ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಬೆಸಗರಹಳ್ಳಿ ರಾಮಣ್ಣನವರ ಸಣ್ಣ ಕಥೆಗಳಲ್ಲಿ ಕಿರುಚಿತ್ರಗಳಿಗೆ ಬೇಕಾದ ಸಾಕಷ್ಟು ಸರಕುಗಳಿವೆ. ಚಲನಚಿತ್ರ ರಂಗದಲ್ಲಿರುವವರು ಇವುಗಳನ್ನು ಚಿತ್ರಗಳಿಗೆ ಬಳಸಿಕೊಂಡರೆ ಪರಿಣಾಮಕಾರಿಯಾಗಿರುತ್ತದೆ ಎಂದು ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ 2023ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಒರೆಗಲ್ಲು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಬೆಸಗರಹಳ್ಳಿ ರಾಮಣ್ಣನವರು ತಮ್ಮ ಕಥೆಗಳ ಮೂಲಕವೇ ಗ್ರಾಮೀಣ ಭಾರತವನ್ನು ಹೊರಜಗತ್ತಿಗೆ ಪರಿಚಯಿಸಿದ ಅದ್ಭುತ ಕಥೆಗಾರರಾಗಿದ್ದರು. ಅವರು ಮೋಡದ ಮರೆಯಲ್ಲಿರುವ ತಾರೆಯಂತಿದ್ದರು. ಬೆಸಗರಹಳ್ಳಿ ರಾಮಣ್ಣ ಹಾಗೂ ಮೈಸೂರಿನ ಆಲನಹಳ್ಳಿ ಕೃಷ್ಣ. ಅವರಂತೆ ಗ್ರಾಮೀಣ ಜನಜೀವನ ಮತ್ತು ಸೊಗಡನ್ನು ತಮ್ಮ ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಮತ್ತೊಬ್ಬ ಕಥೆಗಾರರಿಲ್ಲ. ಅಂತಹದೊಂದು ಶಕ್ತಿ ಅವರಿಗಿತ್ತು ಎಂದರು.ಸ್ವತಃ ವೈದ್ಯರಾಗಿದ್ದ ರಾಮಣ್ಣ ಅವರು ರೋಗಗ್ರಸ್ಥ ಸಮಾಜದ ಚಿಕಿತ್ಸಕರಾಗಿ ಸಾಹಿತ್ಯದ ಶಸ್ತ್ರ ಹಿಡಿದು ತಮ್ಮ ಸಾತ್ವಿಕ ಸಿಟ್ಟಿನ ಮೂಲಕ ಅವ್ಯವಸ್ಥೆಯ ವಿರುದ್ಧ ಗುಡುಗುತ್ತಿದ್ದರು. ಇದರಿಂದಾಗಿ ಅವರ ಎಲ್ಲ ಕಥೆಗಳಲ್ಲೂ ನೆಲದ ಘಮಲು ತುಂಬಿರುತ್ತಿತ್ತು. ಡಾ.ಬೆಸಗರಹಳ್ಳಿ ರಾಮಣ್ಣ ರಚಿಸಿರುವ ಸುಮಾರು 56 ಕಥೆಗಳೂ ಕೂಡ ತಾಯ್ತನದ ಭಾವದಿಂದ ಕೂಡಿದ್ದವು ಎಂದು ಬಣ್ಣಿಸಿದರು.
ಪ್ರಾಸ್ತಾವಿಕ ನುಡಿಯಾಡಿದ ಡಾ.ಬೆಸಗರಹಳ್ಳಿರಾಮಣ್ಣನವರ ಪುತ್ರ, ಹಿರಿಯ ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರು, ನಮ್ಮ ತಂದೆ ತೀರಿಕೊಂಡಾಗ ಅವರಿಗೆ 59 ವರ್ಷ. ಅವರು ಯಾವ ಮಲ್ಯಗಳನ್ನು ಪ್ರತಿಪಾದಿಸಿದ್ದರೊ, ಅದರಂತೆಯೇ ಬದುಕಿದ್ದವರು. ಅವರ ನೆನಪಿನಲ್ಲಿ ಪ್ರತಿಷ್ಠಾನ ಆರಂಭಿಸಿ 2007ರಿಂದ ರಾಮಣ್ಣನವರ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ ಎಂದರು.ಪ್ರತಿವರ್ಷ ಕಥೆಗಾರರಿಗೆ ಪ್ರಶಸ್ತಿ ನೀಡುತ್ತಾ ಕುವೆಂಪು ಅವರ ಆಶಯದಂತೆ ಮತ್ತು ರಾಮಣ್ಣನವರ ವಿಚಾರದಂತೆ ಕುಪ್ಪಳ್ಳಿಯಲ್ಲಿ ನವೆಂಬರ್ ತಿಂಗಳಲ್ಲಿ ಮೂರು ದಿನಗಳ ಕಾಲ ವಿಚಾರ ಕಮ್ಮಟವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸಾಹಿತಿಗಳು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಪ್ರತಿಷ್ಠಾನದಿಂದ ನೆರವು ನೀಡುವುದು, ಇದುವರೆಗಿನ 16 ಪ್ರಶಸ್ತಿಗಳಲ್ಲಿ ಐವರು ಮಹಿಳೆಯರಿಗೆ ಪ್ರಶಸ್ತಿ ಸಂದಿರುವುದು ರಾಮಣ್ಣನವರ ಆಶಯಕ್ಕೆ ಪೂರಕವಾಗಿ ನಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಮರ್ಶಕರಾದ ಆರ್.ಸುನಂದಮ್ಮ ಅವರು ಪ್ರಶಸ್ತಿ ವಿಜೇತ ಕೃತಿ ಕುರಿತು ಮಾತನಾಡಿ, ಈ ವರ್ಷ ಪ್ರಶಸ್ತಿಗೆ ಕೃತಿ ಆಯ್ಕೆ ಮಾಡಲು ನನಗೆ 10 ಕೃತಿಗಳನ್ನು ನೀಡಲಾಗಿತ್ತು. ಅದರಲ್ಲಿ ಸ್ವಾಮಿ ಪೊನ್ನಾಚಿ ಅವರ ದಾರಿ ತಪ್ಪಿಸುವ ಗಿಡ ಕೃತಿಯನ್ನು ಆಯ್ಕೆ ಮಾಡಲಾಯಿತು ಎಂದರು.‘ಒರೆಗಲ್ಲು’ ಕೃತಿ ಬಿಡುಗಡೆ:
ಬಳಿಕ ದಾರಿ ತಪ್ಪಿಸುವ ಗಿಡ ಕೃತಿಯ ಕೃರ್ತೃ ಸ್ವಾಮಿ ಪೊನ್ನಾಚಿ ಅವರಿಗೆ 2023ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಮಾಡಿ, 25 ಸಾವಿರ ರು.ನಗದು ಪುರಸ್ಕಾರದೊಂದಿಗೆ ಪ್ರೊ.ಕಾಳೇಗೌಡ ನಾಗವಾರ ಅಭಿನಂದಿಸಿದರು. ಅಲ್ಲದೇ, ಡಾ.ಬೆಸಗರಹಳ್ಳಿ ರಾಮಣ್ಣ ಅವರ ಅಂಕಣ ಬರಹಗಳ ಸಂಕಲನದ ಮರುಮುದ್ರಣವಾದ ‘ಒರೆಗಲ್ಲು’ ಕೃತಿ ಬಿಡುಗಡೆಗೊಳಿಸಲಾಯಿತು.ಕೃತಿಯ ಕರ್ತೃ ಸ್ವಾಮಿ ಪೊನ್ನಾಚಿ ಮಾತನಾಡಿ, ಬರವಣಿಗೆ ಎನ್ನುವುದು ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕೆ ಇರುವ ಅಸ್ತ್ರ. ಅದರಿಂದ ಸಮಾಜವನ್ನು ಬದಲಾವಣೆ ಮಾಡುತ್ತೇನೆ, ಸಮಾಜದ ಅಂಕು-ಡೊಂಕುಗಳನ್ನೆಲ್ಲಾ ಬರವಣಿಗೆಯಿಂದಲೇ ಸರಿಪಡಿಸುತ್ತೇನೆ ಎಂದುಕೊಳ್ಳುವುದು ಮೂರ್ಖತನ. ಅವರು ಢೋಂಗಿ ಬರಹಗಾರರಾಗಿರುತ್ತಾರೆ ಎಂದರು.
ಧೂರ್ತತನ ಮತ್ತು ಕೆಟ್ಟತನದಿಂದ ಪಾರಾಗುವುದಕ್ಕೆ ಬರವಣಿಗೆ ನನಗೆ ಸಹಕಾರಿಯಾಯಿತು ಎಂದು ಬೆಸಗರಹಳ್ಳಿ ರಾಮಣ್ಣನವರೇ ಬರೆದುಕೊಂಡಿದ್ದಾರೆ. ಈ ಮಾತನ್ನು ನಾನು ಬರವಣಿಗೆ ಶುರುಮಾಡಿದಾಗಿನಿಂದಲೂ ನಂಬಿದ್ದೇನೆ. ನಮ್ಮಲ್ಲಿರುವ ಮನಸ್ಸಿನಲ್ಲಿರುವ ಸೈತಾನನ್ನು ನಿತ್ಯವೂ ಕೊಂದುಕೊಳ್ಳುತ್ತಾ ಮನುಷ್ಯನಾಗುವುದೇ ಬರವಣಿಗೆ. ನನ್ನ ಬರವಣಿಗೆಗೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಸಂದಿರುವ ಗೌರವ ಎಂದರು.ಕಾರ್ಯಕ್ರಮಕ್ಕೂ ಮುನ್ನ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ಸಂಗಡಿಗರಿಂದ ನಡೆದ ಭಾವಗಾಯನ ಪ್ರೇಕ್ಷಕರ ಮನಸೂರೆಗೊಂಡಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಆರ್.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಸ್ವಾಮಿ ಪೊನ್ನಾಚಿ, ಪ್ರತಿಷ್ಠಾನದ ಆಜೀವ ಸದಸ್ಯರಾದ ಡಿ.ಪಿ.ರಾಜಮ್ಮ ರಾಮಣ್ಣ ಉಪಸ್ಥಿತರಿದ್ದರು.
ಸಮಕಾಲೀನತೆಯೇ ಸೃಜನಶೀಲತೆಯಾಗಿರುವ ಇಂದಿನ ದಿನಗಳಲ್ಲಿ ಸಾಂಸ್ಕೃತಿಕ ತಲ್ಲಣಗಳು ಹಲವು. ಆದರೆ, ಸ್ಥಳೀಯ ಭಾಷಾ ಸೊಗಡನ್ನು ಬಸಿದು ಕಥನ ಕಟ್ಟಿದ ರಾಮಣ್ಣನವರು ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ನೆಲೆಗಳನ್ನು ವಿಸ್ತರಿಸಿದವರು. ಪುಟ್ಟ ಪರಿಸರದ ಚೌಕಟ್ಟಿನಲ್ಲಿ ಕತೆಯನ್ನು ಹೇಳುತ್ತಿದ್ದ ರಾಮಣ್ಣನವರದು ಸ್ಥಳೀಯತೆಯನ್ನು ವಿಶ್ವಾತ್ಮಕಗೊಳಿಸಿದ ಬಹುದೊಡ್ಡ ಯಾತ್ರೆ.- ಕೋಟಿಗಾನಹಳ್ಳಿ ರಾಮಯ್ಯ, ಸಂಸ್ಕೃತಿ ಚಿಂತಕ