ ಟೌನ್ ಶಿಪ್ ಗೆ ಮೀಸಲಿಟ್ಟಿದ್ದ ಹಣವನ್ನು ವಾಪಸ್ ಪಡೆದಿದ್ದರು.
ಈ ಪ್ರದೇಶವನ್ನು ರೆಡ್ ಜೋನ್ (ಕೆಂಪುವಲಯ)ನಿಂದ ಮುಕ್ತಗೊಳಿಸಿ ಎಲ್ಲೋ ಜೋನ್ (ಹಳದಿ ವಲಯ)ಎಂದುಘೋಷಿಸಬೇಕು ಅಥವಾ ಕೆಐಎಡಿಬಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕೆಂದು ಬಾಲಕೃಷ್ಣರವರು ಮಾಜಿ ಶಾಸಕರಾಗಿದ್ದಾಗ ಒತ್ತಾಯಿಸಿದ್ದರು.
ಇನ್ನು ಎ.ಮಂಜುನಾಥ್ ರವರು ಶಾಸಕರಾಗಿದ್ದಾಗ ಟೌನ್ ಶಿಪ್ ಮಾಡಲಾಗದಿದ್ದರೆ ಸಿಡಿಪಿ ಮಾಡಿಕೊಡುವಂತೆ ಒತ್ತಾಯಿಸಿ ಮಾಸ್ಟರ್ ಪ್ಲಾನ್ ಮಾಡಿಸಿದ್ದರು. ಆಗಲೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನೋಟಿಫಿಕೇಷನ್ ಆಗುವ ಸಮಯಕ್ಕೆ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿತು.ಈ ಭಾಗದಲ್ಲಿ 2008ರಿಂದ ಈವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಭೂ ಮಾಲೀಕರಾದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
---------ಅಧ್ಯಕ್ಷರಿಗೆ ಮೋಕ್ಷ ಕಾಣಿಸುತ್ತೇವೆ: ಎ.ಮಂಜುನಾಥ್
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಯಾವುದೋ ಭ್ರಮೆಯಲ್ಲಿದ್ದಾರೆ. ಏನೋ ಮಾಡಿ ಬಿಡುತ್ತೇನೆ ಅಂದುಕೊಂಡಿದ್ದಾರೆ. ರೈತರಿಗೆ ದ್ರೋಹ ಬಗೆದರೆ ಈ ಭಾಗದಲ್ಲಿ ಮೋಕ್ಷ ಕಾಣಿಸುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಮಾಲೀಕರ ಸಭೆಯನ್ನು ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸಬೇಕು. ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ರೈತರ ಗಮನಕ್ಕೆ ತರದೆ ನಾಲ್ಕು ಗೋಡೆಗಳಲ್ಲಿ ಕುಳಿತು ತೀರ್ಮಾನ ಮಾಡಿದರೆ ತಕ್ಕಶಾಸ್ತಿ ಮಾಡುತ್ತೇವೆ. ರೈತರ ಮೇಲೆ ಸಮಾಧಿ ಕಟ್ಟಲು ಬಿಡುವುದಿಲ್ಲ ಎಂದರು.
ಜೆಡಿಎಸ್ ಮುಖಂಡ ಶಿವರಾಮ್ ಮಾತನಾಡಿ, ಸರ್ಕಾರ ರೈತರಿಂದ 9 ಸಾವಿರ ಎಕರೆ ಕಸಿದುಕೊಳ್ಳಲು ಹೊರಟಿದ್ದಾರೆ. ಪ್ರಿಲಿಮಿನರಿ ನೋಟಿಫಿಕೇಶನ್ ಮಾಡಲು ಅದೇನು ಯಾರದೋ ಸ್ವತ್ತಲ್ಲ. ಯಾರಾದರೂ ರೈತರ ಜಮೀನು ಕಸಿದರೆ ಚಪ್ಪಲಿ ಸೇವೆ ಮಾಡುತ್ತೇವೆ ಎಂದು ಎಚ್ಚರಿಸಿದರು.ಬಿಜೆಪಿ ಮುಖಂಡ ಪ್ರಸಾದ್ ಗೌಡ ಮಾತನಾಡಿ, ಡಿಕೆ ಪಟಾಲಂ ರಿಯಲ್ ಎಸ್ಟೇಟ್ ಮಾಡುತ್ತಲೇ ಬಂದಿದೆ. ಅದೇ ಟೀಮಿನ ಗಾಣಕಲ್ ನಟರಾಜು ಕೂಡ ಅದೇ ರೀತಿ ಹಣ ಸಂಪಾದಿಸಿ ಬೇಗ ಶ್ರೀಮಂತರಾಗಲು ಮುಂದಾಗಿದ್ದಾರೆ.
ಮರೂರು ಹ್ಯಾಂಡ್ ಪೋಸ್ಟ್ ಬಳಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ವಿರೋಧಿಸುವವರು ಇಲ್ಲಿ ಕೋಟಿ ಬೆಲೆ ಬಾಳುವ ಜಮೀನನ್ನು ಕಸಿಯಲು ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸಿ ರೈತರಿಗೆ ನ್ಯಾಯ ಒದಗಿಸುತ್ತೇವೆ ಎಂದರು.‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಭೂಮಿಗೆ ದರ ನಿಗದಿ ಮಾಡಿ ಕೊಡಲು ತಮ್ಮಲ್ಲಿ ಹಣ ಎಷ್ಟಿದೆ. ಇಲ್ಲಿರುವ 2600 ಎಕರೆ ಸರ್ಕಾರಿ ಜಾಗದ ಜೊತೆಗೆ ಲ್ಯಾಂಡ್ ಷೇರಿಂಗ್ ಅನ್ನು ಏಷಿಯನ್ ಡೆಲಪ್ ಮೆಂಟ್ ಬ್ಯಾಂಕಿನಲ್ಲಿ ಅಡವಿಟ್ಟು ಆ ಹಣವನ್ನು ಭೂ ಮಾಲೀಕರಿಗೆ ಕೊಡಲು ಉದ್ದೇಶಿಸಿದ್ದಾರೆ. ನಮ್ಮ ಆಸ್ತಿಯನ್ನು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಕೊಡಲು ಇವರೇ ಬೇಕಾ?’- ಎ.ಮಂಜುನಾಥ್ , ಮಾಜಿ ಶಾಸಕರು.