ಸಾರಾಂಶ
- ತಾಲೂಕು ಕಸಾಪ ಆಶ್ರಯದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಹದಿಹರೆಯದ ಯುವಕ, ಯುವತಿಯರಿಗೆ ಆರೋಗ್ಯ ಶಿಕ್ಷಣದ ಕೊರತೆ ಇದೆ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತ ಅಭಿಪ್ರಾಯಪಟ್ಟರು.ಮಂಗಳವಾರ ಪಟ್ಟಣದ ಪುಷ್ಪಾ ಆಸ್ಪತ್ರೆಯಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಹದಿಹರೆಯದ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ ಎಂಬ ಬಗ್ಗೆ ಉಪನ್ಯಾಸ ನೀಡಿದರು. ಯುವತಿಯರಿಗೆ ಪೌಷ್ಠಿಕಾಂಶದ ಕೊರತೆ ಇದೆ. ವೈಯ್ಯಕ್ತಿಕ ಸ್ವಚ್ಛತೆ ಬಗ್ಗೆ ಸರಿಯಾಗಿ ಅರಿವು ಇಲ್ಲ. ಕೆಲವು ವಿಚಾರಗಳ ಬಗ್ಗೆ ಮನೆಯಲ್ಲೇ ಆರೋಗ್ಯ ಶಿಕ್ಷಣ ನೀಡಬೇಕು ಎಂದರು.
ಉತ್ತಮ ಸಂಸ್ಕೃತಿ, ಸಂಸ್ಕಾರ ಹೊಂದಿರುವ ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಗೌರವ, ಸ್ಥಾನಮಾನ ಇದೆ. ಆದರೂ, ಹೆಣ್ಣು ಮಕ್ಕಳ ರಕ್ಷಣೆ ಮಾಡದಂತಹ ಸ್ಥಿತಿ ತಲುಪಿದ್ದೇವೆ. ಭಾರತ ಅಭಿವೃದ್ಧಿ ಹೊಂದಿದೆ. ಮಹಿಳೆಯರಿಗೆ ಶಿಕ್ಷಣ ಸಿಕ್ಕಿದೆ .ಆದರೂ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮುಂದುವರಿದಿದೆ. ಚಿಕ್ಕಮಕ್ಕಳ ಕೈಗೆ ಮೊಬೈಲ್ ಸಿಗುವ ಪರಿಸ್ಥಿತಿ ಇದೆ. 19 ವರ್ಷದವರೆಗೆ ಯುವತಿಯರ ಮನಸ್ಸು ಸದಾ ಚಂಚಲವಾಗಿರುತ್ತದೆ. ನಂತರ ಮನಸ್ಸು ಸ್ವಲ್ಪ ಹತೋಟಿಗೆ ಬರುತ್ತದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಯುವತಿಯರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, 1915 ರಲ್ಲಿ ಕಸಾಪ ಪ್ರಾರಂಭ ವಾಯಿತು. ಪ್ರಸ್ತುತ ಮಹೇಶ್ ಜೋಷಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆ, ತಾಲೂಕು ಹಾಗೂ ಹೋಬಳಿಗೆ ಕಸಾಪ ಅಧ್ಯಕ್ಷರಿದ್ದಾರೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದ ಮೂಲೆ, ಮೂಲೆಯಲ್ಲೂ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ. ಜಾತಿ, ಮತ ಬೇಧವಿಲ್ಲದೆ ಎಲ್ಲಾ ಕನ್ನಡದ ಮನಸ್ಸುಗಳು ಒಂದಾಗಿ ಕನ್ನಡದ ತೇರನ್ನು ಎಳೆಯುತ್ತಿದ್ದೇವೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಗ್ರಾಮೀಣ ಪ್ರದೇಶದಲ್ಲೂ ಕನ್ನಡದ ಕಂಪನ್ನು ಬೀರುತ್ತಿದ್ದಾರೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕಸಾಪ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷಣೆಯೊಂದಿಗೆ ಈಗಾಗಲೇ ಹಲವಾರು ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿ ಅಲ್ಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದೇವೆ. ನವೆಂಬರ್ ತಿಂಗಳಲ್ಲಿ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಿದ್ದೇವೆ. ಪುಷ್ಪ ಆಸ್ಪತ್ರೆಯ ಡಾ. ಮೇರಿ ಸೂಸನ್ನ ಅವರು ಹಲವಾರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮದರ್ ಥೆರಿಸಾ ಅವರಂತೆ ನಿಸ್ವಾರ್ಥ ದಿಂದ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಅವರನ್ನು ಗುರುತಿಸಿ ಇಂದು ಕಸಾಪದಿಂದ ಸನ್ಮಾನ ಮಾಡಿದ್ದೇವೆ ಎಂದರು. ಕಸಾಪ ಹೋಬಳಿ ಅಧ್ಯಕ್ಷೆ ಜುಬೇದ ಮಾತನಾಡಿ, ಪುಷ್ಪ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ನೀಡುತ್ತಿದ್ದು ಅನೇಕ ಯುವತಿಯರಿಗೆ ಬದುಕು ಕಲ್ಪಿಸಿಕೊಟ್ಟಿದೆ. ಕಸಾಪ ಕನ್ನಡದ ಜೊತೆಗೆ ಹಲವು ಸಮಾಜ ಮುಖಿ ಕಾರ್ಯಕ್ರಮ ನಡೆಸುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಡಾ.ಮೇರಿಸೂಸನ್ನ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನರ್ಸಿಂಗ್ ತರಬೇತಿ ಕೇಂದ್ರದ ಯುವತಿಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.
ಪುಷ್ಪ ಆಸ್ಪತ್ರೆ ಡಾ.ಮೇರಿಸೂಸನ್ನ ಉದ್ಘಾಟಿಸಿದರು.ಅತಿಥಿಗಳಾಗಿ ಪುಷ್ಪ ಆಸ್ಪತ್ರೆ ಆಡಳಿತಾಧಿಕಾರಿ ಸಿಸ್ಟರ್ ಜೆಸಿಲಿನ್, ಪುಷ್ಪ ಆಸ್ಪತ್ರೆ ತರಬೇತಿ ಮೇಲ್ವಿಚಾರಕಿ ಸಿಸ್ಟಿರ್ ನೋಯಲ್, ತಾ.ಕಸಾಪ ಕೋಶಾಧಿಕಾರಿ ಕೆ.ಎಸ್.ರಾಜಕುಮಾರ್, ಸಾಹಿತಿ ಜಯಮ್ಮ, ಕಸಾಪ ಹಿರಿಯ ಸದಸ್ಯ ಪಿ.ಸಿ.ಮ್ಯಾಥ್ಯೂ, ದರ್ಶನ್, ಕಸಾಪ ಸದಸ್ಯೆ ಭಾನುಮತಿ ಇದ್ದರು.