ಸಾರಾಂಶ
ಹಾವೇರಿ: ಇಡೀ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಮಕ್ಕಳಿಗೆ ಭಾಷಾ ಕೌಶಲ್ಯ ಬಹಳ ಮುಖ್ಯವಾಗಿದ್ದು, ಇಂಗ್ಲಿಷ್, ಜರ್ಮನ್, ಜಪಾನಿ ಹಾಗೂ ಇಟಾಲಿಯನ್ ಭಾಷೆ ಕಲಿತರೆ ಜಿಟಿಟಿಜಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಈ ದೇಶಗಳಲ್ಲಿ ಒಳ್ಳೆಯ ಅವಕಾಶಗಳಿವೆ. ಬಡ ವಿದ್ಯಾರ್ಥಿಗಳಿಗೆ ಭವಿಷ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.ತಾಲೂಕಿನ ನೆಲೋಗಲ್ಲ ಗ್ರಾಮದ ಬಳಿ ನಿರ್ಮಿಸಲಾಗಿರುವ ನೂತನ ಜಿಟಿಟಿಸಿ ತರಬೇತಿ ಸಂಕೀರ್ಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಬರುವ ದಿನಗಳಲ್ಲಿ ಎಂಜಿನಿಯರ್ ಶಿಕ್ಷಣಕ್ಕಿಂತ ಜಿಟಿಟಿಸಿ ಶಿಕ್ಷಣದಲ್ಲಿ ಹೆಚ್ಚು ಉದ್ಯೋಗವಕಾಶಗಳು ಸಿಗಲಿವೆ. ಕೈಗಾರಿಕೆಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಇಂಡಸ್ಟ್ರಿ ಲಿಂಕೇಜ್ ಸ್ಕೀಮ್ ಮಾಡಲಾಗಿದೆ. ಈ ಮೂಲಕ ಯುವ ಸಮೂಹಕ್ಕೆ ತರಬೇತಿ ನೀಡಬೇಕಿದೆ. ಕಲಿಕೆ ಜತೆಗೆ ಕೌಶಲ್ಯ ತರಬೇತಿ ಜಾರಿಗೆ ತರಲಾಗಿದ್ದು, ಹ್ಯಾಂಡ್ಸ್ ಒನ್ ಟ್ರೇನಿಂಗ್ ಮೂಲಕ ಜರ್ಮನಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಾಲ್ಕು ಭಾಷೆಗಳನ್ನು ಕಲಿತರೆ ದೇಶ, ವಿದೇಶದಲ್ಲೂ ಕೆಲಸ ಪಡೆದುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಜಿಟಿಟಿಸಿ ಕೇಂದ್ರದಲ್ಲಿ ಜರ್ಮನಿ ಭಾಷೆ ಕಲಿಕೆಯನ್ನೂ ಪ್ರಾರಂಭಿಸಲಾಗುತ್ತಿದೆ ಎಂದರು.ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಜಿಲ್ಲೆಯಲ್ಲಿ ನೂತನವಾಗಿ ಜಿಟಿಟಿಸಿ ಕೇಂದ್ರ ಆರಂಭವಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ದ್ವಿಮುಖ ರಸ್ತೆ ನಿರ್ಮಾಣ, ಬಾಲಕಿಯರ ವಸತಿನಿಲಯ, ಸುತ್ತಲೂ ಕಾಂಪೌಂಡ್, ಕ್ಯಾಂಟಿನ್ ಅವಶ್ಯಕತೆ ಇದೆ. ಮತ್ತಷ್ಟು ಅಭಿವೃದ್ಧಿ ಮಾಡುವ ಉದ್ದೇಶಕ್ಕಾಗಿ ₹30 ಕೋಟಿ ಅನುದಾನದ ಅಗತ್ಯವಿದ್ದು, ಅನುದಾನ ಕೊಡಿಸುವಂತೆ ಮನವಿ ಮಾಡಿದರು.ಬೆಂಗಳೂರು ಜಿಟಿಟಿಸಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ದಿನೇಶಕುಮಾರ ವೈ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಸ್.ಎಫ್.ಎನ್. ಗಾಜಿಗೌಡ್ರ, ಎಂ.ಎಂ. ಮೈದೂರ, ಗ್ರಾಪಂ ಅಧ್ಯಕ್ಷ ಗುದ್ಲೆಪ್ಪಶೆಟ್ರ ಕಾಳಪ್ಪನವರ, ನಿಂಗಮ್ಮ ಭರಡಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ಕಾಲೇಜಿನ ಪ್ರಾಚಾರ್ಯ ಅಶ್ವಿನಕುಮಾರ ಸೋಮಣ್ಣನವರ ಇತರರು ಇದ್ದರು.450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ನಿರ್ಮಾಣಹಿಮ್ಸ್ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಭರವಸೆ ನೀಡಿದರು. ಆಗ ಮಧ್ಯಪ್ರವೇಶಿಸಿದ ಸಂಸದ ಬಸವರಾಜ ಬೊಮ್ಮಾಯಿ, ಪ್ರಾಮಾಣಿಕ ಪ್ರಯತ್ನ ಮಾಡೋದು ಬೇಡ. ಆಸ್ಪತ್ರೆ ಮಾಡಿಕೊಡುತ್ತೇನೆ ಎಂದು ಘೋಷಿಸಿ ಎಂದು ಒತ್ತಾಯಿಸಿದರು. ಆಗ ಸಚಿವರು ನಾವು- ನೀವು ಸೇರಿ ಪ್ರಯತ್ನಿಸಿ ಆಸ್ಪತ್ರೆಗೆ ನಿರ್ಮಿಸೋಣ. ಖಂಡಿತವಾಗಿಯೂ ಇದು ಅವಶ್ಯವಾಗಿದ್ದು ಮಾಡಲಾಗುವುದು ಎಂದರು.