ಸಾರಾಂಶ
ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಶ್ನಿಸಿದವರಿಗೆ ಅಮಾನತಿನ ಶಿಕ್ಷೆ ನೀಡಿರುವುದು ಖಂಡನೀಯ. ಪಾಸ್ ನೀಡಿದವರು ಕಾಂಗ್ರೆಸ್ ಸಂಸದರಾಗಿದ್ದರೆ ಮತ್ತು ಸಂಸತ್ ಭವನದೊಳಗೆ ಮುಸ್ಲಿಂ ವ್ಯಕ್ತಿ ಪ್ರವೇಶಿಸಿದ್ದರೆ ಬಿಜೆಪಿ ಮಂದಿಯ ಪ್ರತಿಕ್ರಿಯೆಗಳು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಟೀಕಿಸಿದರು.
ಮಡಿಕೇರಿ: ಕೆಲ ಕಿಡಿಗೇಡಿಗಳು ಸಂಸತ್ ಭವನದೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಧ್ವನಿ ಎತ್ತಿದ 92 ಕ್ಕೂ ಅಧಿಕ ಮಂದಿ ಸಂಸದರನ್ನು ಅಮಾನತು ಮಾಡಿರುವುದು ಖಂಡನೀಯ. ಇದು ದೇಶದ ಇತಿಹಾಸದಲ್ಲೇ ಕರಾಳ ದಿನವಾಗಿದ್ದು, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೇ ಕಪ್ಪು ಚುಕ್ಕೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಶ್ನಿಸಿದವರಿಗೆ ಅಮಾನತಿನ ಶಿಕ್ಷೆ ನೀಡಿರುವುದು ಖಂಡನೀಯ. ಪಾಸ್ ನೀಡಿದವರು ಕಾಂಗ್ರೆಸ್ ಸಂಸದರಾಗಿದ್ದರೆ ಮತ್ತು ಸಂಸತ್ ಭವನದೊಳಗೆ ಮುಸ್ಲಿಂ ವ್ಯಕ್ತಿ ಪ್ರವೇಶಿಸಿದ್ದರೆ ಬಿಜೆಪಿ ಮಂದಿಯ ಪ್ರತಿಕ್ರಿಯೆಗಳು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿಗೆ ನಿಜವಾದ ನೈತಿಕತೆ ಇದ್ದರೆ ಪ್ರತಾಪ್ ಸಿಂಹರನ್ನು ಅಮಾನತು ಮಾಡಲಿ ಎಂದು ಆಗ್ರಹಿಸಿದರು. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಟಿಪ್ಪು ಹೆಸರನ್ನು ಹೇಳಿದ್ದು ಹುಬ್ಬಳ್ಳಿಯವರು ಅವರಿಗೂ ನಮಗೂ ಸಂಬಂಧ ಇಲ್ಲ. 2015 ರಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಿ ಅಂತ ನಾವು ಪತ್ರ ಬರೆದಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್ ಹಾಗೂ ಮೈಸೂರು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಪಿ.ಎಂ.ರಾಮು ಇದ್ದರು.