ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ರಚನೆಗೆ ಜನರ ಕೊರತೆ

| Published : Sep 16 2024, 01:56 AM IST

ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ರಚನೆಗೆ ಜನರ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದ ಪಟ್ಟಿಯಲ್ಲಿರುವಂತೆ ಸಂದೇಶವನ್ನು ನಿಗದಿತ ಸ್ಥಳಗಳಿಗೆ ತಲುಪಿಸುವುದಕ್ಕೆ ಯಾವ ವ್ಯವಸ್ಥೆಯೂ ಇರಲಿಲ್ಲ. ನಾಡಗೀತೆ ಹಾಡಿದ್ದು, ಅತಿಥಿಗಳ ಭಾಷಣ ಆರಂಭವಾಗಿದ್ದು, ಮುಗಿದಿದ್ದು, ಸಂವಿಧಾನ ಪ್ರಸ್ತಾವನೆ ಓದುವುದು ಯಾವುದೂ ಗೊತ್ತಾಗಲಿಲ್ಲ. ನಿಗದಿತ ಸಮಯಕ್ಕೆ ಕೈಎತ್ತಿ ನಿಲ್ಲುವುದಕ್ಕೆ ಜನರೂ ಇರಲಿಲ್ಲ. ಜೈ ಹಿಂದ್‌-ಜೈ ಕರ್ನಾಟಕ ಘೋಷಣೆ ನಗರದ ಹೊರಗೆ ಕೇಳಿಸಲೇ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯೊಳಗೆ ಆಯೋಜಿಸಿದ್ದ 62 ಕಿಮೀ ದೂರದ ಮಾನವ ಸರಪಳಿ ರಚನೆಗೆ ಜನರ ಕೊರತೆ ಕಾಡಿತ್ತು. ಮಾನವ ಸರಪಳಿ ರಚನೆಗೆ ಅಗತ್ಯವಿದ್ದ 60 ಸಾವಿರ ಮಂದಿಯನ್ನು ಕರೆತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು.

ಸಚಿವ ಎನ್‌.ಚಲುವರಾಯಸ್ವಾಮಿ ಅವರಿದ್ದ ಜಾಗದಲ್ಲಿ ಜನರಿರುವುದು ಬಿಟ್ಟರೆ ನಗರದ ಹೊರವಲಯದ ಎರಡೂ ಕಡೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಜನರು, ಶಾಲಾ ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು, ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎನ್‌ ಅರ್.ಎಲ್ ಎಂ. ಮಹಿಳಾ ಸಂಘದ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯನ್ನು ಒಗ್ಗೂಡಿಸಿಕೊಂಡು ಕರೆತರುವಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದು ಎದ್ದು ಕಾಣುತ್ತಿತ್ತು.

ಶಾಲಾ ಮಕ್ಕಳೇ ಪ್ರಧಾನ ಪಾತ್ರ:

ಬಹುತೇಕ ಕಡೆಗಳಲ್ಲಿ ಶಾಲಾ ಮಕ್ಕಳೇ ಮಾನವ ಸರಪಳಿ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಬೆಳಗ್ಗೆ 7.30ಕ್ಕೆ ಶಾಲಾ ಮಕ್ಕಳನ್ನು ತಂದು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದರು. 10 ಗಂಟೆಯವರೆಗೆ ತಿಂಡಿ- ಉಪಹಾರವಿಲ್ಲದೆ ಉಳಿದಿದ್ದರು. ಅವರಿಗೆ ಬಿಸ್ಕತ್ತು, ನೀರನ್ನು ಪೂರೈಸುವ ವ್ಯವಸ್ಥೆಯೂ ಇರಲಿಲ್ಲ. ಕೆಲವೆಡೆ ಸಂಘ- ಸಂಸ್ಥೆಗಳ ಕೆಲವೊಂದು ಕಾರ್ಯಕರ್ತರಿರುವುದನ್ನು ಬಿಟ್ಟರೆ ಉಳಿದೆಡೆ ಯಾವ ಜನರೂ ಇರಲಿಲ್ಲ. ಜನರ ಕೊರತೆಯನ್ನು ನೀಗಿಸಲು ಅಧಿಕಾರಿಗಳು ವಿಕಲಚೇತರನ್ನು ಕರೆತಂದು ನಿಲ್ಲಿಸಿದ್ದು ಕಂಡುಬಂದಿತು.

ಕೆಲವೆಡೆ ಜನರು ರಸ್ತೆಯಲ್ಲೇ ಕುಳಿತಿದ್ದರು. ಇನ್ನೂ ಹಲವರು ರಸ್ತೆ ಪಕ್ಕದ ಬಾಕ್ಸ್‌ ಚರಂಡಿಗಳನ್ನು ಆಶ್ರಯಿಸಿದ್ದರು. ನಗರದೊಳಗೆ ಹೆಚ್ಚುವರಿಯಾಗಿದ್ದ ವಿದ್ಯಾರ್ಥಿಗಳನ್ನು ಖಾಲಿ ಇರುವ ಸ್ಥಳಗಳಿಗೆ ಟ್ರ್ಯಾಕ್ಟರ್‌ಗಳ ಮೂಲಕ ಕಳುಹಿಸಿಕೊಡುತ್ತಿದ್ದರು. ನಗರ ದಾಟುತ್ತಿದ್ದಂತೆ ಜನರಿಲ್ಲದೆ ಖಾಲಿ ಇರುವ ದೃಶ್ಯಗಳು ಕಂಡುಬಂದವು. ಊರುಗಳಿರುವ ಕಡೆ ಒಂದಷ್ಟು ಜನರು ನೆರೆದಿರುವುದು ಕಂಡುಬಂದಿತು.

ಮಾಹಿತಿ ತಲುಪಿಸುವಲ್ಲೂ ವಿಫಲ:

ಕಾರ್ಯಕ್ರಮ ಪಟ್ಟಿಯಲ್ಲಿರುವಂತೆ ಬೆಳಗ್ಗೆ 9.30ರಿಂದ 9.37ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವುದು. 9.37ರಿಂದ 9.40ರವರೆಗೆ ನಾಡಗೀತೆ. 9.41ರಿಂದ 9.55ರವರೆಗೆ ಮುಖ್ಯ ಅತಿಥಿಗಳ ಭಾಷಣ, 9.55 ರಿಂದ 9.57 ಸಂವಿಧಾನ ಪ್ರಸ್ತಾವನೆ ಓದುವುದು, 9.57 ರಿಂದ 9.59ರವರೆಗೆ ಕೈಎತ್ತಿ ನಿಲ್ಲುವುದು. 10 ಗಂಟೆಗೆ ಜೈಹಿಂದ್‌- ಜೈಕರ್ನಾಟಕ ಎಂದು ಹೇಳಿ ಮಾನವ ಸರಪಳಿ ಕಳಚುವುದಿತ್ತು.

ಆದರೆ, ಕಾರ್ಯಕ್ರಮದ ಪಟ್ಟಿಯಲ್ಲಿರುವಂತೆ ಸಂದೇಶವನ್ನು ನಿಗದಿತ ಸ್ಥಳಗಳಿಗೆ ತಲುಪಿಸುವುದಕ್ಕೆ ಯಾವ ವ್ಯವಸ್ಥೆಯೂ ಇರಲಿಲ್ಲ. ನಾಡಗೀತೆ ಹಾಡಿದ್ದು, ಅತಿಥಿಗಳ ಭಾಷಣ ಆರಂಭವಾಗಿದ್ದು, ಮುಗಿದಿದ್ದು, ಸಂವಿಧಾನ ಪ್ರಸ್ತಾವನೆ ಓದುವುದು ಯಾವುದೂ ಗೊತ್ತಾಗಲಿಲ್ಲ. ನಿಗದಿತ ಸಮಯಕ್ಕೆ ಕೈಎತ್ತಿ ನಿಲ್ಲುವುದಕ್ಕೆ ಜನರೂ ಇರಲಿಲ್ಲ. ಜೈ ಹಿಂದ್‌-ಜೈ ಕರ್ನಾಟಕ ಘೋಷಣೆ ನಗರದ ಹೊರಗೆ ಕೇಳಿಸಲೇ ಇಲ್ಲ.

ಮಾನವಸರಪಳಿ ಕುರಿತು ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿಗಳನ್ನು ಕೇಳಿದರೆ, ಮೇಲಿನ ಅಧಿಕಾರಿಗಳಿಂದ ನಮಗೆ ಸರಿಯಾದ ಮಾಹಿತಿ, ಸಂಪರ್ಕ ಸಿಗಲಿಲ್ಲ. ನಮಗೆ ನಿಗದಿಪಡಿಸಿರುವ ಜಾಗಗಳಲ್ಲಿ ಓಡಾಡುತ್ತಿದ್ದೇವೆ. ಜನರು, ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟು ಕರೆತಂದಿದ್ದೇವೆ ಎಂದರು.