ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಇಂದಿನ ಪತ್ರಕರ್ತರಲ್ಲಿ ಅಧ್ಯಯನಶೀಲತೆ, ಸುದ್ದಿಯಲ್ಲಿ ವೈವಿಧ್ಯತೆಯ ಭಾರೀ ಕೊರತೆ ಕಂಡು ಬರುತ್ತಿರುವುದು ಕಳವಳಕಾರಿಯಾಗಿದೆ ಎಂದು ರಾಜ್ಯ ಕಾನಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ, ಕನ್ನಡಪ್ರಭ ಜಿಲ್ಲಾ ಪ್ರಧಾನ ವರದಿಗಾರ ಈಶ್ವರ ಶೆಟ್ಟರ್ ಕರೆ ನೀಡಿದರು.

ವೃತ್ತಿಯಲ್ಲಿ ಏಕತಾನತೆ ಹೊರಗಟ್ಟಲು ಪತ್ರಕರ್ತ ಮೊದಲು ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಹೊಸತನಕ್ಕೆ ತನ್ನನ್ನು ಒಡ್ಡಿಕೊಂಡು ವೃತ್ತಿಪರ ಕಠಿಣ ಸವಾಲುಗಳ ನಡುವೆ ಓದುವ ವರ್ಗ ಬೆಳೆಸುವತ್ತ ಮುಂದಾಗಬೇಕು. ತಾಲೂಕು ಮತ್ತು ಗ್ರಾಮೀಣ ಮಟ್ಟದ ಪತ್ರಕರ್ತರು ಅದೇ ರಾಗ ಅದೇ ಹಾಡು ಎಂಬಂತೆ ಕಾಟಾಚಾರದ ಸುದ್ದಿ ಮಾಡುವುದನ್ನು ಬಿಟ್ಟು ಬರವಣಿಗೆಯ ಕೌಶಲ್ಯ ಅಳವಡಿಸಿಕೊಂಡು ಹೊಸತನದ ರೂಪುರೇಷೆಯೊಡನೆ ಸುದ್ದಿ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಜಿಲ್ಲಾ ಘಟಕ ಹೊಸ ಹಾಗೂ ಗ್ರಾಮೀಣ ಮತ್ತು ಹಿರಿಯ ಪತ್ರಕರ್ತರಿಗೆ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಗುಣಗ್ರಾಹಿ ಮತ್ತು ಸತ್ಯನಿಷ್ಠ ವರದಿಗಾರಿಕೆಗೆ ಪತ್ರಕರ್ತರನ್ನು ಸಜ್ಜುಗೊಳಿಸಲು ಬದ್ಧವಾಗಿದೆ. ತಾಲೂಕು ಹಂತದ ಘಟಕಗಳು ಈ ನಿಟ್ಟಿನತ್ತ ಮುಂದುವರೆದಲ್ಲಿ ಮಾತ್ರ ಇಂದಿನ ಸ್ಪರ್ಧಾತ್ಮಕ ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮ ಪೈಪೋಟಿ ನೀಡಿ ಉಳಿಯಲು ಸಾಧ್ಯವೆಂದರು.

ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಪತ್ರಕರ್ತರು ತಮ್ಮ ಸೀಮಿತ ಆರ್ಥಿಕ ಸ್ಥಿತಿಯ ನಡುವೆಯೂ ಯಾರ ಮುಲಾಜಿಲ್ಲದೇ ವಸ್ತುನಿಷ್ಠ ಹಾಗೂ ವೈವಿಧ್ಯಯುತ ವರದಿಗಾರಿಕೆಯಿಂದ ಮುದ್ರಣ ಮಾಧ್ಯಮ ಗಟ್ಟಿಗೊಳ್ಳಬೇಕಿದೆ ಎಂದರು.

ಹಿರಿಯ ಸಾಹಿತಿ ಶಿವಾನಂದ ಬಾಗಲಕೋಟಮಠ ಮಾತನಾಡಿ, ಇತ್ತೀಚಿಗೆ ಪತ್ರಿಕೆಗಳಲ್ಲಿನ ವರದಿಗಾರಿಕೆಯ ಮೊದಲಿದ್ದ ಮೊನಚುಗಾರಿಕೆ ಮಾಯವಾಗಿದೆ. ಕೆಲವು ಪತ್ರಿಕೆಗಳಲ್ಲಿನ ಸಂಪಾದಕೀಯ ಮತ್ತು ಕೆಲ ಪತ್ರಕರ್ತರ ವರದಿಗಳ ಓದುವ ವರ್ಗವೇ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಕೇವಲ ವ್ಯಾಪಾರಿ ಮಾರ್ಗಕ್ಕೆ ಅಂಟಿಕೊಳ್ಳದೇ ಪತ್ರಿಕೆಗಳು ಮತ್ತೆ ಅಂಥ ಮೊನಚುತನ ಮತ್ತು ನಿಸ್ವಾರ್ಥ ಬರಹಗಳಿಂದ ಕೂಡಿದ ದಿನಗಳು ಮರುಕಳಿಸಲೆಂದರು.


ವೇದಿಕೆಯಲ್ಲಿ ಜಿಲ್ಲಾ ಕಾನಿಪ ಅಧ್ಯಕ್ಷ ಮಹೇಶ ಅಂಗಡಿ, ತಾಲೂಕಾಧ್ಯಕ್ಷ ಪ್ರಕಾಶ ಕುಂಬಾರ ಉಪಸ್ಥಿತರಿದ್ದರು.