ಸಾರಾಂಶ
ಮೊಳಕೆಯೊಡೆದ ಸಸಿಗಳಿಗೆ ಅಂಟಿದ ರೋಗ | ನಿಯಂತ್ರಣ ಸಾಧ್ಯ: ಕೃಷಿ ಅಧಿಕಾರಿ ವನಜಾಕ್ಷಿ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಮೊಳಕೆಯೊಡೆದು ಚಿಗುರುತ್ತಿರುವ ಮೆಕ್ಕೆಜೋಳದ ಸಸಿಗಳಿಗೆ ಇದೀಗ ಲದ್ದಿ ಹುಳು ಕಾಟ ಶುರುವಾಗಿದ್ದು, ಇದರಿಂದ ಕೃಷಿಕರು ಆತಂಕಕ್ಕೆ ಈಡಾಗಿದ್ದಾರೆ.
ಆರ್ಭಟಿಸಿದ ಮುಂಗಾರು ಪೂರ್ವ ಮಳೆಗೆ ಸಂತಸಗೊಂಡು ರೈತಾಪಿ ಜನರು ಮೆಕ್ಕೆಜೋಳ ಬಿತ್ತನೆ ಕೆಲಸ ಮಾಡಿದ್ದಾರೆ. ಆದರೆ ಈಗ ಸಸಿಗಳಿಗೆ ಸೈನಿಕ ಹುಳು ಎಂದೇ ಕರೆಯಲ್ಪಡುವ ಲದ್ದಿ ಹುಳು ಕಾಟ ಇಮ್ಮಡಿಗೊಂಡಿದೆ.ಭರಮಸಾಗರ ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಈ ಕುರಿತು ರೈತರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ರೋಗದ ಕಾಟದ ತೀವ್ರತೆ ಗಮನಕ್ಕೆ ಬಂದ ಕೂಡಲೇ ಭರಮಸಾಗರ ಕೃಷಿ ಕೇಂದ್ರದ ಕೃಷಿ ಅಧಿಕಾರಿ ಎಚ್.ಎಸ್.ವನಜಾಕ್ಷಿ ಹಲವು ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಿರಿಗೆರೆ, ಹಂಪನೂರು, ಕೋಡಿ ರಂಗವ್ವನಹಳ್ಳಿ, ಕಾಲಗೆರೆ ಮುಂತಾದ ಹಳ್ಳಿಗಳಲ್ಲಿ ಮೆಕ್ಕೆ ಜೋಳಕ್ಕೆ ಬಾಧೆ ತಗುಲಿದೆ ಎಂದು ಕೃಷಿ ಅಧಿಕಾರಿ ದೃಢಪಡಿಸಿದ್ದಾರೆ.ಸಿರಿಗೆರೆಯ ಕೃಷಿಕ ಬೆನ್ನೂರ ಸತೀಶ್ ಜಮೀನಿನಲ್ಲಿ ಪರಿಶೀಲನೆ ನಡೆಸಿದ ಕೃಷಿ ಅಧಿಕಾರಿಗಳು ಮೆಕ್ಕೆಜೋಳ ಬೆಳೆಯಲ್ಲಿ ಎಲೆ ಮತ್ತು ಸುಳಿಯನ್ನು ತಿನ್ನುವ ಹುಳುಗಳು ಕಾಣಿಸಿಕೊಂಡಿವೆ. ಇದನ್ನು ವೈಜ್ಞಾನಿಕವಾಗಿ "ಸ್ಫೋಡಾಫ್ಟರಾ ಫ್ಯೂಜಿಫಡಾ " ಎಂದು ಕರೆಯಲಾಗುತ್ತದೆ. ಈ ಹುಳುಗಳ ಜೊತೆಗೆ ಇತರೆ ಕಾಂಡ ಕೊರಕ ಬಾದೆಯೂ ಕಂಡುಬಂದಿದ್ದು, ವಾತಾವರಣವು ಈ ರೋಗಗಳಿಗೆ ಕಾರಣವಾಗುತ್ತದೆ. ಈ ಹುಳುಗಳು ಬೆಳೆಯಲ್ಲಿ ಲಭ್ಯವಾಗುವ ಹೆಚ್ಚಿನ ಅಂಶವನ್ನು ತಿಂದು ಇಳುವರಿ ಕಡಿಮೆ ಮಾಡುತ್ತವೆ. ಕೀಟದ ಬಾಧೆಯು ತೀವ್ರವಾದಲ್ಲಿ ಬೆಳೆಯುತ್ತಿರುವ ಸುಳಿಯನ್ನೇ ತಿಂದು ಹಾಕಿ ಬೆಳೆಗೆ ಹಾನಿಯನ್ನುಂಟು ಮಾಡುತ್ತವೆ. ಇದರಿಂದ ಸಸ್ಯವು ಸತ್ತು ಹೋಗುತ್ತದೆ. ಅಧಿಕ ಪ್ರಮಾಣದಲ್ಲಿ ಲದ್ದಿಯನ್ನು ಸುಳಿಯಲ್ಲಿ ಹಾಕುತ್ತವೆ. ಇದು ಸುಳಿಯಲ್ಲಿ ರೋಗ ಹರಡುವುದಕ್ಕೆ ಕಾರಣವಾಗುತ್ತದೆ. ಇದರಿಂದ ರೋಗ ಬಾಧೆ ಕಾಣಿಸಿಕೊಳ್ಳುತ್ತದೆ. ಜಿಲ್ಲೆಯಲ್ಲಿ ಈಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಜೋರು ಮಳೆ ಸುರಿದರೆ ರೋಗಕ್ಕೆ ಪರಿಹಾರವೂ ಪ್ರಾಕೃತಿಕವಾಗಿಯೇ ದೊರೆಯುತ್ತದೆ ಎಂದರು.
ತಾಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ, ಜೊತೆಗೆ, ಕಡಿಮೆ ಉಷ್ಣಾಂಶ ಮತ್ತು ಹೆಚ್ಚಿನ ಆರ್ಧತೆ ಇರುವಂತಹ ಸಂದರ್ಭದಲ್ಲಿ ಈ ರೋಗವು ಸಾಮಾನ್ಯ. ಮುಂಗಾರು ಪೂರ್ವದ ದಿನಗಳಲ್ಲಿ ಬಿತ್ತನೆ ಮಾಡಿರುವ ರೈತರ ಜಮೀನುಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ರೈತರು ಸಾಮೂಹಿಕವಾಗಿ ಬಿತ್ತನೆ ನಡೆಸದೆ, ಬಿಡಿ ಬಿಡಿಯಾಗಿ ಬಿತ್ತನೆ ಮಾಡಿರುವುದೂ ಸಹ ಈ ರೋಗಕ್ಕೆ ಕಾರಣವಾಗಿದೆ. ಸುತ್ತಲಿನ ಎಲ್ಲಾ ಜಮೀನುಗಳಲ್ಲಿ ಬೆಳೆ ಕಾಣಿಸಿಕೊಂಡರೆ ಸಹಜವಾಗಿ ಈ ರೋಗದ ಪ್ರಮಾಣ ಕಡಿಮೆ ಇರುತ್ತದೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.ರೈತರು ಬೇಸಿಗೆಯಲ್ಲಿ ಜಮೀನಿನ ಉಳುಮೆ ಮಾಡುವುದು, ಪ್ರತಿ ವರ್ಷ ಜಮೀನಿನಲ್ಲಿ ಒಂದೇ ತೆರನಾದ ಬೆಳೆ ಬೆಳೆಯದೆ ಬದಲಾವಣೆ ಮಾಡುವುದು, ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವುದರಿಂದ ರೋಗ ನಿಯಂತ್ರಿಸಬಹುದಾಗಿದೆ.
ಕೋಡಿ ರಂಗವ್ವನಹಳ್ಳಿಯ ರೈತ ಹನುಮಂತಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಮಳೆ ಜಾಸ್ತಿಯಾಗಿ ಮೆಕ್ಕೆಜೋಳದ ಫಸಲು ಕೈಗೆ ಸಿಗಲಿಲ್ಲ. ಈ ವರ್ಷ ಮಳೆಯು ಅಧಿಕ ಪ್ರಮಾಣದಲ್ಲಿ ಬರುತ್ತದೆ ಎಂಬ ಆಸೆಯಿಂದ ಬಿತ್ತನೆ ಮಾಡಿದ್ದೇವೆ. ಮಳೆ ಈಗ ಕೈಕೊಟ್ಟಿದೆ. ಇದರಿಂದ ರೈತ ಸಮುದಾಯಕ್ಕೆ ತೀವ್ರ ಪೆಟ್ಟು ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ವೇಳೆ ರೈತರಾದ ಬೆನ್ನೂರು ಸತೀಶ್, ಪಂಚಾಕ್ಷರಯ್ಯ, ಷಣ್ಮುಖ, ಕೊಟ್ರೇಶ್ ಮುಂತಾದವರು ಹಾಜರಿದ್ದರು.
ಬೆಳೆ ನಿರ್ವಹಣೆ: ಹುಳುಗಳ ಬಾಧೆ ಹೆಚ್ಚಿದಲ್ಲಿ ಎಮಾಮೆಕ್ಟಿನ್ ಬೆಂಜೋಯೆಟ್ 0.4 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಲ್ಯಾಮ್ಲಾಸೈಲೋಥ್ರಿನ್ 1ಮಿ.ಲೀ. ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು. ಸಂಜೆ ವೇಳೆ ಬೆಳೆಯ ಎಲೆಗಳು ತೊಯ್ಯುವಂತೆ ಸಿಂಪಡನೆ ಮಾಡಿದರೆ ಈ ರೋಗದ ಹತೋಟಿ ಸಾಧಿಸಬಹುದು.