ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೀಗ ಭಾಷಾ ವಾರ್

| Published : Mar 23 2024, 01:01 AM IST

ಸಾರಾಂಶ

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೇ ಹಿಂದಿ ಅಥವಾ ಇಂಗ್ಲೀಷ್ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೆಗ್ಡೆ ಅವರು ಬ್ರಹ್ಮಾವರದ ಚುನಾವಣಾ ಸಭೆಯಲ್ಲಿ ಮಾತನಾಡಿ, ಪರೋಕ್ಷವಾಗಿ ಕೋಟ ಅವರಿಗೆ ಹಿಂದಿ ಅಥವಾ ಇಂಗ್ಲಿಷ್‌ ಬರುವುದಿಲ್ಲ ಎಂದು ಹೇಳಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಸಂಸದರಾದವರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ. ಹಿಂದಿ ಅಥವಾ ಇಂಗ್ಲಿಷ್ ಬರದೇ ಲೋಕಸಭೆಯಲ್ಲಿ ವ್ಯವಹಾರ ಕಷ್ಟ ಸಾಧ್ಯ. ಕಚೇರಿಗಳಲ್ಲಿ ಬಹಳ ಸಮಸ್ಯೆಯಾಗುತ್ತದೆ. ಭಾಷಾಂತರಕಾರರಿಗೆ ಅವಕಾಶ ಇರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೇ ಹಿಂದಿ ಅಥವಾ ಇಂಗ್ಲೀಷ್ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೆಗ್ಡೆ ಅವರು ಬ್ರಹ್ಮಾವರದ ಚುನಾವಣಾ ಸಭೆಯಲ್ಲಿ ಮಾತನಾಡಿ, ಪರೋಕ್ಷವಾಗಿ ಕೋಟ ಅವರಿಗೆ ಹಿಂದಿ ಅಥವಾ ಇಂಗ್ಲಿಷ್‌ ಬರುವುದಿಲ್ಲ, ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ ಎಂದು ಹೇಳಿದ್ದು, ಈ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ತಾನು ಲೋಕಸಭೆಯಲ್ಲಿ ಕನ್ನಡದಲ್ಲಿಯೇ ಪ್ರತಿಜ್ಞೆ ಸ್ವೀಕರಿಸಿದ್ದೆ. ಆದರೆ ಕನ್ನಡದಲ್ಲಿ ಭಾಷಣ ಮಾಡುತ್ತೇನೆ ಎಂದು ಹೇಳಿದೆ, ಆಗ ಅಲ್ಲಿನ ಭಾಷಾಂತರಕಾರರು, ಭಾಷಾಂತರ ಮಾಡಿದರೆ ಯಾರು ನಿಮ್ಮ ಕನ್ನಡ ಭಾಷಣವನ್ನು ಕೇಳುವುದಿಲ್ಲ, ಹಿಂದಿ ಅಥವಾ ಇಂಗ್ಲಿಷಿನಲ್ಲಿ ಮಾತನಾಡಿದರೆ ಸಂಸದರು ಕೇಳುತ್ತಾರೆ ಎಂದು ಹೇಳಿದ್ದರು ಎಂದು ಹೆಗ್ಡೆ ಹೇಳಿದ್ದಾರೆ.* 6 ತಿಂಗಳಲ್ಲಿ ಹಿಂದಿ ಕಲಿತೇನೆಹೆಗ್ಡೆ ಅವರ ಈ ಮಾತಿಗೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ, ತಾನು ಸಂಸದನಾಗಿ 6 ತಿಂಗಳಲ್ಲಿ ಹಿಂದಿ ಕಲಿತು ತೋರಿಸುತ್ತೇನೆ ಎಂದಿದ್ದಾರೆ.

ಭಾಷೆ ನಮ್ಮ ಬದುಕಿನ ಭಾಗ ಅಷ್ಟೇ, ನನ್ನ ಮಾತೃಭಾಷೆ ಕನ್ನಡ ನನಗೆ ಚೆನ್ನಾಗಿ ಬರುತ್ತದೆ. ನನಗೆ ಭಾಷೆ ತೊಡಕಾಗುತ್ತದೆ ಎಂಬ ಆತಂಕ ಮತದಾರರಿಗೆ ಬೇಡ, ಸಂಸದನಾಗಿ ಆರೇ ತಿಂಗಳಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ, ನನ್ನ ಬಗ್ಗೆ ಆತಂಕ ಇರುವ ಜಯಪ್ರಕಾಶ್ ಹೆಗ್ಡೆಯವರನ್ನೂ ಖುಷಿ ಪಡಿಸುತ್ತೇನೆ ಎಂದಿದ್ದಾರೆ.