ಸಾರಾಂಶ
ಚಿಕ್ಕಮುದಿಗೆರೆ ಗ್ರಾ.ಪಂ.ಅಧ್ಯಕ್ಷರಾಗಿ ಲಕ್ಷ್ಮಮ್ಮ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಚಿಕ್ಕಮುದಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜಾನಿಗೆರೆ ಗ್ರಾಮದ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು. ಗುರುವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಕ್ಷ್ಮಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಮಂಜುನಾಥ್ ರವರು ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ನೂತನ ಅಧ್ಯಕ್ಷ ಲಕ್ಷ್ಮಮ್ಮ ಮಾತನಾಡಿ, ಶಾಸಕ ಹೆಚ್ಚಿ ಬಾಲಕೃಷ್ಣ ಹಾಗೂ ಸದಸ್ಯರೆಲ್ಲರ ಸಹಕಾರದಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಪಂಚಾಯಿತಿ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಮಾದರಿಯಾಗಿ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಶ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜು ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದ್ದರೂ ಕೂಡ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯನ್ನು ಅಧ್ಯಕ್ಷರಾಗಿ ಮಾಡುವ ಮೂಲಕ ಅಧಿಕಾರವನ್ನು ಎಲ್ಲಾ ವರ್ಗದವರಿಗೂ ಸಮಾನವಾಗಿ ಹಂಚುವ ಕೆಲಸವನ್ನು ಶಾಸಕ ಬಾಲಕೃಷ್ಣರವರ ಸಹಕಾರದಿಂದ ಮಾಡಲಾಗುತ್ತಿದ್ದು ಪಂಚಾಯಿತಿ ಅಭಿವೃದ್ಧಿಗೆ ಅಧ್ಯಕ್ಷರು ಹೆಚ್ಚಿನ ಒತ್ತನ್ನು ನೀಡಬೇಕು ನರೇಗಾ ಯೋಜನೆಯನ್ನು ಪ್ರತಿಯೊಬ್ಬ ಫಲಾನುಭವಿಗಳಿಗೂ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.ಈ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪ್ರೇಮಾವತಿ, ಸದಸ್ಯರಾದ ಕೆ.ಆರ್.ರವಿಕುಮಾರ್, ಎಸ್.ರಂಗನಾಥ್, ಗಂಗಾಧರಯ್ಯ, ಪಾರ್ವತಮ್ಮ, ಕೆ.ಆರ್.ಗಂಗರಾಜು, ಪ್ರಮೀಳಾ ರಾಜಣ್ಣ, ನರಸಮ್ಮ, ಗೋವಿಂದಯ್ಯ, ಭವ್ಯ ವೆಂಕಟೇಶ್, ಸಾವಿತ್ರಮ್ಮ ಮುಖಂಡರಾದ ಜಾಣಗೆರೆ ರವೀಶ್, ತಿಪ್ಪಸಂದ್ರ ಹರೀಶ್, ರಂಗಸ್ವಾಮಿ ಸೇರಿದಂತೆ ಕಾಂಗ್ರೆಸ್ ನ ಹಲವು ಮುಖಂಡರು ಭಾಗವಹಿಸಿದ್ದರು.