ಯಲಬುರ್ಗಾ: ೨೦೨೬ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕರ ಅನುದಾನದಲ್ಲಿ ಪ್ರೋತ್ಸಾಹ ಪೂರಕವಾಗಿ ಲ್ಯಾಪ್‌ಟಾಪ್ ವಿತರಿಸಲಾಗುವುದು ಎಂದು ತಾಪಂ ಇಒ ನೀಲಗಂಗಾ ಬಬಲಾದ ಹೇಳಿದರು.

ಪಟ್ಟಣದ ಬಿಸಿಎಂ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯದ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ವಿಶೇಷ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ತೋರಿಸಲು ಪರೀಕ್ಷೆಗಳು ಅಪೂರ್ವ ಅವಕಾಶವಾಗಿವೆ.ಇಂತಹ ಸುವರ್ಣ ಅವಕಾಶ ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡಬೇಕು. ಪರೀಕ್ಷೆ ಎನ್ನುವುದು ಹಬ್ಬವಿದ್ದಂತೆ. ವಿದ್ಯಾರ್ಥಿಗಳು ಸಂಭ್ರಮದಿಂದ ಎದುರಿಸಬೇಕು ಎಂದರು.

ಕಷ್ಟಪಟ್ಟು ಓದುವದಕ್ಕಿಂತ ಇಷ್ಟಪಟ್ಟು ಓದುವುದು ಮುಖ್ಯ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೇ ಎಲ್ಲದಕ್ಕೂ ದಾರಿದೀಪವಾಗಿದೆ. ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗಿದೆ ಎಂದರು‌.

ತಾಲೂಕು ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಪರೀಕ್ಷಾ ಭಯ ಹೋಗಲಾಡಿಸಲು ರಾಜ್ಯಾದ್ಯಂತ ಸ್ಫೂರ್ತಿ ಸಿಂಚನ ಪ್ರೇರಣಾ ಶಿಬಿರಗಳಂತಹ ಕಾರ್ಯಾಗಾರ ಆಯೋಜಿಸುತ್ತಿದೆ. ಸಮಯ ನಿರ್ವಹಣೆ, ಪರೀಕ್ಷಾ ಪೂರ್ವಸಿದ್ಧತೆ ಮತ್ತು ವೃತ್ತಿ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸಲು ಪ್ರೇರಣೆ ನೀಡುತ್ತವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎಲ್ಲ ಪಾಠ ಹೇಗೆ ಓದಬೇಕು. ಓದಲು ಎಷ್ಟು ಸಮಯ ನಿಗದಿ ಮಾಡಬೇಕು. ರೂಪುರೇಷೆಗಳೇನು. ಓದಿದ ವಿಷಯ ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಕಷ್ಟದ ವಿಷಯಗಳಿಗೆ ಯಾವ ರೀತಿ ಸಮಯ ನಿಗದಿ ಮಾಡಬೇಕು ಎಂಬ ಬಗ್ಗೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂಬ ಬಗ್ಗೆ ಶಿಬಿರದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿದಲ್ಲಿ, ಓದಿದ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಯಾವುದೇ ಕಾರಣಕ್ಕೆ ಪರೀಕ್ಷೆ ಒತ್ತಡದಲ್ಲಿ ಓದಬಾರದು. ವಿದ್ಯಾರ್ಥಿಗಳ ಮಾನಸಿಕ ಸ್ಥಿರತೆ ಕಾಪಾಡುವುದಕ್ಕೆ ಶಿಬಿರದಲ್ಲಿ ಯೋಗ ಶಿಕ್ಷಣದ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣೀಕ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಶಿಬಿರ ಆಯೋಜಿಸಲಾಗಿದೆ ಎಂದರು.


ಬಿಸಿಎಂ ಇಲಾಖೆ ಉಪನಿರ್ದೇಶಕಿ ನಾಗವೇಣಿ, ಕುಕನೂರು ತಾಪಂ ಇಒ ಸಂತೋಷ ಪಾಟೀಲ್, ಶಿಕ್ಷಕ ಶರಣಪ್ಪ ಕುಂಬಾರ, ಆರ್‌.ಬಿ. ಅಬ್ಬಿಗೇರಿ ಸೇರಿದಂತೆ ಇತರರು ಶಿಬಿರ ಉದ್ದೇಶಿಸಿ ಮಾತನಾಡಿದರು. ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕರು ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.