ಸಾರಾಂಶ
ಉಲುಕ್ ಉಪ್ಪಿನಂಗಡಿ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಈ ವರ್ಷದ ಅಕ್ಟೋಬರ್ ತಿಂಗಳಿಗೆ ೮೮ ವರ್ಷವನ್ನು ಪೂರ್ಣಗೊಳಿಸಲಿರುವ ಉಪ್ಪಿನಂಗಡಿಯ ಕುಮಾರಧಾರಾ ನದಿಯ ಆಂಗ್ಲ ಅರಸರ ಕಾಲದ ಸೇತುವೆ ತನ್ನ ಬಾಳಿಕೆಯ ಅವಧಿ ಪೂರ್ಣಗೊಂಡರೂ ಬಳಕೆಯಲ್ಲಿದೆ. ಸೇತುವೆಯ ಎರಡೂ ಪಾರ್ಶ್ವಕ್ಕೆ ಅಳವಡಿಸಿದ ಕಬ್ಬಿಣದ ರಕ್ಷಣಾ ಕವಚ ಮಾತ್ರ ಕಳ್ಳರ ಕೈ ಚಳಕಕ್ಕೆ ತುತ್ತಾಗಿ ಸುರಕ್ಷತೆಯ ವಿಚಾರದಲ್ಲಿ ಅಭದ್ರತೆ ಮೂಡಿಸಿದೆ.ಸ್ವಾತಂತ್ರ್ಯಪೂರ್ವ ಅಂದರೆ ೧೬/೧೦/೧೯೩೬ ಕ್ಕೆ ಅಂದಿನ ಆಂಗ್ಲ ಅಧಿಪತಿಗಳಿಂದ ಲೋಕಾರ್ಪಣೆಗೊಂಡಿರುವ ಈ ಸೇತುವೆ ಮಂಗಳೂರು- ಬೆಂಗಳೂರಿನ ನಡುವಿನ ರಾಷ್ಟ್ರೀಯ ಹೆದ್ದಾರಿ ೪೮ ರ ಸಂಪರ್ಕ ಕೊಂಡಿಯಾಗಿತ್ತು. ನಂತರದ ದಿನಗಳಲ್ಲಿ ಹೆದ್ದಾರಿ ೭೫ ಆಗಿ ಬದಲಾವಣೆಗೊಂಡು ಈ ಸೇತುವೆ ಪಕ್ಕವೇ ದ್ವಿಪಥದ ಹೊಸ ಸೇತುವೆ ನಿರ್ಮಾಣಗೊಂಡ ಬಳಿಕ ಈ ಸೇತುವೆ ಅಧಿಕೃತವಾಗಿ ಬಳಕೆಯಾಗುತ್ತಿಲ್ಲ. ಆದರೆ ಉಪ್ಪಿನಂಗಡಿ ಮತ್ತು ನೆಕ್ಕಿಲಾಡಿ ಪೇಟೆಯ ಸಂಪರ್ಕ ಕೊಂಡಿಯಾಗಿ ಈ ಸೇತುವೆ ಇಂದಿಗೂ ಬಳಕೆಯಲ್ಲಿದೆ.
ಹಲವು ರೀತಿಯಲ್ಲಿ ಉಪಯೋಗ: ಈ ಸೇತುವೆಯು ಪ್ರೇಮಿಗಳಿಗೆ ಏಕಾಂತವನ್ನು ಒದಗಿಸುವ ನೆಲೆಯಾಗಿ, ಶ್ವಾನ ಪ್ರಿಯರಿಗೆ ನಾಯಿಗಳಿಗೆ ನಿಯಮಿತವಾಗಿ ತಿಂಡಿ ತಿನಸುಗಳನ್ನು ಹಾಕುವ ತಾಣವಾಗಿ, ಮಂಗಗಳ ಮೇಲೆ ಪ್ರೀತಿಯುಳ್ಳವರಿಗೆ ತಿಂಗಳಿಗೆ ಮೂರು ಬಾರಿ ಈ ಸೇತುವೆಯಲ್ಲಿ ಕಾಣಸಿಗುವ ವಾನರ ಗುಂಪಿಗೆ ಆಹಾರ ನೀಡುವ ಕೇಂದ್ರವಾಗಿ ಈ ಸೇತುವೆ ಬಳಕೆಯಲ್ಲಿದೆ. ಮಾತ್ರವಲ್ಲದೆ ಮುಂಜಾನೆಯ ನಡಿಗೆಗೆ ಸುರಕ್ಷಿತ ಸ್ಥಳವಾಗಿಯೂ ಈ ಸೇತುವೆ ಬಳಕೆಯಲ್ಲಿದ್ದು ಈ ಸೇತೆವೆಯೊಂದಿಗೆ ಭಾವನಾತ್ಮಕ ಒಡನಾಟವೂ ಬೆಳೆದಿದೆ.ನೇತ್ರಾವತಿ ಕುಮಾರಧಾರಾ ನದಿಗಳ ಸಂಗಮ ಸ್ಥಳದ ಸಮೀಪದಲ್ಲಿರುವ ಈ ಸೇತುವೆಯ ಸ್ತಂಭಗಳು ಕಲ್ಲುಗಳನ್ನು ಬಳಸಿ ನಿರ್ಮಾಣವಾಗಿದ್ದರೆ, ಸೇತುವೆಯ ಎರಡೂ ಪಾರ್ಶ್ವದಲ್ಲಿ ಎತ್ತರಕ್ಕೆ ನಿರ್ಮಿಸಲಾದ ರಕ್ಷಣಾ ಕವಚಗಳು ಕಬ್ಬಿಣದಿಂದ ನಿರ್ಮಾಣವಾಗಿದೆ. ಪ್ರಸಕ್ತ ಈ ರಕ್ಷಣಾ ಕವಚದಲ್ಲಿ ಅಳವಡಿಸಲಾದ ಕಬ್ಬಿಣದ ಪೈಪುಗಳನ್ನು ಕಳವು ಮಾಡಲಾಗಿದ್ದು, ಸೇತುವೆಯ ಹಲವೆಡೆ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ಸೇತುವೆಯನ್ನು ಬಳಸಿ ಟೆಲಿಕಾಂ ಸಂಸ್ಥೆಗಳ ಕೇಬಲ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿವೆ. ಕೇಬಲ್‌ಗಳನ್ನು ಸೇತುವೆಯ ಮೇಲ್ಮೈಯ ಎರಡೂ ಭಾಗಗಳಲ್ಲಿ ಅಳವಡಿಸಿ ಅದು ಕಳ್ಳಕಾಕರ ಪಾಲಾಗದಂತೆ ಅದರ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ. ಇದರಿಂದಾಗಿ ಸೇತುವೆಯ ಮೇಲೆ ಬಿದ್ದ ಮಳೆ ನೀರು ಹರಿದು ಹೋಗುವಂತೆ ಅಳವಡಿಸಲಾದ ತೂತುಗಳು ಮುಚ್ಚಲ್ಪಟ್ಟು ಮಳೆ ಸುರಿದಾಗ ಮಳೆ ನೀರು ಸೇತುವೆಯಲ್ಲಿಯೇ ನಿಂತು ಸಂಚಾರಕ್ಕೆ ತೊಡಕುಂಟಾಗುತ್ತಿದೆ. ...................ಸೇತುವೆ ನಿರ್ವಹಣೆಯನ್ನು ಇಲಾಖೆ ಮುಂದುವರಿಸಬೇಕು: ಬಸ್ತಿಕಾರ್ ಆಂಗ್ಲರ ಕಾಲದಲ್ಲಿ ನಿರ್ಮಾಣವಾದ ಸೇತುವೆ ಅಂದಿನ ಕಾಲದಲ್ಲಿ ಗುಣಮಟ್ಟಕ್ಕೆ ಯಾವ ರೀತಿ ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ ಯಾಗಿ ಇಂದು ನಮ್ಮ ಮುಂದೆ ಇದೆ. ಹಿಂದೆ ಈ ಸೇತುವೆ ಅಧಿಕೃತವಾಗಿ ಬಳಕೆಯಲ್ಲಿ ಇದ್ದಾಗ ಸೇತುವೆಯಲ್ಲಿನ ಕಬ್ಬಿಣಕ್ಕೆ ಕಾಲ ಕಾಲಕ್ಕೆ ಪೈಂಟಿಂಗ್ ಮಾಡಲಾಗುತ್ತಿತ್ತು. ಕಬ್ಬಿಣ ತುಕ್ಕು ಹಿಡಿಯದಂತೆ ನೋಡಿಕೊಳ್ಳಲಾಗುತ್ತಿತ್ತು. ಸೇತುವೆಯ ಬಳಕೆ ಅಧಿಕೃತವಾಗಿ ನಿಂತು ಹೋದ ಬಳಿಕ ಇದರ ನಿರ್ವಹಣೆಯೂ ನಿಂತು ಹೋಗಿದೆ. ಕಬ್ಬಿಣ ತುಕ್ಕು ಹಿಡಿಯಲಾರಂಭಿಸಿದೆ. ಹಲವು ಕಳ್ಳರ ವಶವಾಗಿದೆ. ೮೮ ವರ್ಷಗಳ ಇತಿಹಾಸವನ್ನು ಕಂಡಿರುವ ಸೇತುವೆಯನ್ನು ಸುಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಸರ್ಕಾರಿ ಇಲಾಖೆ, ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಶ್ರಫ್ ಬಸ್ತಿಕಾರ್ ಅಭಿಪ್ರಾಯಪಟ್ಟಿದ್ದಾರೆ.
....................೮೮ ವರ್ಷ ಸಂದರೂ ಲಘು ವಾಹನಗಳ ಸಹಿತ ಜನತೆಯ ಬಳಕೆಯಲ್ಲಿರುವ ಹಳೆ ಸೇತುವೆಗೆ ಕಾಲ ಕಾಲಕ್ಕೆ ಬಣ್ಣ ಹೊಡೆಯಬೇಕು. ಸೇತುವೆಯ ಮೇಲೆ ಮಳೆ ನೀರು ಹರಿದು ಹೋಗಲು ಮಾಡಿರುವ ಎಲ್ಲ ತೂತುಗಳು ಕೇಬಲ್ ಅಳವಡಿಕೆದಾರರಿಂದ ಬಂದ್ ಆಗಿ ನೀರು ಸೇತುವೆಯಲ್ಲೇ ನಿಲ್ಲುವಂತಾಗಿದೆ. ಇದು ಮಳೆಗಾಲದಲ್ಲಿ ಪಾದಚಾರಿಗಳಿಗೆ ತೀರಾ ತೊಂದರೆ ಆಗತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು.
-ಸುಧಾಕರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ.