ನಗರದ ಜನರಲ್ಲಿ ಮೂಡದ ಮತದಾನ ಜಾಗೃತಿ; ಕಳೆದ ಸಾಲಿನಂತೆಯೇ ಮತದಾನಕ್ಕೆ ನಿರಾಸಕ್ತಿ

| Published : Apr 27 2024, 02:01 AM IST / Updated: Apr 27 2024, 09:04 AM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನ ಹಿಂದಿನ ಚುನಾವಣೆಯಂತೆ ನೀರಸ ಮತದಾನವಾಗಿದೆ. ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆಯಿತು.

 ಬೆಂಗಳೂರು :  ರಾಜಧಾನಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನ ಹಿಂದಿನ ಚುನಾವಣೆಯಂತೆ ನೀರಸ ಮತದಾನವಾಗಿದೆ. ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆಯಿತು.

ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ ಸ್ವಲ್ಪ ಮಟ್ಟಿಗೆ ಬಿರುಸಿನ ಮತದಾನ ನಡೆಯುತ್ತಾರೂ, ಬಿಸಿಲಿನ ಝಳ ಏರುತ್ತಿದಂತೆ ಮತದಾನ ಪ್ರಮಾಣ ಕ್ರಮೇಣ ಇಳಿಕೆ ಆಗಿತ್ತು. ಬಿಸಿಲು ಇಳಿಮುಖವಾಗುತ್ತಿದಂತೆ ಮತಗಟ್ಟೆಗಳಲ್ಲಿ ಸರತಿ ಸಾಲು ದೊಡ್ಡದಾಗಿ ಕಂಡು ಬಂದಿತ್ತು.

ಶುಕ್ರವಾರ ಸಂಜೆ 5 ಗಂಟೆ ವೇಳೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೇ.50.4 ರಷ್ಟು ಮತದಾನವಾಗಿತ್ತು. ಬೆಂಗಳೂರು ಕೇಂದ್ರದಲ್ಲಿ ಶೇ.48.61 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.49.37 ರಷ್ಟು ಮತದಾನವಾಗಿತ್ತು.

ಮೂರು ಕ್ಷೇತ್ರದ ಅಭ್ಯರ್ಥಿಗಳು ಬೆಳಗ್ಗೆಯೇ ಕುಟುಂಬ ಸಮೇತರಾಗಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿ, ನಂತರ ಇಡೀ ದಿನ ಮುಖಂಡರೊಂದಿಗೆ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿ ಅವಲೋಕಿಸಿದರು.

ಹಿರಿಯ ನಾಗಕರಿಕರು, ಮಹಿಳೆಯರು, ಅಂಗವಿಕಲರು, ಯುವ ಮತದಾರರು ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ಮತದಾನ ಮಾಡಿದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಟೀಂ ಇಂಡಿಯಾ ಪ್ರಧಾನ ಕೋಚ್ ರಾಹುಲ್ ದ್ರಾವಿಡ್, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ನಾರಾಯಣ ಮೂರ್ತಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ಕಲಾವಿದರಾದ ಅನಂತನಾಗ್‌ ಸೇರಿದಂತೆ ರಮೇಶ್‌ ಅರವಿಂದ್‌, ರಾಜ್ಯಸಭಾ ಸದಸ್ಯರೂ ಆದ ಜಗ್ಗೇಶ್‌, ದರ್ಶನ್‌, ಸುದೀಪ್‌, ಗಣೇಶ್‌, ಶರಣ್‌, ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌, ರಕ್ಷಿತಾ ಪ್ರೇಮ್‌, ಸಪ್ತಮಿಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಶಾಸಕರು, ಪ್ರಮುಖ ರಾಜಕಾರಣಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.ಸಣ್ಣ ಪುಟ್ಟ ಘಟನೆ

ಬಿಟಿಎಂ ಲೇಔಟ್, ಚಾಮರಾಜಪೇಟೆ ಸೇರಿದಂತೆ ಕೆಲವು ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಶಾಂತಿನಗರದ ವ್ಯಾಪ್ತಿಯ ಮತಗಟ್ಟೆಯೊಂದರ ಬಳಿ ಬೃಹತ್ ಮರವೊಂದು ಉರುಳಿ ಬಿದ್ದ ಘಟನೆ ನಡೆಯಿತು. ಆದರೆ ಯಾವುದೇ ಅಪಾಯ ಉಂಟಾಗಿಲ್ಲ.

ಮಲ್ಲೇಶ್ವರ ಸೇರಿದಂತೆ ನಗರದ ಕೆಲವು ಮತಗಟ್ಟೆಯಲ್ಲಿ ಮತ ಯಂತ್ರದ ಕೈಕೊಟ್ಟು ಸಮಸ್ಯೆ ಉಂಟಾಯಿತು. ಹೀಗಾಗಿ ಮತದಾನ ಮಾಡದೇ ಕೆಲವು ವಾಪಾಸ್‌ ಹೋದ ಘಟನೆ ನಡೆದಿದೆ. ಜೆ.ಪಿ.ನಗರದಲ್ಲಿ ಮತದಾನ ಮಾಡಲು ಬಂದಿದ್ದ ಮಹಿಳೆಯೊಬ್ಬರಿಗೆ ಹೃದಯಾಘಾತವಾದಾಗ ಸ್ಥಳದಲ್ಲಿದ್ದ ವೈದ್ಯ ಗಣೇಶ್ ಶ್ರೀನಿವಾಸ್ ಪ್ರಸಾದ್ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.ಸ್ವಯಂ ಬಂದ್‌

ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿತ್ತು, ವ್ಯಾಪಾರ ವಹಿವಾಟು ಕುಸಿತಗೊಂಡಿತ್ತು. ಅನೇಕ ಕಡೆ ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಲಾಗಿತ್ತು. ಕೆಲವು ಹೋಟೆಲ್‌ಗಳಲ್ಲಿ ಮತದಾನ ಮಾಡಿದವರಿಗೆ ರಿಯಾಯಿತಿ ದರದಲ್ಲಿ ತಿಂಡಿ, ತಿನಿಸು ನೀಡುತ್ತಿದ್ದರು.

ಬೆಂಗಳೂರಿನ ಮತದಾನ ಪ್ರಮಾಣ

ಮೂರು ಚುನಾವಣೆಗಳ ಮತದಾನ ವಿವರ (%)

ಲೋಕಸಭಾ ಕ್ಷೇತ್ರ202420192014ಬೆಂಗಳೂರು ಉತ್ತರ54.4254.6256.53

ಬೆಂಗಳೂರು ಕೇಂದ್ರ52.8154.2955.64ಬೆಂಗಳೂರು ದಕ್ಷಿಣ53.1553.4855.75