ಆಧುನಿಕ ಜಗತ್ತಿನಲ್ಲಿ ದಾಂಪತ್ಯ ಕಲಹಗಳು ಮತ್ತು ಸಂಬಂಧಗಳಲ್ಲಿ ಗಟ್ಟಿತನದ ಕೊರತೆ ಹೆಚ್ಚಾಗಿದ್ದು, ೧೨ನೇ ಶತಮಾನದ ಶಿವಶರಣರ ದಾಂಪತ್ಯ ಜೀವನದ ಸಿದ್ಧಾಂತಗಳು ಇಂದಿನ ಮಾನವ ಕುಲಕ್ಕೆ ಮಾದರಿಯಾಗಿ ನಿಂತು, ದೈಹಿಕ ಸಂಬಂಧವನ್ನು ಮೀರಿದ ಲಿಂಗಾಂಗ ಸಾಮರಸ್ಯವನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸೀತಾಗಿರಿಯ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಹೇಳಿದರು .

ಶಿಗ್ಗಾಂವಿ: ಆಧುನಿಕ ಜಗತ್ತಿನಲ್ಲಿ ದಾಂಪತ್ಯ ಕಲಹಗಳು ಮತ್ತು ಸಂಬಂಧಗಳಲ್ಲಿ ಗಟ್ಟಿತನದ ಕೊರತೆ ಹೆಚ್ಚಾಗಿದ್ದು, ೧೨ನೇ ಶತಮಾನದ ಶಿವಶರಣರ ದಾಂಪತ್ಯ ಜೀವನದ ಸಿದ್ಧಾಂತಗಳು ಇಂದಿನ ಮಾನವ ಕುಲಕ್ಕೆ ಮಾದರಿಯಾಗಿ ನಿಂತು, ದೈಹಿಕ ಸಂಬಂಧವನ್ನು ಮೀರಿದ ಲಿಂಗಾಂಗ ಸಾಮರಸ್ಯವನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸೀತಾಗಿರಿಯ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಹೇಳಿದರು.ಪಟ್ಟಣದ ವಿನಾಯಕ ನಗರದ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯಪರಿಷತ್ತು ತಾಲೂಕು ಘಟಕ, ಕದಳಿ ವೇದಿಕೆ ಮತ್ತು ವಿನಾಯಕ ನಗರ ವಾಸಿಗಳ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ನಡೆ-ನುಡಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಶರಣರ ಸಾಮರಸ್ಯದ ದಾಂಪತ್ಯ ಕುರಿತು ಮಾತನಾಡಿದರು. ಶರಣರ ದಾಂಪತ್ಯದಲ್ಲಿ ಪತಿ-ಪತ್ನಿ ಎಂಬ ಭೇದವಿಲ್ಲದೆ, ಗೌರವ ಮತ್ತು ಸಮಾನತೆಯ ತತ್ವದ ಮೇಲೆ ಜೀವನ ನಡೆಸಲಾಗುತ್ತಿತ್ತು. ಕಾಯಕ ಮತ್ತು ದಾಸೋಹದಲ್ಲಿ ಸಹಭಾಗಿತ್ವ ಹೊಂದಿದವರಾಗಿ ಕಾಯಕವೇ ಕೈಲಾಸ ಎಂಬ ತತ್ವದಡಿ ಜೀವನ ನಡೆಸಿದ್ದಾರೆ. ಅವರ ಸಂಸಾರಿಕ ಜೀವನವು ವೈಚಾರಿಕ ಚರ್ಚೆಗಳ ವೇದಿಕೆಗಳಾಗಿ, ವಾದ ವಿವಾದಗಳಿದ್ದರೂ ಪರಸ್ಪರ ಗೌರವ ಮತ್ತು ಜ್ಞಾನ ವಿಕಾಸಕ್ಕಾಗಿ ಪರಸ್ಪರ ಪೂರಕವಾಗಿರುತ್ತಿದ್ದವು ಎಂದರು.ಸತಿಪತಿಗಳೊಂದಾಗಿ ಶಿವನಿಗೆ ಒಪ್ಪುವಂತೆ ಬಾಳಿದ ಶರಣರ ದಾಂಪತ್ಯದ ಬದುಕು ಇಂದಿನ ಕಾಲದಲ್ಲಿ ಪರಸ್ಪರ ಗೌರವದ ಕೊರತೆಯಿಂದ ಸಂಘರ್ಷ ಮೂಡಿಸಿಕೊಳ್ಳುತ್ತಿರುವ ದಂಪತಿಗಳಿಗೆ ಪರಿಹಾರ ನೀಡಬಲ್ಲ ಸಂದೇಶಗಳಾಗಿ ಮಾರ್ಗದರ್ಶನ ಮಾಡುವುದರಿಂದ ಎಲ್ಲರೂ ಶರಣರ ಬದುಕನ್ನು ಕುರಿತು ತಿಳಿದುಕೊಳ್ಳಬೇಕು ಎಂದು ಹೇಳಿದರು.ಪಟ್ಟಣದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ಆಡಂಬರದ ಕಾರ್ಯಕ್ರಮಗಳಲ್ಲಿ ಆಯೋಜಕರ ವೈಭವವನ್ನು ಬಿಂಬಿಸುವ ಅನೈತಿಕ ಕಾರ್ಯಗಳು ಆಗುತ್ತಿದ್ದು, ಶರಣ ಸಾಹಿತ್ಯ ಪರಿಷತ್ತು ಅವುಗಳೆಲ್ಲವನ್ನು ಬದಿಗೊತ್ತಿ ಶರಣರ ಜೀವಾಳವನ್ನು ಅರಿತಿರುವ ಡಾ. ಎ.ಸಿ. ವಾಲಿ ಮಹಾರಾಜರಿಂದ ನೇರವಾಗಿ ೧೨ನೇ ಶತಮಾನದ ಸತ್ವಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದು. ಇಲ್ಲಿ ನಾವು ಕೇಳಿದ ಎಲ್ಲಾ ತತ್ವಗಳನ್ನು ನಮ್ಮ ಜೀವನದಲ್ಲಿ ಬಿತ್ತಿಕೊಂಡು ಉತ್ತಮ ಬದುಕನ್ನು ಬೆಳೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಟಿ.ಎಮ್. ಗೌರಿಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಎಸ್.ಶಿಂಧೆ, ಶಸಾಪ ಅಧ್ಯಕ್ಷ ಸಿ.ಡಿ.ಯತ್ತಿನಹಳ್ಳಿ, ಶಂಭು ಕೇರಿ, ಪರಮಗೌಡ ತೆಂಬದಮನಿ, ಉಷಾ ಪಾಟೀಲ, ಡಾ. ಲತಾ ನಿಡಗುಂದಿ, ಅನಿತಾ ಹಿರೇಮಠ, ಮಾಲತೇಶ ನಾಯ್ಕೋಡಿ, ರವಿ ಕಡಕೋಳ, ರಮೇಶ ಹರಿಜನ, ಗುರು ಅಣ್ಣಿಗೇರಿ, ವಾಯ್.ಎಚ್. ಮೇಕಳಿ, ಎಂ.ಆರ್. ಚೂರಿ, ಆರ್.ಎಸ್. ದುಂದೂರ, ಎನ್,ಎಮ್. ನದಾಫ, ಆರ್.ಎನ್. ಬೂಸನಗೌಡ್ರ, ಗಿರಿಶ ಸವಣೂರ, ಸಿ.ಬಿ. ಕಾಳೆ, ಎಂ.ಬಿ. ಖಾನಣ್ಣವರ, ವಾಯ್.ಸಿ. ಸಿರೂರ, ರಾಘವೇಂದ್ರ ದಾಸರ, ಎಸ್.ಎಫ್. ತಳವಾರ. ವಿ.ಜಿ. ದುಂಡಪ್ಪನವರ. ಶರೀಫ ಮಾಕಪ್ಪನವರ, ಆಕಾಶ ಆಲಂಶೆಟ್ಟರ ಇತರರಿದ್ದರು.