ಮಳೆಯಾದರೂ ಭರ್ತಿಯಾಗದ ಕೆರೆ ಕಟ್ಟೆಗಳು

| Published : May 16 2024, 12:57 AM IST / Updated: May 16 2024, 12:08 PM IST

ಮಳೆಯಾದರೂ ಭರ್ತಿಯಾಗದ ಕೆರೆ ಕಟ್ಟೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮುಂಗಾರಿನ ಆಗಮನ ವಿಳಂಬವಾಗುತ್ತಿದ್ದು, ಈ ವರ್ಷವೂ ಜಿಲ್ಲೆಯ ವಿವಿಧೆಡೆ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. 

 ಹಾಸನ : ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮುಂಗಾರಿನ ಆಗಮನ ವಿಳಂಬವಾಗುತ್ತಿದ್ದು, ಈ ವರ್ಷವೂ ಜಿಲ್ಲೆಯ ವಿವಿಧೆಡೆ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೆ, ಬಹುತೇಕ ಭಾಗಗಳಲ್ಲಿ ಕೆರೆಕಟ್ಟೆಗಳು ತುಂಬುವಷ್ಟು ಮಳೆಯಾಗದ ಕಾರಣ ಭತ್ತ, ಕಬ್ಬು ಸೇರಿದಂತೆ ನೀರು ಆಶ್ರಿತ ಬೆಳೆಗಳ ಬಿತ್ತನೆಯಲ್ಲಿ ಇಳಿಮುಖ ವಾಗಬಹುದು.

ಜಿಲ್ಲೆಯ ಬಯಲು ಸೀಮೆ, ಅರೆ ಮಲೆನಾಡು, ಮಲೆನಾಡು ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜಿಲ್ಲೆಯ ದೊಡ್ಡಮಗ್ಗೆ, ಕೋಣನೂರು ,ಬಾಣಾವರ, ಜಾವಗಲ್, ಬಿಕ್ಕೊಡು, ಹಳೇಬೀಡು, ಮಾದಿಹಳ್ಳಿ, ಹಾಸನ ತಾಲೂಕಿನ ದುದ್ದ, ಸಾಲಗಾಮೆ, ಶಾಂತಿಗ್ರಾಮ ಕಟ್ಟಾಯ ಮಾದಿಹಳ್ಳಿ ಸಕಲೇಶಪುರ ಆಲೂರು ಭಾಗದ ಹಾನುಬಾಳು ಸೇರಿದಂತೆ ಬಹುತೇಕ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ:

ಕಳೆದ 24 ಗಂಟೆ ಅವಧಿಯಲ್ಲಿ ಆಲೂರು ತಾಲೂಕಿನ ಪಾಳ್ಯ ಹೋಬಳಿಯಲ್ಲಿ 7.3 ಮಿಲಿಮೀಟರ್ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯಲ್ಲಿ 2.9, ಅರಸೀಕೆರೆ ತಾಲೂಕಿನ ಜಾವಗಲ್ ನಲ್ಲಿ 48.3 ಮಿ.ಮೀ, ಬಾಣಾವರದಲ್ಲಿ 38.5, ಬೇಲೂರು ಪಟ್ಟಣದಲ್ಲಿ 35.3, ಹಳೇಬೀಡಿನಲ್ಲಿ 53.8, ಮಾದಿಹಳ್ಳಿ 28.9, ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿ 8.2, ಹಾಸನ ತಾಲೂಕಿನ ದುದ್ದ ಹೋಬಳಿ 24.0 , ಸಾಲಿಗಾಮೆ 23.7, ಶಾಂತಿಗ್ರಾಮ 11.7 , ಮಿ.ಮೀ ಮಳೆಯಾಗಿದೆ. ಪುರ ತಾಲೂಕಿನ ಹಳೆಕೋಟೆಯಲ್ಲಿ 1.8, ಸಕಲೇಶಪುರದ ಬೆಳಗೋಡು ಹೋಬಳಿಯಲ್ಲಿ 4.3, ಹಾನುಬಾಳು 9.8 ಮಿಮೀ ಮಳೆ ದಾಖಲಾಗಿದೆ.

ಇಂದು ಸಹ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಗ್ಗೆ ಬಾರಿ ಮಳೆಯಾಗಿದ್ದು ಹಾಸನ ನಗರ ಸೇರಿ ಹಲವೆಡೆ ಮುಂಜಾನೆಯೇ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಮಳೆ ಸುರಿದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚನ್ನರಾಯಪಟ್ಟಣ, ಅರಸೀಕೆರೆ, ಬೇಲೂರು, ಅರಕಲಗೂಡು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಜೋಳ, ರಾಗಿ, ಭತ್ತ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಶುಂಠಿ ಬಿತ್ತನೆ ಕಾರ್ಯ ನಡೆದಿದ್ದು, ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರೂ ಕೊಳವೆಬಾವಿಯಿಂದ ಅಲ್ಪಸ್ವಲ್ಪ ನೀರನ್ನು ಬಳಕೆ ಮಾಡಲಾಗುತ್ತಿತ್ತು ಇನ್ನೂ ಕೆಲ ಕೊಳವೆಬಾವಿಯಲ್ಲಿ ನೀರು ಕ್ಷೀಣಿಸುವ ಸ್ಥತಿ ನಿರ್ಮಾಣವಾಗಿತ್ತು. ಇದೀಗ ವರುಣನ ಕೃಪೆ ಕಾರಣ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.

ಬಿತ್ತನೆ ಗೆಡ್ಡೆಗಳ ಮಾರಾಟ ಪ್ರಾರಂಭ:

2024-25ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಗೆಡ್ಡೆಗಳ ಮಾರಾಟ ಪ್ರಕ್ರಿಯೆಯನ್ನು ದಿನಾಂಕ 15.05.2024ರ ಪೂರ್ವಾಹ್ನ 10 ಗಂಟೆಯಿಂದ ಹಾಸನ ತಾಲೂಕು ಎಪಿಎಂಸಿ ಪ್ರಾಂಗಣದಲ್ಲಿ ಪ್ರಾರಂಭಿಸಲಾಗುತ್ತಿದೆ, ಪ್ರತಿ ಕ್ವಿಂಟಲ್‌ ಬಿತ್ತನೆಗೆ ಬಳಸುವ ಆಲೂಗಡ್ಡೆಯ ಮಾರಾಟ ದರವನ್ನು ರೂ.2400 -2500/- ಎಂದು ಜಿಲ್ಲಾ ಮಟ್ಟದ ತಾಂತ್ರಿಕ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿರುತ್ತದೆ. ಇದರ ಉಪಯೋಗವನ್ನು ರೈತರು ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಆಲೂಗೆಡ್ಡೆ ಬೆಳೆಯ ಮುಂಜಾಗ್ರತ ಕ್ರಮಗಳು:

೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಲೂಗಡ್ಡೆ ಬೆಳೆಯಲು ಇಚ್ಛಿಸಿರುವ ರೈತರು ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಮುಂದುವರಿಯುವುದು. 2024 -25 ನೇ ಸಾಲಿನ ಮಾರ್ಚ್ ಏಪ್ರಿಲ್ ಮಾಹೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆ ಆಗದಿರುವ ಕಾರಣ ಆಲೂಗಡ್ಡೆ ಬಿತ್ತನೆಯನ್ನು ಮುಂದೂಡುವುದು. ಮೇ 7ರಿಂದ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಇನ್ನು4-5 ಹದವಾದ ಮಳೆಯಾದ ನಂತರ ಆಲೂಗಡ್ಡೆ ಬೇಸಾಯಕ್ಕೆ ಭೂಮಿ ಸಿದ್ಧತೆ ಮಾಡಿಕೊಂಡು ನಂತರ ಬಿತ್ತನೆ ಮಾಡುವುದು ಸೂಕ್ತ. ಹೀಗೆ ಮಾಡುವುದರಿಂದ ಮಣ್ಣಿನ ಉಷ್ಣಾಂಶ ಕಡಿಮೆಯಾಗಿ ಬಿತ್ತನೆ ಮಾಡಿದ ಗೆಡ್ಡೆಗಳು ಮೊಳಕೆಯೊಡೆಯಲು ಸಹಕಾರಿಯಾಗುತ್ತದೆ. ಒಂದೆರಡು ಮಳೆಯಾದ ಕೂಡಲೆ ತರಾತುರಿಯಲ್ಲಿ ಭೂಮಿ ಸಿದ್ಧತೆ ಮಾಡಿ ಬಿತ್ತನೆ ಮಾಡಿದರೆ ಮಣ್ಣಿನ ಉಷ್ಣಾಂಶ ಇನ್ನೂ ಕಡಿಮೆಯಾಗದ ಕಾರಣ ಗೆಡ್ಡೆಗಳು ಕರಗುತ್ತವೆ. ಆದ್ದರಿಂದ ರೈತರು ಇನ್ನು ಕೆಲ ದಿನಗಳ ಕಾಲ ಉತ್ತಮ ಮಳೆಯನ್ನು ನಿರೀಕ್ಷಿಸಿ ಮಳೆಯಾದ ನಂತರ ಬಿತ್ತನೆ ಮಾಡುವುದು ಸೂಕ್ತ.

ಪಂಜಾಬ್, ಜಲಂಧರ್ ರಾಜ್ಯಗಳಿಂದ ಬರುವ ಆಲೂಗಡ್ಡೆಯನ್ನು ರೈತರು ಖರೀದಿಸಿದ ನಂತರ ತಕ್ಷಣ ಬಿತ್ತನೆ ಮಾಡಿದರೆ ಗೆಡ್ಡೆಗಳು ಕರಗುತ್ತವೆ. ರೈತರು ಗೆಡ್ಡೆಗಳನ್ನು ಖರೀದಿಸಿದ ನಂತರ ಅವುಗಳನ್ನು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ೫-೬ ದಿನಗಳ ಕಾಲ ನೆರಳಿನಲ್ಲಿ ಹರಡಿ, ಮೊಳಕೆಗಳು ಬಂದ ನಂತರ ಬಿತ್ತನೆಗೆ ಉಪಯೋಗಿಸಬೇಕು.

ಮುನ್ಸೂಚನೆ: ಬಿತ್ತನೆ ಮಾಡುವ ಮುನ್ನ ಗೆಡ್ಡೆಗಳನ್ನು ನೆರಳಿನಲ್ಲಿ 7-5  ದಿನಗಳ ಕಾಲ ಹರಡಿ ಹದಗೊಳಿಸಿ, ಬಿತ್ತನೆಯ ಹಿಂದಿನ ದಿನ ಕಡ್ಡಾಯವಾಗಿ ಬೀಜೋಪಚಾರ (ಮ್ಯಾಂಕೋಜೆಬ್ 4 ಗ್ರಾಂ + ಮೆಟಲಾಕ್ಸಿಲ್ 1 ಗ್ರಾಂ + ಸ್ಟೆಪ್ಟೋಮೈಸಿನ್ ಸಲ್ಫೇಟ್ ೦.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ೧೦-೧೫ ನಿಮಿಷಗಳ ಕಾಲ ಬೀಜೋಪಚಾರ ಮಾಡಬೇಕು) ಮಾಡಿ ನಂತರ ನೆರಳಿನಲ್ಲಿ 24  ಗಂಟೆಗಳ ಕಾಲ ಗೆಡ್ಡೆಗಳನ್ನು ಒಣಗಿಸಿ ಬಿತ್ತನೆಗೆ ಬಳಸಬೇಕು. ಮುಂದುವರೆದು, ಹೆಚ್ಚಿನ ಮಾಹಿತಿಗಾಗಿ ರೈತರುಗಳು ತಮ್ಮ ತಾಲೂಕಿನ ಮತ್ತು ಹೋಬಳಿಯ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವುದು.