ಸಾರಾಂಶ
ಸಾಹಿತ್ಯ ಕಮ್ಮಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಮಂಜುನಾಥ್ ಅಭುಮತ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾಷೆ ಕಲಿಕೆಯ ಪ್ರಾಮುಖ್ಯತೆ ಅರಿಯಬೇಕು. ಉರ್ದು ಶಾಲಾ ಮಕ್ಕಳಿಗೆ ಮನೆ, ಶಾಲಾ ವಾತಾವರಣ ಬದಲಾಗಬೇಕು. ಅವರ ಭವಿಷ್ಯದ ದೃಷ್ಟಿಯಿಂದ ಕನ್ನಡ ಕಲಿಸುವ ಪ್ರಯತ್ನ ಆಗಬೇಕು ಎಂದು ಕಸಪಾ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಸಮಿತಿ ಸಹಯೋಗದಲ್ಲಿ ಉರ್ದು ಪ್ರೌಢಶಾಲಾ ಅಂಗಳದಲ್ಲಿ ನ.9ರಂದು ನಡೆದ ಸಾಹಿತ್ಯ ಕಮ್ಮಟ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನೆಯಲ್ಲಿ ಕನ್ನಡ ವಾಹಿನಿ ನೋಡುವ, ಮಾತನಾಡುವ ಅವಕಾಶ ಮಾಡಲು ಪೋಷಕರು ಸಹಕರಿಸಬೇಕಿದೆ ಎಂದು ಹೇಳಿದರು.
ಉಪನ್ಯಾಸಕರು ಹಾಗೂ ರಂಗಕರ್ಮಿಗಳಾದ ಡಾ.ಜಿ.ಆರ್.ಲವ ಮಾತನಾಡಿ, ಕಥೆ ಎಂದರೆ ತಾನು ಬದುಕುವ ಲೋಕದ ಮರುಸೃಷ್ಠಿಯೂ ಹೌದು. ಲೋಕದ ವ್ಯಾಖ್ಯಾನವು ಹೌದು. ಕಥೆಗಾರನಿಗೆ ಲೋಕವನ್ನು ಪ್ರಜ್ಞೆಯಿಂದ ಗ್ರಹಿಸುವ ಜ್ಞಾನಬೇಕು ಎಂದು ಹೇಳಿದರು.ಮನುಷ್ಯ ತನ್ನ ಜೀವನ ಅನುಭವಗಳೂ ಕತೆಗೆ ವಸ್ತುವಾಗಿ ಪಾತ್ರಗಳಾಗಿ, ಘಟನೆಗಳಾಗಿ, ಜೀವನಾನುಭವದೊಂದಿಗೆ ಅಭಿವ್ಯಕ್ತಿವಾಗುತ್ತದೆ. ಕಥೆಗಾರರಿಗೆ, ತಾಯಿಯೂ, ತಂದೆಯ ಗುರುಗಳೂ, ಊರ ಪರಿಸರವೋ, ಘಟನೆಯೋ, ಸಾವು, ಬದುಕಿನ ಕಷ್ಟ ಸುಖಗಳೂ ಸೇರಿದಂತೆ ಕಥೆ ಕಟ್ಟುವ ದಾರಿಯನ್ನು ಕಂಡುಕೊಳ್ಳಬಹುದು ಎಂದು ಡಾ.ಜಿ.ಆರ್.ಲವ ವಿವರಿಸಿದರು.
ಹೊಳೆಹೊನ್ನೂರು ಹೋಬಳಿ ಅಧ್ಯಕ್ಷರಾದ ಎಸ್.ಬಿ.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಅಭಿವೃದ್ಧಿ ಉಪಾಧ್ಯಕ್ಷರಾದ ಇಮ್ರಾನ್ ಖಾನ್, ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹಮ್ಜದ್ ಖಾನ್, ಪ್ರಭಾರೆ ಮುಖ್ಯ ಶಿಕ್ಷಕರಾದ ಕೈರುನ್ನಿಸಾ,ಯು.ಕೆ.ರಮೇಶ್, ಬಸವರಾಜು, ದ್ಯಾಮಪ್ಪ, ರುದ್ರೇಶ್, ರಾಜೇಶ್, ಸಂಗಪ್ಪ , ಕೃಷ್ಣಮೂರ್ತಿ ಉಪಸ್ಥಿತರಿದ್ದರು.