ಸಾರಾಂಶ
ಕನ್ನಡಪ್ರಭವಾರ್ತೆ ಚಳ್ಳಕೆರೆ
ತಾಲೂಕಿನ ತಳಕು ಹೋಬಳಿಯ ಸಿರಿವಾಳ ಓಬಳಾಪುರ ಗ್ರಾಮದಲ್ಲಿ ಎಮ್ಮೆ ಮೇಯಿಸುವ ಸಂದರ್ಭದಲ್ಲಿ ಕರಡಿದಾಳಿಗೆ ತುತ್ತಾಗಿ ಗಾಯಗೊಂಡು ಮೃತಪಟ್ಟ ಓಂಕಾರಪ್ಪ(65)ನ ಕುಟುಂಬ ವರ್ಗಕ್ಕೆ ಅರಣ್ಯ ಇಲಾಖೆಯಿಂದ ತುರ್ತು ಪರಿಹಾರವಾಗಿ 5 ಲಕ್ಷ ರು. ಚೆಕನ್ನು ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ನಗರದ ಪ್ರವಾಸಿ ಮಂದಿರದಲ್ಲಿ ಮೃತನ ಪತ್ನಿ ಅನಸೂಯಮ್ಮನವರಿಗೆ ನೀಡಿದರು.ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನೊಳಗೆ ಪ್ರವೇಶಿಸಿ ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತಿವೆ. ಕಾರಣ, ಅರಣ್ಯ ಸಂಪತ್ತು ನಾಶವಾಗುತ್ತಿರುವ ಸಂದರ್ಭದಲ್ಲಿ ಕಾಡಿನಲ್ಲಿ ಆಹಾರ, ನೀರು, ಜಾಗದ ಕೊರತೆಯಿಂದ ನಗರ ಪ್ರವೇಶಿಸುತ್ತಿರುವ ಕಾರಣ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ. ರೈತ ಓಂಕಾರಪ್ಪನ ಸಾವು ನೋವು ತಂದಿದೆ, ಅರಣ್ಯ ಇಲಾಖೆಯಿಂದ ಮೊದಲನೇ ಹಂತದ 5 ಲಕ್ಷ ರು. ಚೆಕನ್ನು ನೀಡಲಾಗಿದೆ. ಇನ್ನೂ 10 ಲಕ್ಷ ರು. ಪರಿಹಾರದ ಹಣ ಕುಟುಂಬ ವರ್ಗದ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಾಡು ಸಮೀಪದ ಗ್ರಾಮಾಂತರ ಪ್ರದೇಶಗಳಿಗೆ ಪ್ರತಿನಿತ್ಯ ಭೇಟಿ ನೀಡಿ, ಜಾಗೃತಿ ಮೂಡಿಸಿ, ಕರಡಿ, ಚಿರತೆಗಳು ಸಾಕಷ್ಟು ಸಂಖ್ಯೆಯಲ್ಲಿ ತಾಲೂಕಿನ ಗಡಿ ಭಾಗದ ಕಾಡುಗಳಲ್ಲಿದ್ದು, ಸಂಜೆ ವೇಳೆ ಆಹಾರ ಹುಡುಕುತ್ತಾ ಗ್ರಾಮಗಳನ್ನು ಪ್ರವೇಶಿಸುತ್ತಿವೆ. ಆದ್ದರಿಂದ ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮಗಳಲ್ಲಿ ಡಂಗೂರ ಸಾರಿಸುವ ಮೂಲಕ ಜನರನ್ನು ಎಚ್ಚರಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಚಿರತೆ ದಾಳಿಗೆ ತುತ್ತಾಗಿ ಗಾಯಗೊಂಡ ಬೊಮ್ಮಲಿಂಗನ ಹಳ್ಳಿಯ ಬಸವರಾಜವರಿಗೆ 1.60 ಲಕ್ಷ ರು. ಗುಂತಕೋಲಮ್ಮನ ಹಳ್ಳಿಯ ಸಾನ್ವಿ ಎಂಬ ಮಗುವಿಗೆ ಕೋತಿ ದಾಳಿ ಮಾಡಿ ಗಾಯಗೊಳಿಸಿದ್ದು, ಅವರಿಗೆ 60 ಸಾವಿರ ಪರಿಹಾರದ ಚೆಕನ್ನು ಶಾಸಕರು ವಿತರಿಸಿದರು.
ಜಿಲ್ಲಾ ಅರಣ್ಯಾಧಿಕಾರಿ ರಾಜಣ್ಣ ಮಾತನಾಡಿ, ಅರಣ್ಯ ಪ್ರದೇಶದಲ್ಲಿದ್ದ ಕಾಡು ಪ್ರಾಣಿಗಳು ನಾಡು ಪ್ರವೇಶಿಸುವುದು ಸ್ವಾಭವಿಕವಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮುನ್ನಡೆಸಿದ್ದಾರೆ. ಸಾರ್ವಜನಿಕರು ಸಂಜೆ ವೇಳೆಯಲ್ಲಿ ಮನೆಯಿಂದ ಗ್ರಾಮದ ಹೊರಭಾಗಕ್ಕೆ ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದರು.ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಿ.ಮಂಜುನಾಥ, ವಸಂತ ಕುಮಾರ್, ರಾಜೇಶ್, ಗುರುಲಿಂಗಣ್ಣ, ಕಾಂಗ್ರೆಸ್ ಮುಖಂಡರಾದ ಸೂರನಾಯಕ, ನಾಗೇಶ್‌ರೆಡ್ಡಿ, ಪಿಎಸ್‌ಐ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.