ಸಾರಾಂಶ
ಬೆಳಗಾವಿ : ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ರಾಜ್ಯಪಾಲರ ಹೆಸರಿನಲ್ಲಿ ಬಡಜನರಿಗೆ ನಿವೇಶನ ಹಂಚಿಕೆಗೆ ಖರೀದಿಸಲಾಗಿದ್ದ ಕೋಟ್ಯಂತರ ರು. ಮೌಲ್ಯದ ಐದೂವರೆ ಎಕರೆ ಜಮೀನನ್ನು ಪ್ರಭಾವಿ ವ್ಯಕ್ತಿಗಳು ಕಬಳಿಕೆ ಮಾಡಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಹೆಸರಿನಲ್ಲಿದ್ದ ಜಮೀನು ಭೂಗಳ್ಳರ ಪಾಲಾಗಿರುವುದು ಬೆಳಕಿಗೆ ಬಂದಿದೆ. ಬಡ ಜನರಿಗೆ ನಿವೇಶನ ಹಂಚಲು ಸರ್ಕಾರವು ಖರೀದಿಸಿದ್ದ ಜಮೀನನ್ನು ಇತ್ತೀಚೆಗೆ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಂಡು ತಿದ್ದುಪಡಿ ಮಾಡುವ ಮೂಲಕ ವಂಚನೆ ಎಸಗಲಾಗಿದೆ ಎಂದರು.
ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ 6 ಎಕರೆ ಜಮೀನನ್ನು 2002ರಲ್ಲಿ ಖರೀದಿಸಿ, ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು. ಜಮೀನನ್ನು ಬಡ ಜನರಿಗೆ ಹಂಚುವ ಉದ್ದೇಶದಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ಇದೇ ಸರ್ವೇ ನಂಬರ್ನ ಜಮೀನಿನ ಪಹಣಿ ತಿದ್ದುಪಡಿ ಸಮಯದಲ್ಲಿ, ರಾಜ್ಯಪಾಲರ ಹೆಸರಿನ 6 ಎಕರೆ ಜಮೀನಿನಲ್ಲಿ 35 ಗುಂಟೆ ಮಾತ್ರ ಉಳಿಸಿಕೊಂಡು ಉಳಿದ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದರು.
ಕಂದಾಯ ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳು ಸೇರಿಕೊಂಡು ರಾಜ್ಯಪಾಲರ ಆಸ್ತಿಯನ್ನೇ ಕಬಳಿಸಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹10 ಕೋಟಿ ಹಾನಿಯಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ. ರಾಜ್ಯಪಾಲರಿಗೆ ಮೋಸ ಮಾಡಿರುವುದಲ್ಲದೇ ಸರ್ಕಾರಕ್ಕೆಅಪಾರ ನಷ್ಟ ಉಂಟು ಮಾಡಿರುವ ಅಂದಿನ ಜಿಲ್ಲಾಧಿಕಾರಿ ನಿತೀಶ ಪಾಟೀಲ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ರಾಜ್ಯಪಾಲರು ಮತ್ತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಸರ್ಕಾರಕ್ಕೆ ₹10 ಕೋಟಿ ಹಾನಿ ಮಾಡುವುದರ ಮೂಲಕ ಸರ್ಕಾರಕ್ಕೆ ಮೋಸ ಮಾಡಿರುವ ಈ ಎಲ್ಲ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಇಲಾಖೆ ವಿಚಾರಣೆಗೆ ಆದೇಶ ಹೊರಡಿಸದೇ ಇದ್ದಲ್ಲಿ ಸರ್ಕಾರದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾಖಲಿಸಲಾಗುವುದು ಎಂದರು.